ಸಂವಿಧಾನ ಮಾನವೀಯ ಮೌಲ್ಯ, ಪ್ರೀತಿ, ಕರುಣೆ ಹೊಂದಿದೆ: ಪ್ರೊ. ಜಿ. ಪರಮೇಶ್ವರಪ್ಪ

| Published : Nov 28 2024, 12:34 AM IST

ಸಂವಿಧಾನ ಮಾನವೀಯ ಮೌಲ್ಯ, ಪ್ರೀತಿ, ಕರುಣೆ ಹೊಂದಿದೆ: ಪ್ರೊ. ಜಿ. ಪರಮೇಶ್ವರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

Constitution has human value, love, mercy: Prof. G. Parameshwarappa

-ಸಂವಿಧಾನ ದಿನಾಚರಣೆ, ಅಂಬೇಡ್ಕರ್ ಒಂದು ನೆನಪು ಕಾರ್ಯಕ್ರಮ

-----

ಕನ್ನಡಪ್ರಭ ವಾರ್ತೆ ಹಿರಿಯೂರು

ಬುದ್ಧನ ಚಿಂತನೆ, ಬಸವಣ್ಣನ ಸಮಾನತೆಯ ತಳಹದಿಯ ಮೇಲೆ ರಚಿತವಾದ ಅಂಬೇಡ್ಕರ್ ಅವರ ಸಂವಿಧಾನ ಮಾನವೀಯ ಮೌಲ್ಯಗಳಿಂದ ಕೂಡಿದ ಸಂವಿಧಾನ ಎಂದು ಚಿತ್ರದುರ್ಗ ಕಲಾ ಕಾಲೇಜಿನ ನಿವೃತ್ತ ಪ್ರಾಚಾರ್ಯ ಹಾಗೂ ಸಾಹಿತಿ ಪ್ರೊ. ಜಿ.ಪರಮೇಶ್ವರಪ್ಪ ಹೇಳಿದರು.

ದೇವಗಿರಿ ನಗರದ ಭಾರತ್ ರೂರಲ್ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಕಳವಿಭಾಗಿ ಶ್ರೀ ರಂಗನಾಥಸ್ವಾಮಿ ಸಕ್ಕರ ಸಾಂಸ್ಕೃತಿಕ ಕಲಾಸಂಘ ಹಾಗೂ ಭಾರತ್ ರೂರಲ್ ಕೈಗಾರಿಕಾ ತರಬೇತಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಒಂದು ನೆನಪು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಭಾವನೆಗಳನ್ನು ಎತ್ತಿಹಿಡಿದು ಅವುಗಳನ್ನು ಜೀವನದ ತತ್ವಗಳನ್ನಾಗಿ ಅಳವಡಿಸಿಕೊಂಡಲ್ಲಿ ಮಾತ್ರ ಅಂಬೇಡ್ಕರ್ ಅವರು ಕಂಡ ನಿಜವಾದ ಸಾಮಾಜಿಕ ಪ್ರಜಾಪ್ರಭುತ್ವದ ಕನಸನ್ನು ನನಸುಗೊಳಿಸಲು ಸಾಧ್ಯ. ಈ ದಿಸೆಯಲ್ಲಿ ಯುವಜನತೆ ಅಂಬೇಡ್ಕರ್ ಅವರ ಹಾದಿಯಲ್ಲಿ ಒಂದಿಷ್ಟು ದೂರ ಕ್ರಮಿಸಿದರೆ ಮಾತ್ರ ಜನತೆ ಮತ್ತು ದೇಶ ಸಮೃದ್ಧವಾಗಿರಲು ಸಾಧ್ಯ. ಮನುಸ್ಮೃತಿ ಬದಿಗಿಟ್ಟು ಅಂಬೇಡ್ಕರ್ ಅವರ ಆಶಯಗಳ ಆಧಾರದ ಮೇಲೆ ಆಡಳಿತ ಮತ್ತು ಜೀವನ ನಡೆಸುವ ಸಂಕಲ್ಪ ತೊಟ್ಟಾಗ ಮಾತ್ರ ದೇಶದಲ್ಲಿ ಒಗ್ಗಟ್ಟು ಮೂಡಲು ಸಾಧ್ಯ. ಭಾರತದ ಸಂವಿಧಾನವು ಮಾನವೀಯ ಮೌಲ್ಯಗಳಿಂದ ಕೂಡಿದ್ದು ಪ್ರೀತಿ, ಕರುಣೆ, ಮಾನವೀಯತೆ ಒಳಗೊಂಡಿದೆ. ಶೋಷಣೆ, ದಾರಿದ್ರ್ಯ, ಅಸಮಾನತೆ ನಿವಾರಿಸಲು ಇದು ಉತ್ತಮವಾದ ಮಾರ್ಗವಾಗಿದೆ ಎಂದರು.

ಸಾಮಾಜಿಕ ಕಾರ್ಯಕರ್ತ ಚಮನ್‍ಷರೀಫ್ ಮಾತನಾಡಿ, ಅಂಬೇಡ್ಕರ್ ಅವರು ವಿಶ್ವದ 70 ರಾಷ್ಟ್ರಗಳ ಸಂವಿಧಾನವನ್ನು ಅಧ್ಯಯನ ಮಾಡಿ ಜೀವಪರ, ಮಾನವಪರ ಮತ್ತು ಮನುಷ್ಯತ್ವಪರ ಇರುವ ಸಂವಿಧಾನವನ್ನು ನೀಡಿ ವ್ಯಕ್ತಿ ಗೌರವ, ದೇಶದ ಏಕತೆ, ಸಹೋದರತೆಯ ಭಾವವನ್ನು ಬೆಳೆಸಿ ಸಮಗ್ರತೆಯ ಭಾರತವನ್ನು ಕಟ್ಟಿದರು. ಮಹಿಳೆಯರಿಗೆ ಮತದಾನ ಹಕ್ಕು ನೀಡಿ ರಾಜಕೀಯವಾಗಿ ಸಬಲೀಕರಣಗೊಳ್ಳಲು ಕಾರಣರಾದರು. ಹಿಂದುಳಿದ ವರ್ಗದವರಿಗೆ, ದಲಿತರಿಗೆ, ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಿ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿ ಹೊಂದಲು ಅವರು ಕೊಟ್ಟ ಸಂವಿಧಾನ ಕಾರಣ ಎಂದರು.

ಎಸ್.ಜಿ.ರಂಗಸ್ವಾಮಿ ಸಕ್ಕರ ಮಾತನಾಡಿ, ಭೂಮಿ, ಶಿಕ್ಷಣ, ನೀರು ರಾಷ್ಟ್ರೀಕರಣವಾಗಬೇಕು, ಇದು ದೇಶದ ಪ್ರತಿಯೊಬ್ಬರಿಗೂ ಸಮಾನವಾಗಿ ಹಂಚಿಕೆಯಾಗಬೇಕು ಎಂಬುದು ಅಂಬೇಡ್ಕರ್‌ ಅವರ ಆಶಯವಾಗಿತ್ತು. ಆದರೆ, ಸಂವಿಧಾನ ಸಮರ್ಪಣೆ ಮಾಡಿ ಇಂದಿಗೆ 75 ವರ್ಷ ಕಳೆದರೂ ಅವರ ಆಶಯ ಹಾಗೆ ಉಳಿದಿವೆ. ಹಸಿವು, ಶೋಷಣೆ, ಅಸಮಾನತೆ, ಅಸ್ಪೃಶ್ಯತೆ ಇಲ್ಲದೆ ಸಮಾನವಾದ ಸಮಾಜ ಕಟ್ಟುವುದೇ ಅವರ ಗುರಿಯಾಗಿತ್ತು. ಆದಕಾರಣ 1925 ರ ಚೌಡರ್ ಕೆರೆಯ ಹೋರಾಟದಿಂದ ಸ್ವಾತಂತ್ರ್ಯ ನಂತರದ ದಿನದವರೆಗೂ ಸಾಮಾಜಿಕ ಹೋರಾಟ ನಡೆಸಿದರು. ವಿಶ್ವದ ಜ್ಞಾನಿಗಳಲ್ಲಿ ಅಂಬೇಡ್ಕರ್‌ ಅವರು ಮೊದಲಿಗರಾಗಿದ್ದು ಅವರ ಬದುಕು, ಸಾಧನೆ, ಯುವಜನತೆಗೆ ಸ್ಫೂರ್ತಿಯಾಗಬೇಕು ಎಂದರು.

ಈ ಸಂದರ್ಭದಲ್ಲಿ ಭಾರತ್ ರೂರಲ್ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಂಶುಪಾಲ ಎಂ.ರಮೇಶ್, ಕಿರಿಯ ತರಬೇತುದಾರ ಸೈಯದ್ ಅಹಮದ್, ಅನಿತ.ಜೆ, ರಂಗಸ್ವಾಮಿ, ಶಿವಕುಮಾರ್, ಸಿದ್ದೇಶ್, ಜೀಲಾನಿ, ರಂಗನಾಥ್, ಮಂಜುನಾಥ್ ಇದ್ದರು.

------

ಫೋಟೊ: ದೇವಗಿರಿ ನಗರದ ಭಾರತ್ ರೂರಲ್ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಒಂದು ನೆನಪು ಕಾರ್ಯಕ್ರಮವನ್ನು ಸಾಹಿತಿ ಪರಮೇಶ್ವರಪ್ಪ ಉದ್ಘಾಟಿಸಿದರು.