ನೀರಿನ ಲಭ್ಯತೆ ಹೆಚ್ಚಿಸಲು ೧೧೦ ಮೀಟರ್ ಉದ್ದದ ಕಾಲುವೆ ನಿರ್ಮಾಣ

| Published : Mar 31 2024, 02:01 AM IST

ಸಾರಾಂಶ

ಜಾಕ್‌ವೆಲ್‌ನಿಂದ ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಕೂಡ್ಲಿಗಿ ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ.

ಹಗರಿಬೊಮ್ಮನಹಳ್ಳಿ: ಪಟ್ಟಣದ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಸರಿಪಡಿಸಲು ತಾಲೂಕಿನ ಬನ್ನಿಗೋಳ ಜಾಕ್‌ವೆಲ್ ಬಳಿ ಪುರಸಭೆಯು ₹೩೨.೧೫ ಲಕ್ಷ ಅನುದಾನದಲ್ಲಿ ತೆರೆದ ಕಾಲುವೆ ನಿರ್ಮಾಣ ಮಾಡಲು ಮುಂದಾಗಿದೆ.

ಜಾಕ್‌ವೆಲ್‌ನಿಂದ ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಕೂಡ್ಲಿಗಿ ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಇದೀಗ ನದಿಯ ಮಧ್ಯಭಾಗದಿಂದ ಇನ್ಸ್‌ಪೆಕ್ಷನ್ ಕಾಲುವೆವರೆಗೆ ತೆರೆದ ಕಾಲುವೆ ನಿರ್ಮಾಣಕ್ಕೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮುಂದಾಗಿ, ಕಾಮಗಾರಿಯನ್ನು ಆರಂಭಿಸಿದೆ.

ಈ ಕುರಿತು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಇಇ ಮಲ್ಲಿಕಾರ್ಜುನ ಪಾಟೀಲ್ ಮಾತನಾಡಿ, ಇದೀಗ ಭದ್ರಾ ಮೇಲ್ದಂಡೆಯಿಂದ ೨ ಟಿಎಂಸಿಯಷ್ಟು ನೀರು ಹೂವಿನಹಡಗಲಿಯ ಸಿಂಗಟಾಲೂರು ಏತ ನೀರಾವರಿ ಯೋಜನೆ ಸೇರಿ, ನಂತರ ಒಂದು ಟಿಎಂಸಿಯಷ್ಟು ನೀರು ಹರಿದುಬಂದು ಬನ್ನಿಗೋಳ ಜಾಕ್‌ವೆಲ್ ತಲುಪುವ ಹಿನ್ನೆಲೆಯಲ್ಲಿ ಪ್ರಸ್ತುತ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಒಂದೂವರೆ ಮೀ.ನಷ್ಟು ಕೆಳಗಿನಿಂದಲೂ ನೀರು ಹರಿದು ಬರುವಂತೆ, ನೀರಿನ ಲಭ್ಯತೆ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ೧೧೦ ಮೀ.ನಷ್ಟು ಉದ್ದದ ತೆರೆದ ಕಾಲುವೆ ನಿರ್ಮಿಸಲಾಗುತ್ತಿದೆ. ಮುಂದೆ ಅಮೃತ್ ಯೋಜನೆಯಡಿ ಕೊಟ್ಟೂರು ಮತ್ತು ಹಗರಿಬೊಮ್ಮನಹಳ್ಳಿ ಪ್ರತ್ಯೇಕ ಕುಡಿಯುವ ನೀರಿನ ಯೋಜನೆಗೂ ಪ್ರಸ್ತುತ ಕಾಮಗಾರಿ ಸಹಕಾರಿಯಾಗಲಿದೆ.

ಇಲ್ಲಿಯವರೆಗೂ ಇಂಟೇಕ್ ಚಾನೆಲ್‌ಗಳು ಮತ್ತು ಅವುಗಳಿಗೆ ಅಳವಡಿಸಲಾದ ಯಂತ್ರಗಳನ್ನು ಪರೀಕ್ಷಿಸಲಾಗದ ಸ್ಥಿತಿ ನಿರ್ಮಾಣಗೊಂಡಿತ್ತು. ಇದೀಗ ಸಂಪೂರ್ಣ ನೀರು ಬರಿದಾಗಿರುವ ಹಿನ್ನೆಲೆಯಲ್ಲಿ ಇಂಟೇಕ್ ಚಾನೆಲ್‌ಗಳ ದುರಸ್ತಿ ಕೈಗೆತ್ತಿಕೊಳ್ಳಲಾಗಿದೆ. ಪ್ರಮುಖವಾಗಿ ಪ್ರತಿವರ್ಷವೂ ಇಂಟೆಕ್ ಮತ್ತು ಚಾನೆಲ್‌ನಲ್ಲಿ ಹೂಳು ಮತ್ತು ಮರಳು ತುಂಬಿ ಯಂತ್ರೋಪಕರಣ ಸ್ಥಗಿತಗೊಳ್ಳುವುದಕ್ಕೆ ಇದೀಗ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ಕುಡಿಯುವ ನೀರಿನ ಜಾಕ್‌ವೆಲ್‌ಗೆ ನೀರಿನ ಲಭ್ಯತೆ ಪ್ರಮಾಣ ಹೆಚ್ಚಿಸಲು ೧.೫ಮೀ.ನಷ್ಟು ಆಳದಿಂದಲೇ ತೆರೆದ ಕಾಲುವೆ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ಯೋಜನೆಯಿಂದಾಗಿ ನದಿಯಲ್ಲಿ ಒಳಹರಿವು ಹೆಚ್ಚುತ್ತಿದ್ದಂತೆ ಅಪಾರ ಪ್ರಮಾಣದ ನೀರು ಜಾಕ್‌ವೆಲ್‌ಗೆ ಲಭ್ಯವಾಗುವ ಮೂಲಕ ಕುಡಿವ ನೀರಿನ ಸಣ್ಣಪುಟ್ಟ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ಒದಗಿಸಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಂಪ್ ಆಪರೇಟರ್‌ಗಳು ನಾಗರೆಡ್ಡಿ, ಶ್ರೀನಿವಾಸ, ಯಂಕಣ್ಣ, ಮಹೇಶ್, ಶರಣಪ್ಪ, ಬಾಪೂಜಿ ಇತರರಿದ್ದರು.