ಸಾರಾಂಶ
Constitution is the reason for unity and progress of India
-ಅಮೃತಾಪುರದಲ್ಲಿ ''''ನನ್ನ ಸಂವಿಧಾನ ನನ್ನ ಸ್ವಾಭಿಮಾನ'''' ಭಾರತ ಸಂವಿಧಾನ ದಿನಾಚರಣೆ
------ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಭಾರತ ದೇಶದ ಸಂವಿಧಾನ ಪ್ರಪಂಚದಲ್ಲಿಯೇ ಅತಿದೊಡ್ಡ ಲಿಖಿತ ಸಂವಿಧಾನ. ಸಂವಿಧಾನ ಭಾರತದಂತ ಬೃಹತ್ ವಿಸ್ತಾರವುಳ್ಳ ಹತ್ತಾರು ಧರ್ಮ, ಸಾವಿರಾರು ಜಾತಿ, ಭಾಷೆ, ಸಂಸ್ಕೃತಿ ಆಚರಣೆಗಳುಳ್ಳ ಜನರನ್ನು ಒಗ್ಗೂಡಿಸಿಕೊಂಡು ದೇಶದ ಸರ್ವಾಂಗೀಣ ಪ್ರಗತಿ ಸಾಧಿಸಲು ಕಾರಣವಾಗಿದೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಹಶಿಕ್ಷಕ ಹೊಳಲ್ಕೆರೆ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ಪಿ.ಉಮೇಶ್ ಹೇಳಿದರು.ಹೊಳಲ್ಕೆರೆ ತಾಲೂಕು ಅಮೃತಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಂವಿಧಾನ ದಿನಾಚರಣೆ ಭಾಗವಾಗಿ ನನ್ನ ಸಂವಿಧಾನ ನನ್ನ ಸ್ವಾಭಿಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ. ಬಾಬು ರಾಜೇಂದ್ರ ಪ್ರಸಾದ್ ಅವರು ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾದರೆ ಡಾ.ಬಿ.ಆರ್.ಅಂಬೇಡ್ಕರ್ ಕರಡು ಸಮಿತಿ ಅಧ್ಯಕ್ಷರಾದರು. ಎರಡು ವರ್ಷ ಹನ್ನೊಂದು ತಿಂಗಳು ಹದಿನೇಳು ದಿನಗಳ ಕಾಲ ಬಹುಮುಖ ಆಯಾಮದಲ್ಲಿ ಅಧ್ಯಯನದಿಂದ ಸಂವಿಧಾನ ಕರಡು ರಚಿತವಾಯಿತು. ಸಂವಿಧಾನವನ್ನು 1950 ರ ಜನವರಿ 26 ರಿಂದ ಜಾರಿಗೆ ತರಲಾಯಿತು. ಇಂದಿಗೆ ಸಂವಿಧಾನ ರಚಿತಗೊಂಡು ಎಪ್ಪತ್ತೈದು ವರ್ಷಗಳಾದವು. ನವೆಂಬರ್ 26 ರಂದು ಸಂವಿಧಾನ ದಿನವಾಗಿ ಆಚರಿಸಲು ಸಂಕಲ್ಪ ಮಾಡಿತು. ನಮ್ಮ ಸ್ವಾಭಿಮಾನದ ಸಂಕೇತ ಸಾರ್ವಭೌಮ ರಾಷ್ಟ್ರದ ಹೆಗ್ಗುರುತು ಎಂದು ತಿಳಿಸಿದರು.ಶಾಲಾ ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆ ಭಾಗವನ್ನು ಸಾಮೂಹಿಕವಾಗಿ ಓದಿ ಹೇಳಲಾಯಿತು. ವಿದ್ಯಾರ್ಥಿಗಳಾದ ಕು.ಆರ್.ದೀಕ್ಷಾ, ಎನ್.ಲಕ್ಷ್ಮಿದೇವಿ, ಸಿ.ದೀಕ್ಷಾ, ತರುಣ, ಕೆ.ಉಷ ಸಂವಿಧಾನದ ಪೀಠಿಕೆ ಹಾಗೂ ಹಕ್ಕು ಕರ್ತವ್ಯಗಳ ಕುರಿತು ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಡಿ.ಸಿದ್ಧಪ್ಪ, ರೇಷ್ಮಾ ಜಿ.ಎನ್. ಅಡಿಗೆ ಸಹಾಯಕರಾದ ತಿಮ್ಮಮ್ಮ, ಶಾರದಮ್ಮ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.----
ಫೋಟೊ: 26 ಹೆಚ್ ಎಲ್ ಕೆ 2ಹೊಳಲ್ಕೆರೆ ತಾಲೂಕು ಅಮೃತಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಹಶಿಕ್ಷಕ ಟಿ.ಪಿ.ಉಮೇಶ್ ಮಾತನಾಡಿದರು.