ಭಾರತ ದೇಶದಲ್ಲಿ ಅನಾದಿ ಕಾಲದಿಂದಲೂ ವೇದ, ಉಪನಿಷತ್ತುಗಳಿದ್ದರೂ ಕಾಲಕಾಲಕ್ಕೆ ಅವುಗಳು ನವೀಕರಣಗೊಂಡು ಇದೀಗ ಸಂವಿಧಾನವೇ ಭಾರತದ ಧರ್ಮಗ್ರಂಥವಾಗಿದೆ ಎಂದು ಮೈಸೂರು ರಾಜವಂಶಸ್ಥ ಹಾಗೂ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.
ಚಿತ್ರದುರ್ಗ: ಭಾರತ ದೇಶದಲ್ಲಿ ಅನಾದಿ ಕಾಲದಿಂದಲೂ ವೇದ, ಉಪನಿಷತ್ತುಗಳಿದ್ದರೂ ಕಾಲಕಾಲಕ್ಕೆ ಅವುಗಳು ನವೀಕರಣಗೊಂಡು ಇದೀಗ ಸಂವಿಧಾನವೇ ಭಾರತದ ಧರ್ಮಗ್ರಂಥವಾಗಿದೆ ಎಂದು ಮೈಸೂರು ರಾಜವಂಶಸ್ಥ ಹಾಗೂ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು. ಚಿತ್ರದುರ್ಗ ಹೊರವಲಯದ ಶ್ರೀ ಮಾದಾರ ಚೆನ್ನಯ್ಯ ಗುರುಪೀಠದಲ್ಲಿ ಮಂಗಳವಾರ ಆಯೋಜಿಸಿದ್ದ ಕುಲದೇವತೆ ಮಾತಂಗೇಶ್ವರಿ ದೇಗುಲದ ಶಂಕುಸ್ಥಾಪನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದಲಿತ ಹಿಂದುಳಿದ ವರ್ಗಗಳಿಗೆ ಅನ್ಯಾಯವಾದಾಗ ಅಂತಹ ಅನ್ಯಾಯಗಳನ್ನು ಸರಿಪಡಿಸಲು ಮದ್ರಾಸ್ ಪ್ರಾಂತ್ಯದಲ್ಲಿ ಮುಂದಾದಾಂತೆ ಕರ್ನಾಟಕದ ಮೈಸೂರು ಸಂಸ್ಥಾನ ಸ್ಪಂದಿಸಿ ಮೀಸಲಾತಿ ಕಲ್ಪಿಸಿತ್ತು. ಮೀಸಲಾತಿ ವ್ಯವಸ್ಥೆಯಿಂದ ಸಾಕಷ್ಟು ಲಾಭವಾಗಿದೆ ಎಂದರು. ಪ್ರಾಚೀನ ಕಾಲದ ಭಾರತದಲ್ಲಿ ದೇವಸ್ಥಾನಗಳು ಚಟುವಟಿಕೆಯ ಕೇಂದ್ರಗಳಾಗಿದ್ದವು. ಇದೀಗ ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠ ತನ್ನ ಪರಂಪರೆಯನ್ನು ಮುಂದುವರಿಸುತ್ತಿರುವುದು ಸಂತಸ ತಂದಿದೆ ಎಂದು ಬಣ್ಣಿಸಿದರು. ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ಮಾತಂಗಿ ಎಂದರೆ ಸರಸ್ವತಿ, ಪಾರ್ವತಿ. ಇಂತಹ ಆರಾಧನಾ ಮಂದಿರ ನಿರ್ಮಾಣಕ್ಕೆ ಮಾದಾರ ಗುರುಪೀಠ ಮುಂದಾಗಿದ್ದು, ಸಮಾಜದ ಎಲ್ಲರೂ ಕೈಜೋಡಿಸಬೇಕಿದೆ ಎಂದರು.ಒಳಮೀಸಲಾತಿಯ ಅರ್ಥವೇ ಗೊತ್ತಿಲ್ಲದ ರಾಜಕಾರಣಿಗಳ ಕೈಯಲ್ಲಿ ನಾವಿದ್ದೇವೆ. ಸಂವಿಧಾನದಲ್ಲಿ ಒಳಮೀಸಲಾತಿಗೆ ಎಲ್ಲಾ ಅವಕಾಶಗಳು ಇದ್ದರೂ ನ್ಯಾಯಾಲಯದ ಮೆಟ್ಟಿಲು ಹತ್ತುವಂತೆ ಮಾಡಿದರು ಎಂದು ಆಕ್ರೋಶ ಹೊರಹಾಕಿದರು. ಮಠದಿಂದ ನೂತನವಾಗಿ ಹೊರತರಲಾಗಿರುವ ಶರಣರ ಚೆನ್ನುಡಿ ಮಾಸ ಪತ್ರಿಕೆ ಬಿಡಗಡೆಗೊಳಿಸಿ ಮಾತನಾಡಿದ ಸಚಿವ ಕೆ.ಎಚ್.ಮುನಿಯಪ್ಪ, ನಮ್ಮ ಸಮಾಜದ ಕುಲದೇವತೆಯ ದೇಗುಲ ನಿರ್ಮಾಣಕ್ಕೆ ವೈಯಕ್ತಿಕವಾಗಿ ಹತ್ತು ಲಕ್ಷ ರು. ಕೊಡುವುದಾಗಿ ಘೋಷಿಸಿದರು. ಸಮಾಜದ ಇನ್ನಿತರರೂ ಇಂತಹ ಕಾರ್ಯಕ್ಕೆ ಸ್ಪಂದಿಸಬೇಕು. ಸಮುದಾಯ ಅಭಿವೃದ್ಧಿ ವಿಚಾರ ಬಂದಾಗ ಎಲ್ಲಾ ರಾಜಕಾರಣಿಗಳು ಪಕ್ಷಾತೀತವಾಗಿ ಒಂದಾಗಬೇಕು. ಆಗ ಮಾತ್ರ ಸಮುದಾಯ ಬಲಿಷ್ಠವಾಗಲಿದೆ ಎಂದರು.ಮಾದಾರ ಚೆನ್ನಯ್ಯ ಸೇವಾ ಸಮಿತಿ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಹಿಂದಿನ ಕಾಲದ ದಿನಗಳಲ್ಲಿ ಇದ್ದಂತಹ ಸ್ಥಿತಿ ಇಲ್ಲ. ಈಗ ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಸಮಾಜವನ್ನು ಸಂಘಟಿಸಲು ಮಾದಾರ ಚೆನ್ನಯ್ಯ ಸ್ವಾಮೀಜಿ ತುಂಬಾ ಶ್ರಮಿಸುತ್ತಿದ್ದಾರೆ. ಸಾದರು-ಮಾದರು ಅಣ್ಣತಮ್ಮಂದಿರಿದ್ದಂತೆ ಎಂದು ಬಣ್ಣಿಸಿದರು. ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮಾತನಾಡಿ, ಭಾರತೀಯ ಸಮಾಜದ ಜಾತಿ ವ್ಯವಸ್ಥೆಯನ್ನು ಹೊಗಲಾಡಿಸಲು ಬಸವಣ್ಣ ಅವಿರತ ಶ್ರಮಿಸಿದವರು. ಅದೇ ರೀತಿ ಅಂಬೇಡ್ಕರ್ ಅವರೂ ಜಾತಿಯತೆ ತೊಡೆದು ಹಾಕಲು ಶ್ರಮಿಸಿದ್ದಾರೆ. ಮಾದಾರ ಚೆನ್ನಯ್ಯನ ಮನೆಯ ಮಗ ನಾನು ಎಂದು ಬಸವಣ್ಣ ಹೇಳಿದ್ದರು ಎಂದು ತಿಳಿಸಿದರು. ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ನಮಗೆ ಜಾಗ ಕೊಟ್ಟು ಬೆಳೆಸಿದ್ದು ಮುರುಘಾ ಮಠ. ಈ ಮಠವೂ ಅದೇ ಪರಂಪರೆಯಲ್ಲಿ ಮುಂದುವರಿಯಬೇಕು. ಆರಂಭದಲ್ಲಿ ಆದಿಚುಂಚನಗಿರಿ ಮಠದಿಂದ ಐವತ್ತು ಲಕ್ಷ ರು. ಕೊಟ್ಟು ನಮಗೆ ಮಾರ್ಗದರ್ಶನ ಮಾಡಿದ್ದಾರೆ. ಮಠಗಳು ಸಮುದಾಯದ ರಾಜಕಾರಣಿಗಳನ್ನು ತಯಾರು ಮಾಡುವ ಕಾರ್ಖಾನೆಗಳು ಆಗಬೇಕು ಎಂಬ ಅಭಿಪ್ರಾಯ ಹೊಂದಿದ್ದ ಆದಿಚುಂಚನಗಿರಿ ಶ್ರೀಗಳು ನಮ್ಮ ಮಠಕ್ಕೆ ಬೆಂಬಲವಾಗಿ ನಿಂತಿದ್ದರು ಎಂದು ಸ್ಮರಿಸಿದರು. ಸಮಾಜದಲ್ಲಿ ಜಾತಿ ತಾರತಮ್ಯ ಇದ್ದರೂ ನಾವೆಲ್ಲಾ ಅದನ್ನು ಮೀರಿದ್ದೇವೆ. ಮಠಾಧೀಶರುಗಳಲ್ಲಿ ಆ ಭಾವನೆ ಇಲ್ಲ. ಒಂದೇ ತಟ್ಟೆಯಲ್ಲಿ ಊಟ ಮಾಡುತ್ತೇವೆ. ದಲಿತ ಹಿಂದುಳಿದ ಮಠಾಧೀಶರುಗಳಲ್ಲಿ ಒಡಕು ಮೂಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು. ಹಂಪಿಯ ಹೇಮಕೂಟದ ಪೂರ್ಣಾನಂದ ಭಾರತೀ ಸ್ವಾಮೀಜಿ, ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಆದಿಜಾಂಬವ ಕೋಡಿಹಳ್ಳಿ ಮಹಾಸಂಸ್ಥಾನ ಮಠದ ಹಿರಿಯೂರು ಶಾಖಾಮಠದ ಷಡಕ್ಷರಿಮುನಿ ಸ್ವಾಮೀಜಿ, ಐಮಂಗಲ ಹರಳಯ್ಯ ಗುರುಪೀಠದ ಬಸವ ಹರಳಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮತ್ತಿತರರು ಮಾತನಾಡಿದರು.
ಮಾಜಿ ಸಚಿವ ಕೋಟೆ ಶಿವಣ್ಣ, ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಬಿಜೆಪಿ ಮುಖಂಡ ಉಮೇಶ್ ಕಾರಜೊಳ, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು ಕೆಳಗೋಟೆ, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಅನಿತ್ ಕುಮಾರ್ ಸೇರಿದಂತೆ ಸಮಾಜದ ಮುಖಂಡರು ವೇದಿಕೆ ಮೇಲಿದ್ದರು. ಶರಣರ ಚೆನ್ನುಡಿ ಪತ್ರಿಕೆ ನೂತನ ಕಚೇರಿಯ ವಿಪ ಸದಸ್ಯ ನವೀನ್ ಉದ್ಘಾಟಿಸಿದರು. ಸ್ವಾಮೀಜಿ ಪೂರ್ವಾಶ್ರಮದಗುರುಗಳಿಗೆ ಗುರುವಂದನೆ
ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರ ಪೂರ್ವಾಶ್ರಮದ ಪ್ರಾಥಮಿಕ, ಪ್ರೌಢಶಿಕ್ಷಣ ಪಡೆದ ಗುರುಗಳಿಗೆ ಕಾರ್ಯಕ್ರಮದಲ್ಲಿ ಗುರುವಂದನೆ ನಡೆಸಲಾಯಿತು.ನಿವೃತ್ತ ಶಿಕ್ಷಕರಾದ ಟಿ.ಬಸವರಾಜಪ್ಪ, ಮಸ್ರತ್ ನಾಜ್ ಬೇಗಂ, ಡಿ.ಟಿ.ವೆಂಕಟೇಶರೆಡ್ಡಿ, ಎಚ್.ಎಸ್. ಲಲಿತಮ್ಮ, ಬಸವರಾಜಪ್ಪ, ಎ.ಆರ್.ಶಿವಮೂರ್ತಿ ಅವರುಗಳನ್ನು ಶ್ರೀಗಳು ಸನ್ಮಾನಿಸಿದರು.