ಸಾರಾಂಶ
ಶಿವಮೊಗ್ಗ: ಅಂಬೇಡ್ಕರ್ ಅವರ ವಿಚಾರಧಾರೆಗಳು ಮತ್ತು ಸಂವಿಧಾನದ ಆಶಯಗಳನ್ನು ಭಾವನಾತ್ಮಕ ಮಾತುಗಳಿಗೆ ಸೀಮಿತಗೊಳಿಸದೆ, ಬದ್ಧತೆಯೊಂದಿಗೆ ಅನುಷ್ಠಾನಗೊಳಿಸಬೇಕಾದ ಹೊಣೆಗಾರಿಕೆಯನ್ನು ನಾವೆಲ್ಲರೂ ನಿರ್ವಹಿಸಬೇಕು ಎಂದು ಸಾಹಿತಿ ಮತ್ತು ಚಿಂತಕ ಡಾ.ಎಂ.ಎಸ್.ಶೇಖರ್ ಕರೆ ನೀಡಿದರು.ಕುವೆಂಪು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರವು ಜ್ಞಾನಸಹ್ಯಾದ್ರಿಯ ಬಸವ ಸಭಾ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ 75ನೇ ಸಂವಿಧಾನ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ದೇಶದ ಉದ್ದಗಲಕ್ಕೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಸಂಘ ಸಂಸ್ಥೆಗಳು ಸಂವಿಧಾನ ದಿನಾಚರಣೆಯನ್ನು ಆಚರಿಸುತ್ತಿರುವುದು ಅಭಿನಂದನಾರ್ಹ. ಆದರೆ, ಇದು ಆಡಂಬರ, ಮೋಡಿಯ ಮಾತುಗಳು ಮತ್ತು ಆಚರಣೆಗಳಿಗೆ ಸೀಮಿವಾಗಿದೆ ಎಂದು ವಿಷಾದಿಸಿದರು.ವಿವಿ ಕುಲಪತಿ ಪ್ರೊ.ಶರತ್ ಅನಂತ ಮೂರ್ತಿ ಮಾತನಾಡಿ, ಸಂವಿಧಾನ ಪ್ರಜಾಪ್ರಭುತ್ವದ ಅನುಷ್ಠಾನದ ಶಾಸನಾತ್ಮಕ ಗ್ರಂಥ ಮಾತ್ರವಲ್ಲ, ಇದು ದೇಶದ ಪ್ರತಿಯೊಬ್ಬ ಪ್ರಜೆಯ ಆತ್ಮಸಾಕ್ಷಿಯನ್ನು ಕಾಪಿಟ್ಟುಕೊಂಡಿರುವ ಮೇರು ಗ್ರಂಥ. ಭಾರತೀಯ ಸಂವಿಧಾನಕ್ಕೆ ಮೂಲ ಪ್ರೇರಣೆಯಾಗಿದ್ದು, ಅಮೆರಿಕಾದ ಸಂವಿಧಾನ ಮತ್ತು ಫ್ರೆಂಚ್ ಕ್ರಾಂತಿ ಎಂದು ತಿಳಿಸಿದರು.
ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಸಮಗ್ರವಾಗಿ ಸಂವಿಧಾನ ನಮಗೆ ಕೊಡಮಾಡಿರುವ ಸಾರ್ವತ್ರಿಕ ಮೌಲ್ಯಗಳು. ಇದರ ಜೊತೆಗೆ ಸಮಾಜವಾದ ಮತ್ತು ಧರ್ಮನಿರಪೇಕ್ಷತೆ ನಮಗೆ ಮಾರ್ಗದರ್ಶಿ ಸೂತ್ರವಾಗಬೇಕು ಎಂದರು.ಕುಲಸಚಿವ ಎ.ಎಲ್.ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ.ಎಸ್.ಎಂ.ಗೋಪಿನಾಥ್, ಹಣಕಾಸು ಅಧಿಕಾರಿ ಪ್ರೊ.ಎಚ್.ಎನ್.ರಮೇಶ್, ಡಾ.ಧರ್ಮೇಗೌಡ, ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ನೆಲ್ಲಿಕಟ್ಟೆ ಸಿದ್ಧೇಶ್ ಮತ್ತಿತರಿದ್ದರು.