ಆಧಾರ್ ಕಾರ್ಡ್ ಮತ್ತು ಮೊಬೈಲ್ ಓಟಿಪಿ ಮೂಲಕ ನೋಂದಣಿ ಮಾಡುವ ಯೋಜನೆಗೆ ಮುಂದಾಗಿರುವುದು ರೈತರನ್ನು ವಂಚಿಸುವುದಾಗಿದೆ. ಸರ್ಕಾರವು ಪೇಪರ್ ಲೆಸ್ ನೋಂದಣಿ ಯೋಜನೆ ಜಾರಿಗೊಳಿಸಬಾರದು. ಯಥಾಸ್ಥಿತಿಯಲ್ಲಿ ಪತ್ರದ ಮೂಲಕ ನೋಂದಣಿ ಮಾಡುವುದನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ ಸೌಲಭ್ಯಗಳನ್ನು ಒಳಗೊಂಡ ಉಪನೋಂದಣಾಧಿಕಾರಿಗಳ ಕಚೇರಿ (ಸಬ್ ರಿಜಿಸ್ಟ್ರಾರ್ ) ನೂತನ ಕಟ್ಟಡ ನಿರ್ಮಾಣವಾಗಲಿದೆ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಜನರ ಬಹು ದಿನಗಳ ಬೇಡಿಕೆಯಾಗಿದ್ದ ₹1.50 ಕೋಟಿ ವೆಚ್ಚದ ಸಬ್ ರಿಜಿಸ್ಟ್ರಾರ್ ಕಚೇರಿ ನೂತನ ಕಟ್ಟಡದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಸರ್ಕಾರದ ಪ್ರಮುಖ ಆದಾಯ ತರುವ ಇಲಾಖೆಗಳಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯೂ ಒಂದಾಗಿದೆ. ಸಾರ್ವಜನಿಕರ ಆಸ್ತಿ ಹಕ್ಕುಗಳಿಗೆ ಕಾನೂನಾತ್ಮಕ ರಕ್ಷಣೆ ನೀಡುವಲ್ಲಿ ಈ ಇಲಾಖೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.ರೈತರು, ವ್ಯಾಪಾರಸ್ಥರು ಹಾಗೂ ಜನಸಾಮಾನ್ಯರು ತಮ್ಮ ಆಸ್ತಿಗಳ ಖರೀದಿ, ಮಾರಾಟ, ದಾನಪತ್ರ, ವಿಭಾಗಪತ್ರ, ಅಡಮಾನ ಪತ್ರ ವಿವಾಹ ನೋಂದಣಿ ಸೇರಿದಂತೆ ವಿವಿಧ ಸೇವೆಗಳಿಗೆ ನೋಂದಣಿ ಇಲಾಖೆಯನ್ನು ಅವಲಂಬಿಸಿದ್ದಾರೆ ಎಂದು ತಿಳಿಸಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿದ್ದ ಹಳೆಯ ಉಪ ನೋಂದಣಾಧಿಕಾರಿಗಳ ಕಚೇರಿ ಸಂಪೂರ್ಣ ಶಿಥಿಲವಾಗಿದ್ದು, ಇದನ್ನು ಅರಿತು ರಾಜ್ಯ ಸರ್ಕಾರ ತಾಲೂಕು ಆಡಳಿತ ಸೌಧದ ಆವರಣದಲ್ಲಿಯೇ ಉಪ ನೋಂದಣಾಧಿಕಾರಿಗಳ ನೂತನ ಕಟ್ಟಡ ನಿರ್ಮಾಣಕ್ಕೆ ₹1.50 ಕೋಟಿ ಹಣ ಬಿಡುಗಡೆ ಮಾಡಿದ್ದು ಕಾಮಗಾರಿ ಆರಂಭವಾಗುತ್ತಿದೆ ಎಂದು ಹೇಳಿದರು.ನೂತನ ಕಟ್ಟಡ ನಿರ್ಮಾಣದಿಂದ ನೋಂದಣಿ ಕಚೇರಿಗೆ ಬರುವ ಸಾರ್ವಜನಿಕರಿಗೆ ಸುಸಜ್ಜಿತ ಕಚೇರಿ, ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಕುಡಿಯುವ ನೀರು ಸೇರಿ ಎಲ್ಲಾ ಮೂಲ ಸೌಕರ್ಯಗಳು ದೊರೆಯಲಿವೆ. ಇದರಿಂದ ತಾಲೂಕಿನ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು.
ಪೇಪರ್ಲೆಸ್ ನೋಂದಣಿಗೆ ಶಾಸಕರ ವಿರೋಧ:ಕಾವೇರಿ ಆನ್ಲೈನ್ ಸೇವೆ ಮೂಲಕ ನೋಂದಣಿ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಪೇಪರ್ ಲೆಸ್ ನೋಂದಣಿ ಪ್ರಕ್ರಿಯೆಗೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಒಳ್ಳೆಯ ಬೆಳವಣಿಗೆಯಲ್ಲ. ಇದು ಅನಕ್ಷರಸ್ಥ ರೈತರ ಶೋಷಣೆಗೆ ದಾರಿಯಾಗಲಿದೆ ಎಂದು ಎಚ್ಚರಿಸಿದರು.
ಆಧಾರ್ ಕಾರ್ಡ್ ಮತ್ತು ಮೊಬೈಲ್ ಓಟಿಪಿ ಮೂಲಕ ನೋಂದಣಿ ಮಾಡುವ ಯೋಜನೆಗೆ ಮುಂದಾಗಿರುವುದು ರೈತರನ್ನು ವಂಚಿಸುವುದಾಗಿದೆ. ಸರ್ಕಾರವು ಪೇಪರ್ ಲೆಸ್ ನೋಂದಣಿ ಯೋಜನೆ ಜಾರಿಗೊಳಿಸಬಾರದು. ಯಥಾಸ್ಥಿತಿಯಲ್ಲಿ ಪತ್ರದ ಮೂಲಕ ನೋಂದಣಿ ಮಾಡುವುದನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಜಿ.ಎಸ್.ಶ್ರೇಯಸ್, ಜಿಲ್ಲಾ ನೋಂದಣಾಧಿಕಾರಿ ಸಿದ್ದೇಶ್, ತಾಲೂಕು ಉಪನೋಂದಣಾಧಿಕಾರಿ ಮಧುಸೂಧನ್, ತಾಲೂಕು ಪತ್ರಬರಹಗಾರರ ಸಂಘದ ಅಧ್ಯಕ್ಷ ಪಿ.ಎಸ್.ಶಿವಲಿಂಗೇಗೌಡ, ಕಾರ್ಯದರ್ಶಿ ಕೆ.ಆರ್.ಹರೀಶ್ ಕುಮಾರ್, ತಾಲೂಕು ಟಿಎಪಿಸಿಎಂಎಸ್ ಅಧ್ಯಕ್ಷ ಮಲ್ಲೇನಹಳ್ಳಿ ಎಂ.ಮೋಹನ್, ನಿರ್ದೇಶಕರಾದ ಕೆ.ಬಿ.ನಾಗೇಶ್, ಬಲದೇವ್, ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್ ಸೇರಿ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.