ಸಂವಿಧಾನ ಎಲ್ಲರಿಗೂ ತಾಯಿ ಇದ್ದಂತೆ

| Published : Feb 06 2024, 01:34 AM IST

ಸಾರಾಂಶ

ಡಾ.ಅಂಬೇಡ್ಕರರು ಕೊಟ್ಟ ಸಂವಿಧಾನದಿಂದ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಾನ ಅವಕಾಶಗಳಿವೆ .

ಕನ್ನಡಪ್ರಭ ವಾರ್ತೆ ಹುಕ್ಕೇರಿಅಂಬೇಡ್ಕರ ಅವರು ಬರೆದಿರುವ ಸಂವಿಧಾನ ನಮಗೆ ತಾಯಿ ಇದ್ದಂತೆ. ತಾಯಿಗಿಂತ ದೊಡ್ಡವರು ವಿಶ್ವದಲ್ಲೇ ಇಲ್ಲ. ಇಡೀ ಜಗತ್ತಿಗೆ ಮಾದರಿ ಭಾರತದ ಸಂವಿಧಾನ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎ.ಮಾಹುತ ಹೇಳಿದರು. 75ನೇ ವರ್ಷದ ಗಣರಾಜ್ಯೋತ್ಸವ ಅಂಗವಾಗಿ ಸಾರ್ವಜನಿಕರಲ್ಲಿ ಸಂವಿಧಾನದ ಮಹತ್ವ ತಿಳಿಸಿ ಜಾಗೃತಿ ಮೂಡಿಸುವ ಸಲುವಾಗಿ ಸರ್ಕಾರ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹುಕ್ಕೇರಿ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಭಾನುವಾರ ಸಂವಿಧಾನ ಜಾಗೃತಿ ಜಾಥಾ, ಸ್ತಬ್ದ ಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಈ ವೇಳೆ ಅವರು ಮಾತನಾಡಿದರು.ಬಿಇಒ ಪ್ರಭಾವತಿ ಪಾಟೀಲ ಮಾತನಾಡಿ, ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಜಾಗೃತಿ ಜಾಥಾ ಸಂಚರಿಸಿ ಸಂವಿಧಾನ ಮಹತ್ವ ಹಾಗೂ ಮೌಲ್ಯಗಳ ಕುರಿತು ಜಾಗೃತಿ ಮೂಡಿಸುವುದು, ರಾಷ್ಟ್ರೀಯ ಏಕತೆ ಎತ್ತಿ ಹಿಡಿಯುವ ಉದ್ದೇಶ ಹೊಂದಲಾಗಿದೆ ಎಂದರು. ಪಿಡಿಒ ಸಂತೋಷ ಕಬ್ಬಗೋಳ ಮಾತನಾಡಿ, ಡಾ.ಅಂಬೇಡ್ಕರರು ಕೊಟ್ಟ ಸಂವಿಧಾನದಿಂದ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಾನ ಅವಕಾಶಗಳಿವೆ ಎಂದರು.ತಾಲೂಕಿನ ಗುಡಸ, ಹುಲ್ಲೋಳಿ, ಸಾರಾಪುರ, ಬೆಲ್ಲದ ಬಾಗೇವಾಡಿ, ಬೆಳವಿ, ಯಾದಗೂಡ ಮತ್ತಿತರ ಕಡೆಗಳಲ್ಲಿ ಜಾಥಾ ರಥವನ್ನು ಪೂರ್ಣಕುಂಭ ಹೊತ್ತ ಮಹಿಳೆಯರು ಸ್ವಾಗತ ಕೋರಿದರು. ಶಾಲಾ ಮಕ್ಕಳು ಘೋಷಣೆಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿ ದೇಶದ ಸಂವಿಧಾನ ಬಗ್ಗೆ ಮಾಹಿತಿ ನೀಡಿದರು. ಕಿವಿಗಡಚಿಕ್ಕುವ ತಮಟೆ, ಡೊಳ್ಳು ವಾದನಕ್ಕೆ ಯುವಕರು ಹೆಜ್ಜೆ ಹಾಕಿದರು. ಬೊಂಬೆ ಕುಣಿತ, ಕಹಳೆ ವಾದಕರು ಮೆರವಣಿಗೆಗೆ ಮತ್ತಷ್ಟು ಮೆರಗು ತಂದರು. ಆಶಾ-ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಿದರು. ಗ್ರಾಪಂ ಅಧ್ಯಕ್ಷ ಸಯ್ಯದ ಅಮ್ಮಣಗಿ ರಥಕ್ಕೆ ಪೂಜೆ ಸಲ್ಲಿಸಿದರು. ಉಪಾಧ್ಯಕ್ಷೆ ವೀಣಾ ಹುಂಜಿ, ಸದಸ್ಯ ಯಲ್ಲಪ್ಪ ಡಪ್ಪರಿ, ಪುಟ್ಟು ಚೌಗಲಾ, ಮಂಜು ಪಡದಾರ, ಸಿದ್ದಪ್ಪ ಪೂಜೇರಿ, ಜಿನ್ನಪ್ಪಾ ಬೆಳವಿ, ಪುಂಡಲೀಕ ಹಾಲಟ್ಟಿ, ಗ್ರಾಮ ಆಡಳಿತಾಧಿಕಾರಿ ರವಿ ಹುಡೇದ, ಸಿಆರ್‌ಪಿ ಜಗದೀಶ ಮಿರಗಿ, ಶಿಕ್ಷಕ ಎಂ.ಬಿ.ದಡ್ಡಿ, ಎಸ್.ಎ.ಸೌದಾಗರ, ಎಸ್‌ಎಸ್.ಮಠದ, ಪಿ.ಕೆ.ಕಾಮತ, ಮಾರುತಿ ಕಾಂಬಳೆ, ಮುಖಂಡ ರವಿ ಕಾಂಬಳೆ, ಕಪೀಲ ಕಾಂಬಳೆ, ಗ್ರಾಪಂ ಸಿಬ್ಬಂದಿ ಯಲ್ಲಪ್ಪಾ ಕಾಂಬಳೆ, ಈರಣ್ಣಾ ಬಾಗೇವಾಡಿ ಮತ್ತಿತರರು ಇದ್ದರು. ಮುಖ್ಯ ಶಿಕ್ಷಕ ಎಸ್.ಟಿ.ಮನ್ನಿಕೇರಿ ಸ್ವಾಗತಿಸಿದರು. ಶಿಕ್ಷಕಿ ಎಸ್.ಜಿ.ತುಪ್ಪದ ನಿರೂಪಿಸಿದರು. ಶಿಕ್ಷಕಿ ಕೆ.ಕೆ.ಮೊಖಾಶಿ ವಂದಿಸಿದರು.