ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ ಕರ್ನಾಟಕ ವಿಧಾನಸಭೆಯ ಅರ್ಜಿಗಳ ಸಮಿತಿ ಸಭೆಯ ಸದಸ್ಯರು ಹಾಗೂ ವಿಧಾನಸಭೆ ಸದಸ್ಯರಾದ ಎಸ್.ಸುರೇಶ್ ಕುಮಾರ್, ಎ.ಮಂಜು, ಸುರೇಶ್ ಬಾಬು ಸಿ.ವಿ., ಡಾ.ಮಂತರ್ ಗೌಡ ಹಾಗೂ ಮಹೇಂದ್ರ ಕಲ್ಲಪ್ಪ ತಮ್ಮಣ್ಣನವರ ನಗರದ ಜಿಲ್ಲಾಡಳಿತ ಭವನ ಬಳಿಯ ತಡೆಗೋಡೆಯನ್ನು ಗುರುವಾರ ವೀಕ್ಷಿಸಿದರು. ಜಿಲ್ಲಾಡಳಿತ ಭವನ ಬಳಿ ಬೆಂಚು ಮಾದರಿ ತಡೆಗೋಡೆ ನಿರ್ಮಾಣ ಮಾಡಲು ಸಮಿತಿ ಚಿಂತಿಸಿದೆ.
ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ. ಸಿಇಒ ವರ್ಣಿತ್ ನೇಗಿ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಸತ್ಯನಾರಾಯಣ, ಅಂದಾಜು ಸಮಿತಿಯ ಜಯಪ್ರಸಾದ್, ಸದಸ್ಯರಾದ ಭುರ್ಜಿ, ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಶಿವಕುಮಾರ್ ಇತರರು ತಡೆಗೋಡೆಯನ್ನು ವೀಕ್ಷಿಸಿ ಸಮಿತಿ ಸದಸ್ಯರಿಗೆ ಹಲವು ಮಾಹಿತಿ ನೀಡಿದರು.ಬಳಿಕ ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಲೋಕೋಪಯೋಗಿ ಇಲಾಖೆಯ ವಿವಿಧ ಹಂತದ ಎಂಜಿನಿಯರ್‌ಗಳು, ಭಾರತೀಯ ವಿಜ್ಞಾನ ಸಂಸ್ಥೆ ಪ್ರಾಧ್ಯಾಪಕರು ಸೇರಿದಂತೆ ವಿವಿಧ ಹಂತದ ಅಧಿಕಾರಿಗಳ ಜೊತೆ ಸುದೀರ್ಘವಾಗಿ ಚರ್ಚಿಸಿ, ಮಾಹಿತಿ ಪಡೆದು, ಹಲವು ನಿರ್ದೇಶನ ನೀಡಿದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಾಸಕ ಹಾಗೂ ವಿಧಾನಸಭೆಯ ಅರ್ಜಿಗಳ ಸಮಿತಿ ಸಭೆಯ ಸದಸ್ಯರಾದ ಎಸ್.ಸುರೇಶ್ ಕುಮಾರ್, ಜಿಲ್ಲಾಡಳಿತ ಭವನ ಬಳಿಯ ತಡೆಗೋಡೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಆತಂಕ ಇದ್ದ ಹಿನ್ನೆಲೆ ಈಗಾಗಲೇ ಕರ್ನಾಟಕ ವಿಧಾನಸಭೆಯ ಅರ್ಜಿಗಳ ಸಮಿತಿಯು ಬೆಂಗಳೂರಿನಲ್ಲಿ ಮೂರು ಬಾರಿ ಸಭೆ ನಡೆಸಿ, ಚರ್ಚಿಸಿದೆ. ಆ ನಿಟ್ಟಿನಲ್ಲಿ ಖುದ್ದಾಗಿ ತಡೆಗೋಡೆ ಸಂಬಂಧ ಸ್ಥಳ ಪರಿಶೀಲಿಸಲು ನಿರ್ಧರಿಸಲಾಗಿತ್ತು. ಅದರಂತೆ ಗುರುವಾರ ಸ್ಥಳ ಪರಿಶೀಲಿಸಿ ಮಾಹಿತಿ ಪಡೆಯಲಾಗಿದೆ ಎಂದು ತಿಳಿಸಿದರು.‘ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ತಡೆಗೋಡೆ ಸಂಬಂಧ ಒಟ್ಟು ಯೋಜನೆ ರೂಪುರೇಷ ಬಗ್ಗೆ ಮರು ಪರಿಶೀಲಿಸಲು ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.
ತಡೆಗೋಡೆ ಸಂಬಂಧ ಪರ್ಯಾಯ ಅಭಿವೃದ್ಧಿ ಬಗ್ಗೆ ಯೋಚಿಸಲಾಗಿದ್ದು, ‘ಬೆಂಚು ಮಾದರಿ’ಯಲ್ಲಿ ತಡೆಗೋಡೆ ನಿರ್ಮಿಸುವ ಸಂಬಂಧ 15 ದಿನದಲ್ಲಿ ಡಿಪಿಆರ್(ಸವಿಸ್ತಾರ) ಸಿದ್ಧಪಡಿಸಿ, ವರದಿ ಸಲ್ಲಿಸುವಂತೆ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕರಿಗೆ ಸೂಚಿಸಲಾಗಿದೆ ಎಂದರು.ಸದ್ಯ ತಾಂತ್ರಿಕ ತಜ್ಞರು ನೀಡುವ ವರದಿ ಆಧರಿಸಿ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ಸುರೇಶ್ ಕುಮಾರ್ ಮಾಹಿತಿ ನೀಡಿದರು.
ರಸ್ತೆ ಕಾಮಗಾರಿ ತಾತ್ಕಾಲಿಕ ಸ್ಥಗಿತ:ಜಿಲ್ಲಾಡಳಿತ ಭವನಕ್ಕೆ ತೆರಳಲು ಉದ್ದೇಶಿಸಲಾಗಿರುವ ರಸ್ತೆ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು. ತಡೆಗೋಡೆ ಸಂಬಂಧಿಸಿದ ಕೆಲಸಗಳು ಆದ ನಂತರ ಮುಂದಿನ ಹಂತದಲ್ಲಿ ರಸ್ತೆ ನಿರ್ಮಿಸಬಹುದಾಗಿದೆ ಎಂದು ಸುರೇಶ್ ಕುಮಾರ್ ಸಲಹೆ ಮಾಡಿದರು.
ಮಡಿಕೇರಿ ಶಾಸಕ ಹಾಗೂ ಸಮಿತಿ ಸದಸ್ಯ ಡಾ.ಮಂತರ್‌ಗೌಡ ಮಾತನಾಡಿ, ಜಿಲ್ಲಾಡಳಿತ ಭವನ ಬಳಿಯ ತಡೆಗೋಡೆ ಸಂಬಂಧಿಸಿದಂತೆ ಹಲವು ಬಾರಿ ಸರ್ಕಾರದ ಗಮನ ಸೆಳೆಯಲಾಗಿತ್ತು. ಆ ನಿಟ್ಟಿನಲ್ಲಿ ವಿಧಾನಸಭೆಯ ಅರ್ಜಿ ಸಮಿತಿ ಸದಸ್ಯರು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದ್ದು, ಸಮಿತಿ ನಿರ್ಣಯಗಳು ಹಾಗೂ ತಾಂತ್ರಿಕ ತಜ್ಞರು ನೀಡುವ ವರದಿಯಂತೆ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದರು.ಮುಂದಿನ ಮಳೆಗಾಲದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಗಮನಹರಿಸಲಾಗುವುದು. ತಡೆಗೋಡೆ ಸಂಬಂಧ ಸರ್ಕಾರದ ಗಮನ ಸೆಳೆದು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಡಾ.ಮಂತರ್ ಗೌಡ ಹೇಳಿದರು. -----------------ಡ್ರಗ್ಸ್ ನಿಯಂತ್ರಿಸಲು ಸಲಹೆತಂಬಾಕು ಸೇವನೆಯಿಂದ ಆಗುತ್ತಿರುವ ಅಪಾಯ ಕುರಿತು ಮಾತನಾಡಿದ ಎಸ್.ಸುರೇಶ್ ಕುಮಾರ್ ಅವರು ಡ್ರಗ್ಸ್, ಹೆರಾಯಿನ್ ಮತ್ತಿತರ ಮಾದಕ ವಸ್ತುಗಳಿಗೆ ಯಾರೂ ದಾಸರಾಗಬಾರದು. ಆ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ಡ್ರಗ್ಸ್ ಅಥವಾ ಮಾದಕ ವಸ್ತುಗಳಿಂದ ದೂರ ಇರಬೇಕು ಎಂದು ಹೇಳಿದರು.
ಶಿಕ್ಷಣ, ಆರೋಗ್ಯ, ಪೊಲೀಸ್, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಇಲಾಖೆಗಳು ಡ್ರಗ್ಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಿರಂತರವಾಗಿ ಜಾಗೃತಿ ವಹಿಸಬೇಕಿದೆ ಎಂದು ಸುರೇಶ್ ಕುಮಾರ್ ಸಲಹೆ ಮಾಡಿದರು. ಡ್ರಗ್ಸ್ ವಿರುದ್ದ ಪ್ರತಿಯೊಬ್ಬರೂ ಹೋರಾಟ ಮಾಡಬೇಕು. ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ ಎಂದು ವಿವರಿಸಿದರು. ಈ ಸಂದರ್ಭ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಗಾಂಜಾ, ಹೆರಾಯಿನ್ ಸೇರಿದಂತೆ ಡ್ರಗ್ಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಾಲ ಕಾಲಕ್ಕೆ ತಪಾಸಣೆ ಮಾಡಿ, ತಪ್ಪು ಕಂಡುಬಂದ ಹಲವರನ್ನು ಬಂಧಿಸಲಾಗಿದೆ. ಡ್ರಗ್ಸ್ ನಿಯಂತ್ರಣ ಮಾಡಲು ಗಡಿ ಪ್ರದೇಶಗಳು ಸೇರಿದಂತೆ ಎಲ್ಲೆಡೆ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.ಸಮಿತಿ ಸದಸ್ಯರೊಬ್ಬರು ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮ ಕುರಿತು ಮಕ್ಕಳಲ್ಲಿ ಹೆಚ್ಚಿನ ಅರಿವು ಮೂಡಿಸಬೇಕಿದೆ ಎಂದು ಸಲಹೆ ಮಾಡಿದರು.
ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಗಡಿ ಪ್ರದೇಶದ ಚೆಕ್‌ಪೋಸ್ಟುಗಳಲ್ಲಿ ಅಗತ್ಯ ತಪಾಸಣೆ ಮಾಡಬೇಕು. ಸಮಿತಿಯ ಅಭಿಪ್ರಾಯ, ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಗಮನಸೆಳೆಯುವಂತಾಗಬೇಕು ಎಂದು ಸಲಹೆ ಮಾಡಿದರು. ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಸಿದ್ದೇಗೌಡ, ಎಇಇ ಗಿರೀಶ್ ಮತ್ತಿತರರು ಇದ್ದರು.