ಸಾರಾಂಶ
ಗ್ರಾಮೀಣ ಪ್ರದೇಶದ ಮಹಿಳೆಯರ ಆರ್ಥಿಕ ಪ್ರಗತಿಗೆ ಸರ್ಕಾರ ಆದ್ಯತೆ ನೀಡಿದ್ದು, ಯೋಜನೆಗಳ ಲಾಭ ಪಡೆಯಬೇಕು
ಕೊಪ್ಪಳ(ಯಲಬುರ್ಗಾ): ಸ್ಥಳೀಯ ಸಂಜೀವಿನಿ ಮಹಿಳಾ ಒಕ್ಕೂಟದ ಯೋಜನೆಗಳು ಮಹಿಳೆಯರಿಗೆ ತಿಳಿಯಲು ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ಸಂಜೀವಿನಿ ಮಹಿಳಾ ಒಕ್ಕೂಟದ ಶೆಡ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಗ್ರಾಪಂ ಅಧ್ಯಕ್ಷ ಶರಣುಕುಮಾರ ಅಮರಗಟ್ಟಿ ಹೇಳಿದರು.
ಜಿಲ್ಲೆಯ ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಪಂ ಕಚೇರಿಯಲ್ಲಿ ಹಾಗೂ ಸಂಜೀವಿನಿ ಮಹಿಳಾ ಒಕ್ಕೂಟದ ಸಹಯೋಗದಲ್ಲಿ ಶನಿವಾರ ಜರುಗಿದ ಮಹಿಳಾ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಮಹಿಳೆಯರ ಆರ್ಥಿಕ ಪ್ರಗತಿಗೆ ಸರ್ಕಾರ ಆದ್ಯತೆ ನೀಡಿದ್ದು, ಯೋಜನೆಗಳ ಲಾಭ ಪಡೆಯಬೇಕು. ಸ್ವ ಉದ್ಯೋಗದಿಂದ ಹೆಚ್ಚು ಅನುಕೂಲವಾಗಲಿದೆ. ಚಿಕ್ಕಮ್ಯಾಗೇರಿ ಗ್ರಾಪಂನಲ್ಲಿ 10 ಮಹಿಳಾ ಸದಸ್ಯರಿದ್ದು, ಮಹಿಳಾ ಸದಸ್ಯರ ನೇತೃತ್ವದಲ್ಲಿ ಮಹಿಳಾ ಗ್ರಾಮ ಸಭೆ ನಡೆಸುತ್ತೇವೆ. ಗ್ರಾಮೀಣ ಮಹಿಳೆಯರಿಗೆ ಸರ್ಕಾರದಿಂದ ಸಿಗುವ ಸಾಲ ಸೌಲಭ್ಯ, ಮಹಿಳಾ ಅಭಿವೃದ್ಧಿ ಯೋಜನೆಗಳು, ಅಂಗನವಾಡಿ ಸೌಲಭ್ಯ, ಅನುದಾನದ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಈಗಾಗಲೇ ಚಿಕ್ಕಮ್ಯಾಗೇರಿ ಗ್ರಾಮದ ಸರ್ವೇ ನಂ-3 ರ ಎನ್.ಎ ಪ್ಲಾಟಿನ ನಾಗರಿಕ ಸೌಲಭ್ಯ ನಿಗದಿಪಡಿಸಿದ ನಿವೇಶನದಲ್ಲಿ ನರೇಗಾ ಯೋಜನೆಯಡಿ ₹17.50 ಲಕ್ಷ ವೆಚ್ಚದಲ್ಲಿ ಸಂಜೀವಿನಿ ಮಹಿಳಾ ಒಕ್ಕೂಟದ ಶೆಡ್ ನಿರ್ಮಾಣ ಮಾಡಲಾಗುತ್ತಿದೆ.ಇನ್ಮುಂದೆ ಪ್ರತಿ ಮಹಿಳೆಯರ ಸಮಸ್ಯೆ ಪರಿಹರಿಸಲು ಗ್ರಾಪಂ ವ್ಯಾಪ್ತಿಯಲ್ಲಿ ಮಹಿಳಾ ಗ್ರಾಮ ಸಭೆ ನಡೆಸಲಾಗುವುದು. ಗ್ರಾಮ ಸಭೆಯಲ್ಲಿ ಮಹಿಳೆಯರ ಸಮಸ್ಯೆ ಪರಿಹರಿಸಲಾಗುವುದು. ಮಹಿಳಾ ಸಂಘಗಳು ಕೇವಲ ಉಳಿತಾಯ ಸಂಘಗಳಾಗದೆ ಸ್ವಯಂ ಉದ್ಯೋಗ ಸಂಘಗಳಾಗಿ ಬೆಳೆಯಬೇಕು. ಸರ್ಕಾರದಿಂದ ಸಿಗುವ ಅನುದಾನ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ ನಾಯಕ್, ಎನ್ಆರ್ ಎಲ್‌ಎಂ ಬಿಆರ್ ಪಿ ಶಿಲ್ವಾ ಉಳ್ಳಾಗಡ್ಡಿ ಮಾತನಾಡಿದರು. ಗ್ರಾಪಂ ಸದಸ್ಯ ಶಾಂತಮ್ಮ ಮುರಾರಿ, ಹುಚ್ಚಮ್ಮ ಉಪ್ಪಾರ, ಎಂಬಿಕೆ ಶಿಲ್ಪಾ ಕುಡಗುಂಟಿ, ಎಲ್‌ಸಿಆರ್ ಪಿಗಳಾದ ಗೀತಾ ಕೀರ್ದಿ, ಕಾಳಮ್ಮ ಕಮ್ಮಾರ, ಆಶಾ ಕಾರ್ಯಕರ್ತೆಯರಾದ ಭೀಮಮ್ಮ ಬಿಂದ್ಗಿ, ರೇಣುಕಾ ದೇಸಾಯಿ, ನಿರ್ಮಲಾ ಉಪ್ಪಾರ, ಶಿವಗಂಗಮ್ಮ ಹೊಸಮನಿ, ಜ್ಯೋತಿ ಹಡಪದ, ಮಹಿಳಾ ಮುಖಂಡರಾದ ಭಾಗ್ಯ ಉಪನಾಳ ಈರಮ್ಮ ಬಿಂದ್ಗಿ, ಲೀಲಾವತಿ ಅಂಗಡಿ, ಗೌರಮ್ಮ ಪಾಟೀಲ್ ಇತರರಿದ್ದರು.