ಸಾರಾಂಶ
ಕೆ.ಎಂ. ಮಂಜುನಾಥ್
ಬಳ್ಳಾರಿ: ಜಿಲ್ಲೆಯಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಬೇಕು. ಈ ಮೂಲಕ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಕೈಗೆಟುಕಬೇಕು ಎಂಬ ಕೂಗಿಗೆ ಈ ಬಾರಿಯ ಬಜೆಟ್‌ನಲ್ಲಾದರೂ ಅನುದಾನ ದೊರೆಯಬಹುದು ಎಂಬ ನಿರೀಕ್ಷೆ ಗರಿಗೆದರಿದೆ.ಬಳ್ಳಾರಿ ನಗರದಲ್ಲಿ ಈಗಾಗಲೇ ಎರಡು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ದುಬಾರಿ ಶುಲ್ಕ ನೀಡಿ ಇಲ್ಲಿ ತಾಂತ್ರಿಕ ಶಿಕ್ಷಣ ಪಡೆಯುವುದು ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಕಷ್ಟಸಾಧ್ಯವಾಗಿದೆ. ಹೀಗಾಗಿಯೇ ಬಳ್ಳಾರಿ ಜಿಲ್ಲೆಯಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಆರಂಭಿಸಬೇಕು ಎಂಬ ಕೂಗು ಈ ಹಿಂದಿನಿಂದಲೂ ಕೇಳಿ ಬರುತ್ತಲೇ ಇದೆ. ಆದರೆ, ಜನರ ಧ್ವನಿಗೆ ಸರ್ಕಾರ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ಸ್ಪಂದನೆ ಅಷ್ಟಕ್ಕಷ್ಟೇ ಎಂಬಂತಾಗಿದ್ದು, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಕನಸು ನನಸಾಗದಾಗಿದೆ.
ಬಜೆಟ್‌ನಲ್ಲಿ ಅನುದಾನ ನೀಡಲಿ: ಜಿಲ್ಲೆಯಲ್ಲಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗಿದೆ. ನಗರದಲ್ಲಿ ಮೂರು ಕಡೆ ಜಾಗ ಹುಡುಕಾಟ ನಡೆದಿದೆ. ಸೂಕ್ತ ಜಾಗ ಸಿಗುತ್ತಿದ್ದಂತೆಯೇ ಎಂಜಿನಿಯರಿಂಗ್ ಕಾಲೇಜು ಸ್ಥಾಪನಗೆ ಸಂಬಂಧ ಮುಂದಿನ ಹಂತದ ಕ್ರಮಗೆ ಮುಂದಾಗುತ್ತೇವೆ ಎಂದು ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಹೇಳಿದ್ದರು. ಆದರೆ, ಈವರೆಗೆ ಸೂಕ್ತ ಜಾಗ ಗುರುತು ಮಾಡುವ ಕೆಲಸವಾಗಿಲ್ಲ.ಈ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಕಾಲೇಜು ಸ್ಥಾಪನೆಗೆ ಅನುದಾನ ನೀಡಬೇಕು. ಆಗ ಮಾತ್ರ ಕಾಲೇಜು ಸ್ಥಾಪನೆಯ ಕಾರ್ಯ ವೇಗ ಪಡೆದುಕೊಳ್ಳಲಿದೆ ಎಂಬುದು ಈ ಭಾಗದ ಶಿಕ್ಷಣಪ್ರೇಮಿಗಳ ಒತ್ತಾಸೆಯಾಗಿದೆ.
ಈ ಹಿಂದೆ ಹೋರಾಟ ಫಲ ನೀಡಿತ್ತು: ಅವಿಭಜಿತ ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನಲ್ಲಿ ಈ ಹಿಂದೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಗೊಂಡಿದೆ. ಈ ಹಿಂದೆ ಮಾಜಿ ಸಚಿವ ದಿ. ಎಂ.ಪಿ. ಪ್ರಕಾಶ್ ಅವರ ರಾಜಕೀಯ ಇಚ್ಛಾಶಕ್ತಿಯಿಂದ ಕಾಲೇಜು ಸ್ಥಾಪನೆಗೆ ಅವಕಾಶವಾಯಿತು. ಆದರೆ, ಬಳ್ಳಾರಿ ಭಾಗದ ರಾಜಕೀಯ ನಾಯಕರು ಸರ್ಕಾರಿ ಕಾಲೇಜು ಸ್ಥಾಪನೆಯತ್ತ ಹೆಚ್ಚು ಆಸಕ್ತಿ ವಹಿಸಲಿಲ್ಲ. ಇದರಿಂದ ಖಾಸಗಿ ಕಾಲೇಜುಗಳಲ್ಲಿಯೇ ವಿದ್ಯಾಭ್ಯಾಸ ಮುಂದುವರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ದುಬಾರಿ ಶುಲ್ಕ ನೀಡದ ಶಕ್ತಿಯಿಲ್ಲದೆ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಉನ್ನತ ತಾಂತ್ರಿಕ ಶಿಕ್ಷಣದಿಂದ ವಂಚಿತರಾದರು.ಅನುದಾನದ ನಿರೀಕ್ಷೆ: ಸರ್ಕಾರ ಎಂಜಿನಿಯರಿಂಗ್ ಕಾಲೇಜಿಗೆ ಮುಂದಾಗಬೇಕು. ಬಜೆಟ್‌ನಲ್ಲಿ ಅನುದಾನ ನೀಡಬೇಕು. ಈ ಬಾರಿ ಬಜೆಟ್‌ನಲ್ಲಿ ಅನುದಾನ ದೊರೆಯುವ ನಿರೀಕ್ಷೆಯಿದೆ ಎಂದು ಕರ್ನಾಟಕ ಜನಸೈನ್ಯ ಸಂಘಟನೆಯ ಅಧ್ಯಕ್ಷ ಕೆ. ಎರಿಸ್ವಾಮಿ ತಿಳಿಸಿದರು.