ನಾಳೆ 30 ಕಿಮೀ ಮಾನವ ಸರಪಳಿ ನಿರ್ಮಾಣ: ಸಂತೋಷ್‌ಕುಮಾರ್‌

| Published : Sep 14 2024, 01:53 AM IST

ನಾಳೆ 30 ಕಿಮೀ ಮಾನವ ಸರಪಳಿ ನಿರ್ಮಾಣ: ಸಂತೋಷ್‌ಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಹರಿಹರ ತಾಲೂಕಿನಲ್ಲಿ ಮಾನವ ಸರಪಳಿ ನಿರ್ಮಿಸುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ಹೇಳಿದರು.

- ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಆಯೋಜನೆ । ಗಾಂಧಿ ಮೈದಾನದಲ್ಲಿ ಬೆಳಿಗ್ಗೆ 8.30ಕ್ಕೆ ಸಭಾ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ಹರಿಹರ:ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಹರಿಹರ ತಾಲೂಕಿನಲ್ಲಿ ಮಾನವ ಸರಪಳಿ ನಿರ್ಮಿಸುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ಹೇಳಿದರು.ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಮಾತನಾಡಿದ ಅವರು ತಾಲೂಕುಮಟ್ಟದ ಶಾಲಾ- ಕಾಲೇಜು ಪ್ರಾಚಾರ್ಯರ ಸಭೆ ನಡೆಸಿ ಸೆ.15ರಂದು ಬೆಳಗ್ಗೆ 8.30 ರಿಂದ 9.30 ಗಂಟೆವರೆಗೆ ಭಾರತದ ಮುಂದಿನ ಪೀಳಿಗೆಗೆ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸಲು ಮಾನವ ಸರಪಳಿ ನಿರ್ಮಿಸಿ ಸಂವಿಧಾನ ಪೀಠಿಕೆಯನ್ನು ಓದುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

30 ಕಿಮೀ ಮಾನವ ಸರಪಳಿ:

ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿ ರಂಗನಾಥ ಸ್ವಾಮಿ ದೇವಸ್ಥಾನದಿಂದ ಹರಿಹರದ ತುಂಗಭದ್ರಾ ಸೇತುವೆ ಅಂತ್ಯದವರೆಗೆ ಅಂದಾಜು 30 ಕಿ.ಮೀ.ವರೆಗೆ 30,000 ಜನರು ಈ ಮಾನವ ಸರಪಳಿ ನಿರ್ಮಾಣದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. 6ನೇ ತರಗತಿಯಿಂದ ಡಿಗ್ರಿ, ಐಟಿಐ, ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಂಘಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಜಾಗೃತಿ ಮೂಡಿಸಬೇಕು ಎಂದರು.

ನಗರದ ಗಾಂಧಿ ಮೈದಾನದಲ್ಲಿ ಅಂದು ಬೆಳಗ್ಗೆ 8.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ನೆರವೇರಿಸುವರು. ಸಂಸದೆ ಡಾ.ಪ್ರಭಾ ಹಾಗೂ ಜಿಲ್ಲೆಯ ಎಲ್ಲ ತಾಲೂಕಿನ ಶಾಸಕರು ಹಾಗೂ ಜಿಲ್ಲಾಮಟ್ಟದ ತಾಲೂಕುಮಟ್ಟದ ಅಧಿಕಾರಿಗಳು ಭಾಗವಹಿಸುವರು ಎಂದರು.

ತಹಸೀಲ್ದಾರ್ ಗುರು ಬಸವರಾಜ್ ಮಾತನಾಡಿ, ರಾಜ್ಯಾದ್ಯಂತ ಮಾನವ ಸರಪಳಿ ನಿರ್ಮಿಸಿ ಏಕಕಾಲಕ್ಕೆ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾಲೂಕುಮಟ್ಟದ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಸಂಘ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಭೆ ಕರೆಯಲಾಗುವುದು ಎಂದು ತಿಳಿಸಿದರು.

ಗ್ರಾಮಾಂತರ ಸಿಪಿಐ ಸುರೇಶ್ ಸಗ್ರಿ ಮಾತನಾಡಿ, ಮಾನವ ಸರಪಳಿ ನಿರ್ಮಿಸಿವ ಕಾರ್ಯಕ್ಕೆ ಪೊಲೀಸ್‌ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು ಎಂದರು.

ತಾಪಂ ಇಒ ಸುಮಲತಾ, ನಗರ ಸಿಪಿಐ ದೇವಾನಂದ್, ಕೃಷಿ ಅಧಿಕಾರಿ ನಾರಣಗೌಡ, ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ, ಬಿಇಒ ದುರ್ಗಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಕಾಲೇಜುಗಳ ಪ್ರಾಚಾರ್ಯರು ಭಾಗವಹಿಸಿದ್ದರು.

- - -

ಬಾಕ್ಸ್‌ * 146 ಸಸಿ ನೆಡುವ ಕಾರ್ಯಕ್ರಮ ಹರಿಹರ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಮಕೃಷ್ಣಪ್ಪ ಮಾತನಾಡಿ, ಗಾಂಧಿ ಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ದಾವಣಗೆರೆ ಸಿದ್ಧಗಂಗಾ ಶಾಲೆಯ ಸುಮಾರು 2000 ವಿದ್ಯಾರ್ಥಿಗಳಿಂದ ಪ್ರಜಾಪ್ರಭುತ್ವ ದಿನಾಚರಣೆ ಬಗ್ಗೆ ಜಾಗೃತಿ ಕಾರ್ಯಕ್ರಮ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯಿಂದ 146 ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಮಾನವ ಸರಪಳಿ ನಿರ್ಮಾಣ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಲು 200 ಮೀಟರ್‌ಗೆ ಒಬ್ಬ ಅಧಿಕಾರಿ ಹಾಗೂ 1ಕಿ.ಮೀ.ಗೆ ಒಬ್ಬ ಅಧಿಕಾರಿ ಮತ್ತು 3 ಮತ್ತು 5 ಕಿ.ಮೀ.ಗೆ ಒಬ್ಬೊಬ್ಬ ಮೇಲಾಧಿಕಾರಿಯನ್ನು ನೇಮಿಸಲಾಗಿದೆ. 1.ಕಿ.ಮೀ.ಗೆ 50 ಪ್ರತಿ ಸಂವಿಧಾನದ ಪೀಠಿಕೆ ಓದಿ ಹೇಳುವುದು ಹಾಗೂ ಸುಮಾರು 50 ಸಾವಿರ ಸಂವಿಧಾನದ ಪೀಠಿಕೆಯ ಪ್ರತಿಗಳನ್ನು ತಾಲೂಕಿನ ಶಾಲೆಗಳಿಗೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

- - - -13ಎಚ್‍ಆರ್‍ಆರ್1:

ಹರಿಹರದಲ್ಲಿ ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ ನಿರ್ಮಿಸುವ ಕಾರ್ಯಕ್ರಮ ಪ್ರಯುಕ್ತ ತಾಲೂಕುಮಟ್ಟದ ಅಧಿಕಾರಿಗಳು, ಶಾಲಾ- ಕಾಲೇಜು ಪ್ರಾಚಾರ್ಯರ ಸಭೆ ನಡೆಯಿತು.