ಸಾರಾಂಶ
-ಶಿವಮೊಗ್ಗದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕಿಡಿ । ಡಿ.ಕೆ.ಶಿವಕುಮಾರ್ ವಿರುದ್ಧ ಪ್ರತಿಭಟನೆ ಮಾಡುವ ನೈತಿಕತೆ ಬಿಜೆಪಿಗೆ ಇದ್ಯಾ?
-------ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸಂವಿಧಾನದ ಬದಲಾವಣೆ ಆರ್‌ಎಸ್ಎಸ್ ಮತ್ತು ಅದರ ಸಹಚರ ಪಕ್ಷವಾದ ಬಿಜೆಪಿಯದ್ದೇ ಹೊರತೂ ಕಾಂಗ್ರೆಸ್ಸಿನದಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಉಪಮುಖ್ಯಮಂತ್ರಿ, ಡಿ.ಕೆ. ಶಿವಕುಮಾರ್ ಅವರ ಮಾತಿನ ಒಂದು ಎಳೆಯನ್ನು ಇಟ್ಟುಕೊಂಡು ತೀರ್ಥಹಳ್ಳಿ ಸೇರಿದಂತೆ ಅನೇಕ ಕಡೆ ಬಿಜೆಪಿಯವರು ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಅವರಿಗೆ ಯಾವ ನೈತಿಕತೆ ಇದೆ? ಅಷ್ಟಕ್ಕೂ ಡಿ.ಕೆ. ಶಿವಕುಮಾರ್ ಅವರು ಸಂವಿಧಾನ ಬದಲಾವಣೆ ಮಾಡುತ್ತೇನೆ ಎಂದೇನು ಹೇಳಿಲ್ಲ. ಹಾಗೆ ಹೇಳಿದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. ಆದರೂ ಇಂತಹದೊಂದು ಸಣ್ಣ ಎಳೆಯನ್ನಿಟ್ಟುಕೊಂಡು ಬಿಜೆಪಿಯವರು ಇದನ್ನು ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಕುಟುಕಿದರು.
ಬಿಜೆಪಿಯ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಸಂವಿಧಾನದ ಬಗ್ಗೆ ಅರಿವೂ ಇಲ್ಲ. ಅವರು ಮೊದಲು ಆರ್‌ಎಸ್‌ಎಸ್‌ನ ‘ಚಿಂತನಾಗಂಗಾ’ ಪುಸ್ತಕವನ್ನು ಓದಲಿ, ಆಮೇಲೆ ಮಾತನಾಡಲಿ. ಚಿಂತನಾಗಂಗಾ ಪುಸ್ತಕರ ಪುಟ ಸಂಖ್ಯೆ 271ರಲ್ಲಿ ಅವರು ಸ್ಪಷ್ಟವಾಗಿ ಬರೆದಿದ್ದಾರೆ. ರಾಜ್ಯಗಳ ಅಸ್ತಿತ್ವಗಳನ್ನೇ ಅಳಿಸಬೇಕು. ಒಂದು ದೇಶ, ಒಂದು ರಾಜ್ಯ, ಒಂದು ಶಾಸಕಾಂಗ ಒಂದು ಕಾರ್ಯಾಂಗ ಎಂದು ಘೋಷಿಸಬೇಕು. ಏಕಾತ್ಮಕ ಸರ್ಕಾರದ ಪದ್ಧತಿಯನ್ನು ಸ್ಥಾಪಿಸುವಂತೆ ಸಂವಿಧಾನವನ್ನು ಪುನಃ ಬರೆದಿಡೋಣ ಎಂದಿದ್ದಾರೆ. ರಾಜ್ಯಗಳ ಅಸ್ತಿತ್ವವನ್ನೇ ಕಸಿದುಕೊಂಡಿರುವ ಸಂವಿಧಾನ ಬದಲಾಯಿಸಬೇಕೆಂಬ ಮಾತುಗಳನ್ನು ಬಿಜೆಪಿಯವರೇ ಆಡುತ್ತಿರುವಾಗ ಡಿ.ಕೆ.ಶಿವಕುಮಾರ್ ಅವರ ಪ್ರತಿಕೃತಿ ದಹನ ಮಾಡುವುದಲ್ಲ, ಚಿಂತನಾಗಂಗಾದಂತ ಪುಸ್ತಕಗಳು ಮತ್ತು ಅದರ ಹಿಂದಿರುವ ಮನಸ್ಸುಗಳ ಪ್ರತಿಕೃತಿ ದಹಿಸಬೇಕು ಎಂದು ಖಾರವಾಗಿ ಹೇಳಿದರು.ಅದೇ ಪುಸ್ತಕದಲ್ಲಿ ಸಂಸ್ಕೃತ ಭಾಷೆಯನ್ನೇ ರಾಷ್ಟ್ರ ಭಾಷೆಯನ್ನಾಗಿ ಮಾಡಬೇಕು. ಅಲ್ಲಿಯವರೆಗೆ ನಾವು ಹಿಂದಿ ಭಾಷೆಗೆ ಆದ್ಯತೆ ಕೊಡಬೇಕು ಎಂದು ಕೂಡ ಹೇಳಿದ್ದಾರೆ. ಹೀಗೆ ಚಿಂತನಾಗಂಗಾ ಪುಸ್ತಕದಲ್ಲಾಗಲೀ, ಮನುಸ್ಮೃತಿಯ ಗ್ರಂಥದಲ್ಲಾಗಲೀ ಎಲ್ಲೂ ಕೂಡ ಅಸಮಾನತೆಯನ್ನು ಹೋಗಲಾಡಿಸುವ ಒಂದೇ ಒಂದು ವಾಕ್ಯ ಕೂಡ ಇಲ್ಲ. ಸಮ ಸಮಾಜದ ಕಲ್ಪನೆಯೂ ಇಲ್ಲ. ಶೂದ್ರರಿಗೆ ಪ್ರತ್ಯೇಕ ಸ್ಥಾನವನ್ನೇ ಅವರ ಕೃತಿ ಮತ್ತು ಕಾರ್ಯಗಳಲ್ಲಿ ಕಂಡು ಬರುತ್ತಿರುವಾಗ ಅವರು ಸಂವಿಧಾನವನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂದು ಲೇವಡಿ ಮಾಡಿದರು.
ಬಿಜೆಪಿಯವರಿಗೆ ರಾಷ್ಟ್ರೀಯತೆಯೆ ಕಲ್ಪನೆಯೇ ಬೇರೆ ರೀತಿ ಇದೆ. ಆರ್‌ಎಸ್‌ಎಸ್ ಕಚೇರಿ ಮೇಲೆ ರಾಷ್ಟ್ರಧ್ವಜವನ್ನೇ ಹಾರಿಸದ ಇವರು. ಹಿಂದೂ ಧರ್ಮವನ್ನು ಉಳಿಸಬೇಕು ಎಂಬುದು ನಮ್ಮೆಲ್ಲರ ಆಸೆ. ಧರ್ಮವನ್ನು ರಸ್ತೆ ಮೇಲೆ ತೆಗೆದುಕೊಂಡು ಹೋಗಬೇಕಾದ ಅಗತ್ಯವಿಲ್ಲ. ಮನೆ, ಮನಗಳಲ್ಲಿ ಆಚರಿಸಿದರೆ ಸಾಕು, ಬಿಜೆಪಿಯನ್ನು ನಾವು ವ್ಯಕ್ತಿಗತವಾಗಿ ವಿರೋಧಿಸುತ್ತಿಲ್ಲ. ಅವರ ಸಿದ್ಧಾಂತಗಳನ್ನು ವಿರೋಧಿಸುತ್ತೇವೆ ಎಂದರು.ಪ್ರಧಾನಿ ಮೋದಿ ಅವರೂ ಕೂಡ ಆರ್‌ಎಸ್‌ಎಸ್ ಹೇಳಿದ ಹಾಗೆಯೇ ಕೇಳಬೇಕಾಗಿದೆ. ಒಂದು ವೇಳೆ ಅವರು ಹೇಳಿದ ಹಾಗೆ ಕೇಳಿಲ್ಲ ಎಂದರೆ ತಮ್ಮ ಸ್ಥಾನದಲ್ಲಿ ಮುಂದುವರೆಯಲು ಸಾಧ್ಯವೇ ಇಲ್ಲ. ಒಮ್ಮೆ ಚಿಂತನಾಗಂಗಾ ಪುಸ್ತಕದ ಬಗ್ಗೆ ವಿರೋಧವಾಗಿ ಹೇಳಿದರೂ ಅವರು ಪ್ರಧಾನಿಯ ಪಟ್ಟವನ್ನೇ ಕಳೆದುಕೊಳ್ಳುವುದು ಖಚಿತ. ಮೋದಿಯವರ ಸ್ವಿಚ್ ನಾಗಪುರದಲ್ಲಿದೆ ಎಂದು ವ್ಯಂಗ್ಯವಾಡಿದರು.
ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಪ್ರಮುಖರಾದ ಕಲಗೋಡು ರತ್ನಾಕರ್, ಹುಂಚನಕಟ್ಟೆ ಆದರ್ಶ, ಮೊದಲಾವರಿದ್ದರು.--------------------
....ಬಾಕ್ಸ್... ಸಂವಿಧಾನ ಬದಲಾವಣೆ, ಮೋದಿ ಕೂಡ ಮಾತನಾಡಿದ್ರು: ಕಿಮ್ಮನೆ ರತ್ನಾಕರ್ಪ್ರಧಾನಿ ಮೋದಿ, ಈ ಹಿಂದೆ ಗುಜರಾತ್ ನಲ್ಲಿ ಸಂವಿಧಾನ ಬದಲಾವಣೆ ಮಾಡಬೇಕು ಎಂದಿದ್ದರು. ಆಗ ರಾಜ್ಯದ ವಿಜಯೇಂದ್ರ, ಆರಗ ಜ್ಞಾನೇಂದ್ರ ಅವರಾಗಲೀ, ಆರ್. ಅಶೋಕ ಆಗಲೀ ಎಲ್ಲಿ ಹೋಗಿದ್ದರು ಎಂದು ಕಿಮ್ಮನೆ ರತ್ನಾಕರ್ ಪ್ರಶ್ನಿಸಿದರು.
ಯಾವುದೇ ಕಾರಣಕ್ಕೂ ಸಂವಿಧಾನದ ಮೂಲ ಆಶಯಗಳಿಗೆ ತಿದ್ದುಪಡಿ ಮಾಡಬಾರದು ಎಂದಿದ್ದರೂ ಅನಂತ್ ಕುಮಾರ್ ಹೆಗಡೆಯವರು ಸಂವಿಧಾನ ಬದಲಾವಣೆ ಮಾಡಲು ನಾವು ಸಿದ್ಧ ಎಂದಿದ್ದರು. ಆಗ ಈ ಬಿಜೆಪಿಯವರು ಏನು ಮಾಡುತ್ತಿದ್ದರು ಎಂದು ಕುಟುಕಿದರು.ಆರ್‌ಎಸ್‌ಎಸ್ ಮತ್ತು ಬಿಜೆಪಿ ಪರಿವಾರದವರು 1925ರಿಂದ ಇಂದಿನತನಕ ಅಸಮಾನತೆಯ ವಿರುದ್ಧ ಎಲ್ಲಿಯಾದರೂ ಹೋರಾಟ ಮಾಡಿದ್ದಾರಾ? ಅವರದೇ ಆದ ಪುಸ್ತಕಗಳಾದ ಚಿಂತನಗಂಗಾ ಮತ್ತಿತರ ಪುಸ್ತಕಗಳಲ್ಲಿ ಶ್ರೇಣೀಕೃತ ಸಮಾಜದ ವಿರುದ್ಧ ಹೋರಾಟ ಮಾಡಿದ್ದಾರಾ? ಹಿಂದೂ ಧರ್ಮ ಎಂದರೆ ಎಲ್ಲಾ ಧರ್ಮಗಳನ್ನು ಪ್ರೀತಿಸುವುದು ಎಂದು ಅರ್ಥ. ಮುಸ್ಲಿಂ ಮತ್ತು ಕ್ರಿಶ್ಚಿಯನ್ನರನ್ನು ತೆಗಳುವುದೇ ಹಿಂದೂ ಧರ್ಮವಲ್ಲ, ಹಿಂದೂ ಧರ್ಮದ ಒಳಗಿರುವ ಅಸಮಾನತೆ ಮತ್ತು ಮೌಢ್ಯಗಳ ಬಗ್ಗೆ ಡಾ. ಹೆಡಗೇವಾರ್, ಗೋಳ್ವಲ್ಕರ್ ಅವರಾಗಲೀ ಯಾವ ಚಳವಳಿಗಳನ್ನು ರೂಪಿಸಿದ್ದಾರೆ ಎಂದು ಪ್ರಶ್ನಿಸಿದ ಅವರು, ಅಂಬೇಡ್ಕರ್ ಹಿಂದೂ ಧರ್ಮವನ್ನು ಬಿಟ್ಟಿದ್ದು ಹಿಂದೂ ಧರ್ಮದ ಒಳಗಿರುವ ಅಸಮಾನತೆಯಿಂದ ಎಂದರು.
----------------ಪೋಟೋ: 28ಎಸ್ಎಂಜಿಕೆಪಿ02
ಶಿವಮೊಗ್ಗ ಪತ್ರಿಕಾಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿದರು.