ಇಡೀ ದೇಶದಲ್ಲಿಯೇ ಪ್ರಥಮವಾಗಿ ತಾಲೂಕಿನಲ್ಲಿ ಮಹಿಳೆಯರಿಗಾಗಿ ವಿಶೇಷವಾಗಿ ‘ಪಿಂಕ್ ಪಾರ್ಕ್’ ನಿರ್ಮಾಣ ಮಾಡಲಾಗುತ್ತಿದ್ದು, ಮಹಿಳೆಯರು ಮತ್ತು ಮಕ್ಕಳ ಆರೋಗ್ಯ, ಮನರಂಜನೆ ಹಾಗೂ ಸುರಕ್ಷತೆಗೆ ಆದ್ಯತೆ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ರಾಣಿಬೆನ್ನೂರು: ಇಡೀ ದೇಶದಲ್ಲಿಯೇ ಪ್ರಥಮವಾಗಿ ತಾಲೂಕಿನಲ್ಲಿ ಮಹಿಳೆಯರಿಗಾಗಿ ವಿಶೇಷವಾಗಿ ‘ಪಿಂಕ್ ಪಾರ್ಕ್’ ನಿರ್ಮಾಣ ಮಾಡಲಾಗುತ್ತಿದ್ದು, ಮಹಿಳೆಯರು ಮತ್ತು ಮಕ್ಕಳ ಆರೋಗ್ಯ, ಮನರಂಜನೆ ಹಾಗೂ ಸುರಕ್ಷತೆಗೆ ಆದ್ಯತೆ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ಇಲ್ಲಿಯ ಗೌರಿಶಂಕರ ನಗರದ ಕಿತ್ತೂರು ರಾಣಿ ಚೆನಮ್ಮ ಉದ್ಯಾನದಲ್ಲಿ ಭಾನುವಾರ ನಗರಸಭೆ ವತಿಯಿಂದ ಏರ್ಪಡಿಸಲಾಗಿದ್ದ ಪಿಂಕ್ ಪಾರ್ಕ್ ನಿರ್ಮಾಣದ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಪಿಂಕ್ ಪಾರ್ಕ್ ಸಂಪೂರ್ಣವಾಗಿ ಮಹಿಳೆಯರಿಗಾಗಿ ಮೀಸಲಿರಲಿದ್ದು, ಮಹಿಳೆಯರು ನಿರಾಳವಾಗಿ ಸಮಯ ಕಳೆಯಲು ಅಗತ್ಯವಿರುವ ಎಲ್ಲ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು. ಪಾರ್ಕ್‌ನಲ್ಲಿ ಸುಂದರ ಉದ್ಯಾನದ ಜತೆಗೆ ವ್ಯಾಯಾಮ ಉಪಕರಣಗಳು, ವಾಕಿಂಗ್ ಟ್ಯಾಂಕ್, ಮಕ್ಕಳ ಆಟದ ವ್ಯವಸ್ಥೆ, ವಿಶ್ರಾಂತಿ ಆಸನಗಳು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು. ಇಂದಿನ ದಿನಗಳಲ್ಲಿ ಮಹಿಳೆಯರ ಆರೋಗ್ಯ ಮತ್ತು ದೈಹಿಕ ಚಟುವಟಿಕೆಗೆ ಸೂಕ್ತವಾದ ಸಾರ್ವಜನಿಕ ಸ್ಥಳಗಳ ಅಗತ್ಯ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಸುರಕ್ಷಿತ ಮತ್ತು ಆಹ್ಲಾದಕರ ವಾತಾವರಣದಲ್ಲಿ ವಾಕಿಂಗ್ ಹಾಗೂ ವ್ಯಾಯಾಮ ಮಾಡಲು ಅನುಕೂಲವಾಗುವಂತೆ ಪಿಂಕ್ ಪಾರ್ಕ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.ಬೆಂಗಳೂರಿನ ‘ಶಿ’ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷೆ ಹರ್ಷಿಣಿ ವೆಂಕಟೇಶ ಮಾತನಾಡಿ, ನಮ್ಮ ಸಂಸ್ಥೆಯು ಏಷಿಯಾ ಬುಕ್ಸ್ ಆಫ್ ರೆಕಾರ್ಡ್‌ನಲ್ಲಿ ಸೇರ್ಪಡೆಯಾಗಿದೆ. ರಾಣಿಬೆನ್ನೂರು ತಾಲೂಕಿನ 5 ಸೇರಿದಂತೆ ರಾಜ್ಯದ 55 ಕಡೆಗಳಲ್ಲಿ ಕಂಪ್ಯೂಟರ್ ಸೆಂಟರ್‌ಗಳನ್ನು ತೆರೆದಿರುವುದಾಗಿ ತಿಳಿಸಿದರು.
ಪಿಕೆಕೆ ಇನಿಷಿಯೇಟಿವ್ಸ್ ಅಧ್ಯಕ್ಷೆ ಪೂರ್ಣಿಮಾ ಕೋಳಿವಾಡ, ಕವಿತಾ ಪ್ರಭಾಕರ, ಸಂಧ್ಯಾ ವೆಂಕಟ, ಡಾ. ರೂಪಾಲಿ ಪುನೀತ, ಸಂಜನಾ ಕುರುವತ್ತಿ, ಶಿಲ್ಪಾ ಸಾವಕಾರ, ನಗರಸಭೆ ಪೌರಾಯುಕ್ತ ಫಕ್ಕೀರಪ್ಪ ಇಂಗಳಗಿ, ಜಿಪಂ ಮಾಜಿ ಅಧ್ಯಕ್ಷ ಮಂಜುನಾಥ ಓಲೇಕಾರ, ಬಸವರಾಜ ಹುಚಗೊಂಡರ, ರಾಜು ಹೊಸಮನಿ, ಬಿ.ಬಿ. ನಂದ್ಯಾಲ, ಪುಷ್ಪಾ ಬದಾಮಿ, ಪರಶುರಾಮ ಪವಾರ, ಪ್ರಶಾಂತ ಜೈನ್ ಮತ್ತಿತರರಿದ್ದರು.