ಸಾರಾಂಶ
ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಮಂಗಳವಾರ ಸಂವಿಧಾನ ದಿನವನ್ನು ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಮಂಗಳವಾರ ಸಂವಿಧಾನ ದಿನವನ್ನು ಆಚರಿಸಲಾಯಿತು.
ಈ ಸಂದರ್ಭ ‘ಸಾಂವಿಧಾನಿಕ ಮೌಲ್ಯಗಳು ಮತ್ತು ನಾಗರಿಕ ಬದುಕು’ ಬಗ್ಗೆ ಉಪನ್ಯಾಸ ನೀಡಿದ ಕೋಟೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಸುಧಾಕರ್ ದೇವಾಡಿಗ, ನಾಗರಿಕ ಬದುಕಿನ ಎಲ್ಲ ಮೌಲ್ಯಗಳನ್ನು ಸಂವಿಧಾನ ಅಂತರ್ಗತಗೊಳಿಸಿದೆ. ನಮ್ಮ ವರ್ತಮಾನ ಮತ್ತು ಭವಿಷ್ಯ ಎರಡೂ ಸಂವಿಧಾನದ ನೆಲೆಗಟ್ಟಿನಲ್ಲಿದೆ. ಕಳೆದ ೭೫ ವರ್ಷಗಳ ಸ್ವತಂತ್ರ ಭಾರತದಲ್ಲಿ ತನ್ನ ಅಸ್ತಿತ್ವ ಮತ್ತು ಪ್ರಸ್ತುತತೆಯನ್ನು ಉಳಿಸಿಕೊಂಡಿರುವುದೇ ಸಂವಿಧಾನದ ಮಹತ್ವಕ್ಕೆ ಸಾಕ್ಷಿ ಎಂದರು.ಈ ಸಂವಿಧಾನದಿಂದಾಗಿಯೇ ನಮ್ಮ ಸ್ವಾತಂತ್ರ್ಯ ಸಾಕಾರಗೊಂಡಿದೆ. ಸಂವಿಧಾನ ನಮ್ಮ ಸಮಾನತೆ, ವ್ಯಕ್ತಿ ಗೌರವ ಕಾಪಾಡಿದೆ. ಸಂವಿಧಾನವನ್ನು ಅರ್ಥೈಸಿಕೊಂಡಲ್ಲಿ ಮಾತ್ರ ಸೌಹಾರ್ದ, ಸಾಮರಸ್ಯ, ಶಾಂತಿ ಮತ್ತು ನ್ಯಾಯ ಸ್ಥಾಪನೆ ಸಾಧ್ಯ. ಆದರೆ ನಮ್ಮ ಆಡಳಿತ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ, ರಾಜಕೀಯ, ಸಾಮಾಜಿಕ ಅಪರಾಧಗಳು, ಪ್ರತ್ಯೇಕವಾದ ಇತ್ಯಾದಿ ಸಂವಿಧಾನ ಕೊಟ್ಟ ಸುಂದರ ಬದುಕಿಗೇ ಸವಾಲಾಗಿದೆ ಎಂದವರು ವಿಷಾದಿಸಿದರು.ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವ್ಕರ್, ಸಂವಿಧಾನ ಪ್ರತಿಜ್ಞಾ ವಿಧಿ ಬೋಧಿಸಿ ಸಂವಿಧಾನ ಪ್ರಜ್ಞೆಯ ಅವಶ್ಯಕತೆಯನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಐಕ್ಯುಎಸಿ ಸಂಚಾಲಕರಾದ ಡಾ. ಮೇವಿ ಮಿರಾಂದ, ಶೈಕ್ಷಣಿಕ ಸಲಹೆಗಾರ ಡಾ. ಶ್ರೀಧರ್ ಭಟ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ರಘು ನಾಯ್ಕ್, ಎಂ.ಎಸ್.ಡಬ್ಲ್ಯೂ ಮುಖ್ಯಸ್ಥರಾದ ಸುಷ್ಮಾ ಟಿ., ಬಿಸಿಎ ವಿಭಾಗ ಮುಖ್ಯಸ್ಥ ರಾಜ್‌ಕುಮಾರ್, ರಾಜಕೀಯ ಶಾಸ್ತ್ರ ಉಪನ್ಯಾಸಕಿ ಆರತಿ, ಸಮಾಜಕಾರ್ಯ ಸಹಾಯಕ ಪ್ರಾಧ್ಯಾಪಕಿ ರುಬಿಯಾ, ಇತಿಹಾಸ ಉಪನ್ಯಾಸಕ ಡಾ. ಮೋಹನ್, ಡಾ. ಮಹೇಶ್ ಕುಮಾರ್ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆಗೈದು ಸಂವಿಧಾನ ಪೀಠಿಕೆಯ ಪ್ರತಿ ವಿತರಿಸಲಾಯಿತು. ಕಾರ್ಯಕ್ರಮ ಸಂಘಟಿಸಿದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರಶಾಂತ್ ನೀಲಾವರ ಸ್ವಾಗತಿಸಿದರು. ಬಿಸಿಎ ವಿದ್ಯಾರ್ಥಿ ಧನುಶ್ ವಂದಿಸಿದರು. ಬಿಸಿಎ ವಿದ್ಯಾರ್ಥಿನಿ ರುತಿಕಾ ಕಾರ್ಯಕ್ರಮ ನಿರೂಪಿಸಿದರು.