ಬಿಜೆಪಿಗರಿಗೆ ಬೈಬಲ್‌ ರೀತಿ ಕಾಣುವ ಸಂವಿಧಾನ: ಲಾಡ್‌

| Published : Jun 25 2024, 12:37 AM IST

ಸಾರಾಂಶ

ನರೇಂದ್ರ ಮೋದಿ ಅವರು ಮಾಡಿದ ಜನವಿರೋಧಿ ಕಾರ್ಯಗಳ ಬಗ್ಗೆ ಬಿಜೆಪಿ ಮುಖಂಡರು ಮಾತನಾಡುವುದಿಲ್ಲ. ನೀಟ್ ಬಗ್ಗೆ ಮಾತನಾಡುತ್ತಾರಾ? ಈ ಪರೀಕ್ಷೆ ಬರೆದ 25 ಲಕ್ಷ ವಿದ್ಯಾರ್ಥಿಗಳ‌ ಪರಿಸ್ಥಿತಿ ಏನಾಗಿದೆ?.

ಧಾರವಾಡ:

ರಾಹುಲ್‌ ಗಾಂಧಿ ಅವರು ಕೈಯಲ್ಲಿ ಸಂವಿಧಾನ ಹಿಡಿದರೂ ಬಿಜೆಪಿ ಮಂದಿಗೆ ಅದು ಬೈಬಲ್‌ ರೀತಿ ಕಾಣುತ್ತದೆ. ಅವರು ಕಣ್ಣು ಪರೀಕ್ಷೆಗೆ ಒಳಪಡಿಸಬೇಕೆಂದು ಶಾಸಕ ಅರವಿಂದ ಬೆಲ್ಲದ ಅವರಿಗೆ ಸಚಿವ ಸಂತೋಷ ಲಾಡ್‌ ತಿರುಗೇಟು ನೀಡಿದ್ದಾರೆ.

ರಾಹುಲ್‌ ಗಾಂಧಿ ಹಿಡಿದ ಪುಸ್ತಕ ಬೈಬಲ್ ಎಂದು ಹೇಳಿಕೆ ನೀಡಿದ್ದ ವಿಪಕ್ಷ‌ ಉಪನಾಯಕ ಅರವಿಂದ ಬೆಲ್ಲದ ಹೇಳಿಕೆ ವಿಚಾರವಾಗಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಹುಲ್‌ ಗಾಂಧಿ ಯಾವತ್ತೂ ಸಂವಿಧಾನ ಪುಸ್ತಕ ಹಿಡಿದಿರುತ್ತಾರೆ. ಅಂತಹ ಪುಸ್ತಕ ಬೆಲ್ಲದ ಅವರಿಗೆ ಬೈಬಲ್ ರೀತಿ ಕಾಣುತ್ತದೆ ಎಂದರೆ ಏನು ಹೇಳಬೇಕು. ಅವರು ಮೊದಲು ಕಣ್ಣು ಪರೀಕ್ಷೆ ಮಾಡಿಸಿಕೊಳ್ಳಲಿ ಎಂದು ಸಲಹೆ ನೀಡಿದರು.ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದ ದಿನವನ್ನು ವಿರೋಧಿ ದಿನ ಎಂದು ಬಿಜೆಪಿ ಕಾರ್ಯಕ್ರಮ ಮಾಡುತ್ತಿದ್ದು, ಅವರಿಗೆ ಬಿಟ್ಟಿದ್ದು. ಆದರೆ, ನರೇಂದ್ರ ಮೋದಿ ಅವರು ಮಾಡಿದ ಜನವಿರೋಧಿ ಕಾರ್ಯಗಳ ಬಗ್ಗೆ ಬಿಜೆಪಿ ಮುಖಂಡರು ಮಾತನಾಡುವುದಿಲ್ಲ. ನೀಟ್ ಬಗ್ಗೆ ಮಾತನಾಡುತ್ತಾರಾ? ಈ ಪರೀಕ್ಷೆ ಬರೆದ 25 ಲಕ್ಷ ವಿದ್ಯಾರ್ಥಿಗಳ‌ ಪರಿಸ್ಥಿತಿ ಏನಾಗಿದೆ? ಅದರ ಜತೆ ಎಲೆಕ್ಷನ್ ಬಾಂಡ್ ಬಗ್ಗೆಯೂ ಯಾರೂ ಮಾತನಾಡುತ್ತಿಲ್ಲ. ಇದನ್ನು ಬಿಟ್ಟು ಸಂವಿಧಾನ ಪುಸ್ತಕವನ್ನು ಬೈಬಲ್‌ ಎನ್ನುವುದು ತಿಳಿಯುತ್ತದೆ ಎಂದರು.

ಆಗಸ್ಟ್‌ ತಿಂಗಳಲ್ಲಿ ಬೇಡ್ತಿ ನಾಲಾ ಉದ್ಘಾಟನೆ ಸಾಧ್ಯತೆ:

ಕಲಘಟಗಿ ತಾಲೂಕಿನ ಬೆಲವಂತರ ಗ್ರಾಮದ ಹತ್ತಿರ ಹೊಸದಾಗಿ ನಿರ್ಮಿಸಲಾಗುತ್ತಿರುವ ಕೆರೆ ತುಂಬಿಸುವ ನೀರಾವರಿ ಯೋಜನೆ (ಬೇಡ್ತಿ ನಾಲಾ) ಕಾಮಗಾರಿ ಆಗಸ್ಟ್‌ ತಿಂಗಳಲ್ಲಿ ಮುಗಿಯಲಿದ್ದು ಮುಖ್ಯಮಂತ್ರಿಗಳಿಂದ ಉದ್ಘಾಟನೆ ಮಾಡಿಸುವುದಾಗಿ ಸಚಿವ ಸಂತೋಷ ಲಾಡ್‌ ಹೇಳಿದರು. ಸೋಮವಾರ ಬೇಡ್ತಿ ನಾಲಾ ಕಾಮಗಾರಿ ವೀಕ್ಷಿಸಿದ ಸಚಿವರು, ಈಗಾಗಲೇ ಕಾಮಗಾರಿ ಒಂದು ಹಂತದಲ್ಲಿ ಮುಕ್ತಾಯವಾಗಿದ್ದು, ಆಗಸ್ಟ್‌ ತಿಂಗಳಲ್ಲಿ ಉದ್ಘಾಟನೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದರು.ಈ ವೇಳೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ರೈತರು ಹಾಗೂ ಮುಖಂಡರು ಇದ್ದರು.