ಬಿಡಿಎ ನಿರ್ಮಿತ ಕೆಂಪೇಗೌಡ ಬಡಾವಣೆಯ ಮೂಲಕ ಹಾದು ಹೋಗುವ, ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆಯನ್ನು ಸಂಪರ್ಕಿಸುವ ದಶ ಪಥಗಳ ಮೇಜರ್ ಆರ್ಟೀರಿಯಲ್ ರಸ್ತೆಯಲ್ಲಿ (ಎಂಎಆರ್) ಸೈಕಲ್ ಸವಾರಿಗಾಗಿ ಪ್ರತ್ಯೇಕ ಸೈಕಲ್ ಪಥವನ್ನು ಮೀಸಲಿಡಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಡಿಎ ನಿರ್ಮಿತ ಕೆಂಪೇಗೌಡ ಬಡಾವಣೆಯ ಮೂಲಕ ಹಾದು ಹೋಗುವ, ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆಯನ್ನು ಸಂಪರ್ಕಿಸುವ ದಶ ಪಥಗಳ ಮೇಜರ್ ಆರ್ಟೀರಿಯಲ್ ರಸ್ತೆಯಲ್ಲಿ (ಎಂಎಆರ್) ಸೈಕಲ್ ಸವಾರಿಗಾಗಿ ಪ್ರತ್ಯೇಕ ಸೈಕಲ್ ಪಥವನ್ನು ಮೀಸಲಿಡಲಾಗುತ್ತಿದೆ.10.3 ಕಿ.ಮೀ ಉದ್ದ, 90 ಮೀಟರ್ ಅಗಲದ ಎಂಎಆರ್‌ನಲ್ಲಿ ಸೈಕಲ್ ಪಥಕ್ಕಾಗಿ ಪ್ರತ್ಯೇಕ ಜಾಗ ಮಾಡಿಕೊಡಲಾಗಿದೆ. ಯಾವುದೇ ವಾಹನಗಳು ಸೈಕಲ್ ಪಥದೊಳಗೆ ನುಸುಳದಂತೆ ಬಣ್ಣ ಬಳಿದಿರುವ ಸಿಮೆಂಟ್ ಇಟ್ಟಿಗೆಗಳಿಂದ ಪ್ರತ್ಯೇಕಿಸಲಾಗಿದೆ. ಅಂಡರ್‌ಪಾಸ್‌ಗಳಲ್ಲಿ ಮಾತ್ರ ಸೈಕಲ್ ಪಥ ಇಲ್ಲ. ಉಳಿದೆಡೆ ಸೈಕಲ್ ಸವಾರರು ಯಾವುದೇ ಅಡೆತಡೆಯಿಲ್ಲದೆ ಸಾಗಬಹುದು ಎಂದು ಬಿಡಿಎ ಅಧಿಕಾರಿಗಳು ಹೇಳಿದ್ದಾರೆ.
ಮಾಗಡಿ ರಸ್ತೆಯಲ್ಲಿ ಕಡಬಗೆರೆ ಬಳಿಯಿಂದ ಆರಂಭವಾಗುವ ಎಂಎಆರ್ ರಸ್ತೆಯು ಕೆಂಪೇಗೌಡ ಬಡಾವಣೆಯ 9 ಬ್ಲಾಕ್‌ಗಳ ಮೂಲಕ ಹಾದು ಮೈಸೂರು ರಸ್ತೆಯಲ್ಲಿ ಚಲ್ಲಘಟ್ಟ ಮೆಟ್ರೋ ನಿಲ್ದಾಣದ ಬಳಿ ಮುಕ್ತಾಯಗೊಳ್ಳುತ್ತದೆ. ಕೆಂಪೇಗೌಡ ಬಡಾವಣೆ ಮತ್ತು ಸುತ್ತಲಿನ ನಿವಾಸಿಗಳಿಗೆ ಈ ರಸ್ತೆ ಬಹುವಾಗಿ ಅನುಕೂಲ ಕಲ್ಪಿಸುತ್ತದೆ.ಈ ರಸ್ತೆಯಲ್ಲಿ ತಲಾ ಮೂರರಂತೆ 6 ಲೈನ್‌ನ ಮುಖ್ಯ ರಸ್ತೆ ಹಾಗೂ ತಲಾ 2 ಲೈನ್‌ಗಳ ಎರಡು ಸರ್ವೀಸ್ ರಸ್ತೆಗಳಿವೆ. ಗಂಟೆಗೆ ಗರಿಷ್ಠ 80 ಕಿ.ಮೀ ಮಿತಿಯಿರುವ ಈ ರಸ್ತೆಗೆ ಯಾವುದೇ ಟೋಲ್ ಶುಲ್ಕವಿಲ್ಲ. ರಸ್ತೆಯಲ್ಲಿ 3 ಪ್ರಮುಖ ಅಂಡರ್‌ಪಾಸ್‌ಗಳು ಬರುತ್ತವೆ. ಅದರಲ್ಲೂ ಚಲ್ಲಘಟ್ಟ ಮೆಟ್ರೋ ಡಿಪೋ ಮತ್ತು ರೈಲ್ವೆ ಹಳಿ ಸೇರಿ ನೆಲದಡಿಯಲ್ಲೇ ಸುಮಾರು 250 ಮೀಟರ್ ರಸ್ತೆ ಇದೆ.
ಕೆಂಪೇಗೌಡ ಬಡಾವಣೆಯಲ್ಲಿ ಅಲ್ಲೊಂದು, ಇಲ್ಲೊಂದು ಮನೆಗಳು ನಿರ್ಮಾಣವಾಗುತ್ತಿವೆ. ಪೂರ್ಣ ಪ್ರಮಾಣದಲ್ಲಿ ಮನೆಗಳು ನಿರ್ಮಾಣವಾದರೆ ಹೆಚ್ಚು ಜನರಿಗೆ ಈ ರಸ್ತೆಯಿಂದ ಅನುಕೂಲವಾಗುತ್ತದೆ.ಜೂ.27ಕ್ಕೆ ಎಂಎಆರ್
ಲೋಕಾರ್ಪಣೆ ಸಾಧ್ಯತೆಜೂ.27ರಂದು ಕೆಂಪೇಗೌಡ ಜನ್ಮ ದಿನಾಚರಣೆ ಇದೆ. ಅದೇ ದಿನದಂದು ಎಂಎಆರ್ ಅನ್ನು ಸಾರ್ವಜನಿಕರ ವಾಹನ ಸಂಚಾರಕ್ಕೆ ಮುಕ್ತಗೊಳಿಸಲು ಬಿಡಿಎ ಯೋಚಿಸಿದೆ. ಈಗಾಗಲೇ ತಾತ್ಕಾಲಿಕ ದಿನಾಂಕವನ್ನು ನಿಗದಿಪಡಿಸಲಾಗಿದೆ. ಯೋಜನೆಗೆ ಸಂಬಂಧಿಸಿದಂತೆ ಅಂತಿಮ ಹಂತದ ಕೆಲಸಗಳಾದ ಪೇಟಿಂಗ್, ವಿದ್ಯುತ್ ದೀಪಗಳ ಅಳವಡಿಕೆ ಕೆಲಸಗಳು ನಡೆಯುತ್ತಿವೆ. ನಿರೀಕ್ಷೆಯಂತೆ ಎಲ್ಲಾ ಕೆಲಸಗಳು ಮುಗಿದರೆ ಜೂ.27ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಸ್ತೆಯನ್ನು ಉದ್ಘಾಟನೆ ಮಾಡಲಿದ್ದಾರೆ ಎಂದು ಬಿಡಿಎ ಮೂಲಗಳು ತಿಳಿಸಿವೆ.