ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ಬದಲಾವಣೆ ಚರ್ಚಾ ವಿಷಯಕ್ಕೆ ಸಂಬಂಧಿದಂತೆ ಪಟ್ಟಣದಲ್ಲಿ ದಲಿತ ಸಂಘರ್ಷ ಸಮಿತಿ ಅಹೋರಾತ್ರಿ ಧರಣಿ ನಡೆಸುತ್ತಿದೆ. ಇಲ್ಲಿನ ಸ್ಥಳೀಯ ಪೊಲೀಸ್ ಠಾಣೆ ಎದುರು ಧರಣಿ ಕುಳಿತಿರುವ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಸಂವಿಧಾನದ ಕುರಿತು ಅಗೌರವವಾಗಿ ನಡೆದುಕೊಂಡಿರುವ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಆಗಿದ್ದೇನು ? : ಇಲ್ಲಿಯ ಸುರಭಿ ಸಂಗಮ, ಲಯನ್ಸ್ ಕ್ಲಬ್, ರೋಟರಿ ಕ್ಲಬ್ ಸೇರಿದಂತೆ ಹಲವಾರು ಸಂಸ್ಥೆಗಳ ಆಶ್ರಯದಲ್ಲಿ ಜು ೨೬ ರ ಶುಕ್ರವಾರದಂದು ಕಾರ್ಗಿಲ್ ವಿಜಯದಿನ ಆಚರಣೆ ಹಾಗೂ ಸ್ವಾತಂತ್ರ್ಯ ಯೋಧ ಶ್ರೀ ಡಿ.ರಾಮಸ್ವಾಮಿ ಸ್ಮಾರಕ ಚರ್ಚಾ ಸ್ಪರ್ಧೆ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಸಂವಿಧಾನಕ್ಕೆ ಬದಲಾವಣೆ ಅಗತ್ಯವಿದೆಯೇ? ಎಂಬ ವಿಷಯದ ಕುರಿತು ಚರ್ಚಾ ಸ್ಪರ್ಧೆಯನ್ನು ಏರ್ಪಡಿಲಾಗಿತ್ತು. ಈ ವಿಷಯದ ಕುರಿತು ಸಂಸ್ಥೆಗಳು ಕರಪತ್ರವನ್ನು ಮುದ್ರಿಸಿ ಶಾಲಾ ಕಾಲೇಜುಗಳಿಗೆ ತಲುಪಿಸಿತ್ತು. ಇದನ್ನು ಮನಗಂಡ ತಾಲೂಕಿನ ದಲಿತಪರ ಸಂಘಟನೆಗಳು ವಿಷಯದ ಕುರಿತು ಖಂಡಿಸಿದ್ದವು. ಕೂಡಲೇ ಸಂಸ್ಥೆಯವರು ಈ ವಿಷಯವನ್ನು ಕೈಬಿಟ್ಟಿರುವುದಾಗಿ ಪ್ರಕಟಣೆಯನ್ನೂ ಸಹ ಹೊರಡಿದರು. ಆದರೂ ಸಹ ಸಮಾಜದ ಸ್ವಾಸ್ತ್ಯ ಹಾಳು ಮಾಡುತ್ತಿರುವ ಇಂತಹ ಸಂಘಟನೆಗಳ ವಿರುದ್ಧ ಹಾಗೂ ಮುಖಂಡರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸಂಘರ್ಷ ಸಮಿತಿಯ ಪದಾದಿಕಾರಿಗಳು ಸ್ಥಳೀಯ ಪೋಲಿಸ್ ಠಾಣೆಗೆ ದೂರು ಸಲ್ಲಿಸಿದ್ದರು. ಆದರೆ ಪೊಲೀಸರು ಎಫ್ ಐಆರ್ ದಾಖಲಿಸುತ್ತಿಲ್ಲ ಎಂದು ಹೇಳಿ ಧರಣಿ ಆರಂಭವಾಗಿದೆ.