ಸಂವಿಧಾನ ಅಪಾಯದಲ್ಲಿದೆ: ಡಾ.ನಿರಂಜನಾರಾಧ್ಯ

| Published : Apr 19 2024, 01:06 AM IST

ಸಾರಾಂಶ

ರಾಮನಗರ: ಸ್ವಾತಂತ್ರ್ಯ ಚಳವಳಿಯ ತ್ಯಾಗ ಬಲಿದಾನದ ಮೂಲಕ ನವಭಾರತವನ್ನು ಕಟ್ಟಿಕೊಳ್ಳಲು ಡಾ. ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ರಚನೆಯಾದ ಜಗತ್ತಿನ ಶ್ರೇಷ್ಠ ಸಂವಿಧಾನ ಇಂದು ಬಹುದೊಡ್ಡ ಅಪಾಯದಲ್ಲಿದೆ. ಈ ಲೋಕಸಭಾ ಚುನಾವಣೆ ಮೂಲಕ ಅದನ್ನು ರಕ್ಷಿಸಿಕೊಳ್ಳುವ ಕೆಲಸ ಮತದಾರರು ಮಾಡಬೇಕು ಎಂದು ಸಂವಿಧಾನ ರಕ್ಷಣಾ ವೇದಿಕೆ ಪ್ರಧಾನ ಸಂಚಾಲಕ ಡಾ.ವಿ.ಪಿ.ನಿರಂಜನಾರಾಧ್ಯ ತಿಳಿಸಿದರು.

ರಾಮನಗರ: ಸ್ವಾತಂತ್ರ್ಯ ಚಳವಳಿಯ ತ್ಯಾಗ ಬಲಿದಾನದ ಮೂಲಕ ನವಭಾರತವನ್ನು ಕಟ್ಟಿಕೊಳ್ಳಲು ಡಾ. ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ರಚನೆಯಾದ ಜಗತ್ತಿನ ಶ್ರೇಷ್ಠ ಸಂವಿಧಾನ ಇಂದು ಬಹುದೊಡ್ಡ ಅಪಾಯದಲ್ಲಿದೆ. ಈ ಲೋಕಸಭಾ ಚುನಾವಣೆ ಮೂಲಕ ಅದನ್ನು ರಕ್ಷಿಸಿಕೊಳ್ಳುವ ಕೆಲಸ ಮತದಾರರು ಮಾಡಬೇಕು ಎಂದು ಸಂವಿಧಾನ ರಕ್ಷಣಾ ವೇದಿಕೆ ಪ್ರಧಾನ ಸಂಚಾಲಕ ಡಾ.ವಿ.ಪಿ.ನಿರಂಜನಾರಾಧ್ಯ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಿಂದ ಸಂವಿಧಾನ ಹಾಗೂ ಸಾಂವಿಧಾನಿಕ ಮೌಲ್ಯಗಳ ಮೇಲೆ ನಿರಂತರ ದಾಳಿಯಾಗುತ್ತಿದೆ. ಸಂವಿಧಾನ ವಿರೋಧಿ ಶಕ್ತಿಗಳು ಸಂವಿಧಾನವನ್ನು ಬುಡಮೇಲು ಮಾಡುವ ದುಷ್ಕೃತ್ಯವನ್ನು ನಿರಂತರ ಮತ್ತು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಕೆಲವರ ಪುಂಡಾಟಿಕೆಯಂತು ಮಿತಿಮೀರಿದ್ದು ಸಂವಿಧಾನವನ್ನೇ ಬದಲಾಯಿಸುವ ಉದ್ಧಟತನದ ಮಾತುಗಳನ್ನಾಡುತ್ತಿದ್ದಾರೆ ಎಂದು ಟೀಕಿದರು.

ಸಂವಿಧಾನವನ್ನು ಗೌಣಗೊಳಿಸುವ ಹಾಗೂ ಅಸ್ಥಿರಗೊಳಿಸುವ ಅನೇಕ ಕಾರ್ಯಗಳನ್ನು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಎನ್ ಡಿಎ ಮೈತ್ರಿಕೂಟ ತನ್ನ ನೀತಿ, ಕಾನೂನು ಮತ್ತು ಕಾರ್ಯಕ್ರಮಗಳ ಜಾರಿಯಲ್ಲಿ ಅನುಸರಿಸಿದೆ. ಸಂವಿಧಾನದಲ್ಲಿನ ಶಿಕ್ಷಣದ ಮೂಲ ಹಕ್ಕಿನ ಭಾಗವಾಗಿ ದೇಶದ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಒದಗಿಸಲು ರೂಪಿಸಿ ಜಾರಿಗೊಳಿಸಿದ್ದ ಶಿಕ್ಷಣ ಹಕ್ಕು ಕಾಯಿದೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಹೆಸರಿನಲ್ಲಿ ಶಿಕ್ಷಣದ ಸಂಪೂರ್ಣ ಕೇಸರೀಕರಣ, ಕೋಮುವಾದೀಕರಣ, ಕೇಂದ್ರೀಕರಣ, ಖಾಸಗೀಕರಣ, ವಾಣಿಜ್ಯೀಕರಣ ಮತ್ತು ಕಾರ್ಪೊರೇಟರೀಕರಣ ಮಾಡಲಾಗುತ್ತಿದೆ ಎಂದರು.

ಬೆಲೆ ಏರಿಕೆ ಹಾಗೂ ಆರ್ಥಿಕ ಸಂಕಷ್ಟದಿಂದ ಜನರ ಗೌರವಯುತ ಬದುಕನ್ನು ಕಸಿಯಲಾಗಿದೆ. ನಿರುದ್ಯೋಗದ ಸಮಸ್ಯೆ ಯುವಜನರ ಜೀವನವನ್ನು ದುರ್ಬರಗೊಳಿಸಿದೆ. ರಾಜ್ಯ ನೀತಿಯ ನಿರ್ದೇಶಕ ತತ್ವಗಳ ಅಡಿಯಲ್ಲಿ ಸಮುದಾಯ ಮತ್ತು ಸಾರ್ವಜನಿಕ ಒಳಿತಿಗಾಗಿ ರಕ್ಷಿಸಬೇಕಾದ ಎಲ್ಲಾ ಸಾರ್ವಜನಿಕ ಆಸ್ತಿ ಮತ್ತು ಸಂಪನ್ಮೂಲಗಳನ್ನು ಸಂಪೂರ್ಣವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ದೇಶದಲ್ಲಿ ಧರ್ಮಾಂಧತೆಯ ಕೋಮುವಾದವನ್ನು ಹರಡುವ ಮತ್ತು ಸುಳ್ಳಿನ ಮೂಲಕ ದ್ವೇಷ ಬಿತ್ತುವುದನ್ನೇ ಎಲ್ಲರ ವಿಕಸವೆಂದು ಬಿಂಬಿಸುವ ಮೂಲಕ ದೇಶದ ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಸಂವಿಧಾನದ ಮೂಲ ಆಶಯವಾದ ಬಹುತ್ವ, ಬಹುಸಂಸ್ಕೃತಿ, ಬಹುಭಾಷೆ ಮತ್ತು ಶಾಂತಿಯುತ ಸಹಬಾಳ್ವೆಯನ್ನು ಹತ್ತಿಕ್ಕುವ ಧಾರ್ಮಿಕ ಮತಾಂಧತೆಯ ಪೊಳ್ಳು ರಾಷ್ಟ್ರೀಯವಾದದ ಮೂಲಕ ಹಿಂದೂ ರಾಷ್ಟ್ರ ನಿರ್ಮಾಣದ ಸಂವಿಧಾನ ವಿರೋಧಿ ರಾಷ್ಟ್ರೀಯತೆಯನ್ನು ಪ್ರತಿಪಾದಿಸಲಾಗುತ್ತಿದೆ ಎಂದು ನಿರಂಜನಾರಾಧ್ಯ ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷೆ ಬಿ.ಅನಸೂಯಮ್ಮ ಮಾತನಾಡಿ, ದೇಶದಲ್ಲಿ ಬೆಂಬಲ ಬೆಲೆ ಕಾನೂನಾತ್ಮಕವಾಗಿ ಆಗಬೇಕು. ಮೂರು ಕಾಯಿದೆಗಳನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಳ್ಳಬೇಕು. ರೈತರ ಮೇಲೆ ದಬ್ಬಾಳಿಕೆ, ದೌರ್ಜನ್ಯ ಮಾಡದೆ ಅವರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿಸಂವಿಧಾನ ರಕ್ಷಣಾ ವೇದಿಕೆ ಸಂಚಾಲಕ ಬಸವರಾಜ ಗುರಿಕಾರ, ಜೀತ ವಿಮೋಚನಾ ಕರ್ನಾಟಕ ಸಂಘಟನೆಯ ಸಂಚಾಲಕ ಪಿ.ಜೆ. ಗೋವಿಂದರಾಜು, ಕರ್ನಾಟಕ ರಾಜ್ಯ ಎಸ್‌ಡಿಎಂಸಿ ಸಮನ್ವಯ ವೇದಿಕೆಯ ರಾಜ್ಯಾಧ್ಯಕ್ಷ ಉಮೇಶ್ ಜಿ.ಗಂಗವಾಡಿ ಇದ್ದರು.18ಕೆಆರ್ ಎಂಎನ್‌ 3.ಜೆಪಿಜಿ

ಸಂವಿಧಾನ ರಕ್ಷಣಾ ವೇದಿಕೆ ಪ್ರಧಾನ ಸಂಚಾಲಕ ಡಾ.ವಿ.ಪಿ. ನಿರಂಜನಾರಾಧ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.