ನರೇಗಾದಡಿ ಗುಣಮಟ್ಟದ ಕಟ್ಟಡ ನಿರ್ಮಿಸಿ: ಶಾಸಕ ಕೆ.ನೇಮರಾಜ್‌ ನಾಯ್ಕ

| Published : Oct 27 2024, 02:44 AM IST

ಸಾರಾಂಶ

ಯಾವುದೇ ಗ್ರಾಪಂ ಕಟ್ಟಡಗಳಿಗೆ ಡಣಾಯಕನಕೆರೆ ಗ್ರಾಪಂ ಕಟ್ಟಡವು ಗುಣಮಟ್ಟದ ಮಾದರಿ ಕಟ್ಟಡವಾಗಿದೆ.

ಮರಿಯಮ್ಮನಹಳ್ಳಿ: ಉದ್ಯೋಗ ಖಾತ್ರಿ ಯೋಜನೆಯಡಿ ಗುಣಮಟ್ಟದ ಕಟ್ಟಡವನ್ನು ನಿರ್ಮಿಸಲು ಸಾಧ್ಯವಿದೆ ಎನ್ನುವುದಕ್ಕೆ ಡಣಾಣಯಕನಕೆರೆ ಗ್ರಾಪಂ ನೂತನ ಕಟ್ಟಡವೇ ಸಾಕ್ಷಿಯಾಗಿದೆ. ಇದು ಇತರೆ ಗ್ರಾಪಂಗಳಿಗೆ ಮಾದರಿ ಕಟ್ಟಡವಾಗಿದೆ ಎಂದು ಶಾಸಕ ಕೆ. ನೇಮರಾಜ್‌ ನಾಯ್ಕ ಹೇಳಿದರು.

ಸಮೀಪದ ಡಣಾಯಕನಕೆರೆ ಗ್ರಾಮದಲ್ಲಿ ₹35 ಲಕ್ಷ ವೆಚ್ಚದಲ್ಲಿ ಉದೋಗ್ಯ ಖಾತ್ರಿ ಯೋಜನೆಯಡಿ ನಿರ್ಮಾಣವಾದ ನೂತನ ಗ್ರಾಪಂ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಎಲ್ಲೆಲ್ಲಿ ನೂತನವಾಗಿ ನಿರ್ಮಾಣವಾಗುವಂತಹ ಯಾವುದೇ ಗ್ರಾಪಂ ಕಟ್ಟಡಗಳಿಗೆ ಡಣಾಯಕನಕೆರೆ ಗ್ರಾಪಂ ಕಟ್ಟಡವು ಗುಣಮಟ್ಟದ ಮಾದರಿ ಕಟ್ಟಡವಾಗಿದೆ. ಇದೇ ಮಾದರಿನಲ್ಲಿ ಇತರೆ ಗ್ರಾಪಂಗಳ ಕಟ್ಟಡಗಳನ್ನು ನಿರ್ಮಿಸಲು ಜಿಪಂ ಸಿಇಒಗೆ ಸೂಚಿಸಲಾಗುತ್ತದೆ ಎಂದರು.

₹4-5 ಕೋಟಿ ವೆಚ್ಚದಲ್ಲಿ ಡಣಾಯಕನಕೆರೆ ಕಾಲುವೆಗಳ ದುರಸ್ತಿ ಕಾಮಗಾರಿ ಆದಷ್ಟು ಶೀಘ್ರದಲ್ಲೇ ಚಾಲನೆ ನೀಡಲಾಗುವುದು. ಕೆರೆಯ ಕೊನೆಯ ಭಾಗದ ರೈತರಿಗೆ ಕೆರೆ ನೀರು ತಲಪದೇ ರೈತರಿಗೆ ಸಮಸ್ಯೆಯಾಗಿರುವುದರಿಂದ ಕೆರೆಯ ಕಾಲುವೆಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

ಗುಂಡಾ, ನಾಗಲಾಪುರ ರಸ್ತೆಗೆ ಸುಮಾರು ₹2.5 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗುತ್ತಿದೆ. ಗೊಲ್ಲರಹಳ್ಳಿಯಿಂದ ಗರಗ ರಸ್ತೆ ಸೇರಿದಂತೆ ಈ ಭಾಗದ ಎಲ್ಲ ಹಳ್ಳಿಗಳಲ್ಲಿ ₹50 ಲಕ್ಷ ಸಿಸಿ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದರು.

ಮರಿಯಮ್ಮನಹಳ್ಳಿ ಭಾಗದ ಮುಖ್ಯರಸ್ತೆಗಳನ್ನು ₹145 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ. ಕೆಎಂಆರ್‌ಸಿ, ಜಿಎಂಎಫ್‌ ಯೋಜನೆಯಲ್ಲಿ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಟೆಂಡರ್‌ ಪ್ರಕ್ರಿಯೆ ನಡೆಯಲಿದೆ. ಟೆಂಡರ್‌ ನಂತರ ಶೀಘ್ರದಲ್ಲೇ ರಸ್ತೆಗಳನ್ನು ನಿರ್ಮಿಸಲಾಗುವುದು ಎಂದರು.

ಪಕ್ಷತೀತವಾಗಿ ಮತ್ತು ಜಾತ್ಯಾತೀತವಾಗಿ ಗ್ರಾಮಗಳನ್ನು ಅಭಿವೃದ್ಧಿಯನ್ನು ನಡೆಸಲಾಗುವುದು. ನಾನು ಮರಿಯಮ್ಮನಹಳ್ಳಿಯಲ್ಲಿ ಹುಟ್ಟಿ ಬೆಳದವನಾಗಿದ್ದೇನೆ. ನನ್ನನ್ನು ಬೆಳಸಿದವರು ಸಹ ಈ ಭಾಗದ ಜನರು, ಅತಿ ಹೆಚ್ಚು ಅಭಿವೃದ್ಧಿಯನ್ನು ಈ ಬಾರಿ ಮರಿಯಮ್ಮನಹಳ್ಳಿ ಭಾಗಕ್ಕೆ ಹಮ್ಮಿಕೊಂಡಿದ್ದೇನೆ. ಇತೀ ರೀತಿಯಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕಿನ ಎಲ್ಲ ಹಳ್ಳಿಗಳಿಗೂ ₹50 ಲಕ್ಷ ಮತ್ತು ಕೊಟ್ಟೂರಿನ ಕೆಲ ಹಳ್ಳಿಗಳಿಗೂ ₹50 ಲಕ್ಷ ಅನುದಾನವನ್ನು ನೀಡಲಾಗುತ್ತಿದೆ. ನನ್ನ ತವರು ಊರು ಮರಿಯಮ್ಮನಹಳ್ಳಿಯಾಗಿರು ವುದರಿಂದ ಮತ್ತು ಕ್ಷೇತ್ರದ ಈಶಾನ್ಯ ಭಾಗವಾಗಿರುವುದರಿಂದ ಇಲ್ಲಿಂದಲೇ ಕಾಮಗಾರಿಯನ್ನು ಮೊದಲು ಆರಂಭಿಸಿಕೊಂಡು ನಂತರ ಕ್ಷೇತ್ರದಲ್ಲಿ ಅಭಿವೃದ್ದಿಯನ್ನು ಪಡೆಸಲಾಗುವುದು ಎಂದು ಅವರು ಹೇಳಿದರು.

ಡಣಾಯಕನಕೆರೆ ಗ್ರಾಪಂ ಅಧ್ಯಕ್ಷ ಕೆ.ಚಿನ್ನಾಪ್ರಪ್ಪ, ಉಪಾಧ್ಯಕ್ಷೆ ಎಲ್‌. ನೇತ್ರ ಸೂರ್ಯಪ್ರಕಾಶ್‌, ಸದಸ್ಯರಾದ ಎಚ್‌. ನಾಗಪ್ಪ, ಎ.ಲಕ್ಷ್ಮೀದೇವಿ, ಪಿ.ಅಕ್ಕಮಹಾದೇವಿ, ಪಿ. ಸೋಮಪ್ಪ, ಎಚ್‌.ಹನುಮಂತ, ಶಶಿಕಲಾ, ವಸಂತಕುಮಾರಿ, ಯು. ಸೋಮಪ್ಪ, ಲಕ್ಷ್ಮೀದೇವಿ, ಕೆ. ರಮೇಶಪ್ಪ, ಎಚ್‌.ರೇಣುಕಾ, ಯು.ವೆಂಕಟೇಶ್‌, ಎಚ್‌.ಜ್ಯೋತಿ, ಎಂ. ಫಕ್ಕೀರಪ್ಪ, ಸಾವಿತ್ರಮ್ಮ, ಕೆ.ರೂಪ, ತಾಪಂ ಇಒ ಲಕ್ಷ್ಮೀಕಾಂತ್‌, ಪಿಡಿಒ ಎಂ.ಜಿಲಾನ್‌ ಸಾಹೇಬ್‌ ಸೇರಿದಂತೆ ಡಣಾಯಕನಕೆರೆ ಗ್ರಾಮದ ಮುಖಂಡರು, ಸ್ಥಳೀಯ ಮುಖಂಡರು ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.