ರಾಮನರದಲ್ಲಿ ಸುಸಜ್ಜಿತ ದೇವರಾಜ ಅರಸು ಭವನ ನಿರ್ಮಾಣ: ಶಾಸಕ ಇಕ್ಬಾಲ್ ಹುಸೇನ್ ಭರವಸೆ

| Published : Oct 13 2025, 02:00 AM IST

ರಾಮನರದಲ್ಲಿ ಸುಸಜ್ಜಿತ ದೇವರಾಜ ಅರಸು ಭವನ ನಿರ್ಮಾಣ: ಶಾಸಕ ಇಕ್ಬಾಲ್ ಹುಸೇನ್ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದುಳಿದ ಸಮುದಾಯದವರಿಗೆ ಗುತ್ತಿಗೆ ಕಾಮಗಾರಿಗಳಲ್ಲಿ ಅವಕಾಶ ನೀಡಬೇಕು. ಸ್ವಂತ ಸೂರಿಲ್ಲದವರಿಗೆ ನಿವೇಶನ ಒದಗಿಸಬೇಕು. ಚನ್ನಪಟ್ಟಣ ಮತ್ತು ಮಾಗಡಿ ಕ್ಷೇತ್ರಗಳಲ್ಲಿಯೂ ಹಿಂದುಳಿದವರನ್ನು ಗುರುತಿಸಿ ಗೌರವಿಸುವ ಕೆಲಸ ಆಗಬೇಕು.

ಕನ್ನಡಪ್ರಭ ವಾರ್ತೆ ರಾಮನಗರ

ಜಿಲ್ಲಾ ಕೇಂದ್ರ ರಾಮನಗರದಲ್ಲಿ ದೇವರಾಜ ಅರಸು ಭವನ ನಿರ್ಮಾಣಕ್ಕೆ ಅರ್ಧ ಎಕರೆ ಜಾಗ ಗುರುತಿಸಲಾಗಿದ್ದು, ಮುಂದಿನ ಒಂದು ವರ್ಷದಲ್ಲಿ ಸುಸಜ್ಜಿತ ದೇವರಾಜ ಅರಸು ಭವನವನ್ನು ನಿರ್ಮಿಸಲಾಗುವುದು ಎಂದು ಶಾಸಕ ಇಕ್ಬಾಲ್ ಹುಸೇನ್ ಭರವಸೆ ನೀಡಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾ ಹಿಂದುಳಿದ ಜಾತಿಗಳ ಮಹಾ ಒಕ್ಕೂಟ ಆಯೋಜಿಸಿದ್ದ ಹೊಲಿಗೆ ಯಂತ್ರ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿದ ಅವರು, ದೇವರಾಜ ಅರಸು ಭವನ ನಿರ್ಮಾಣಕ್ಕೆ ಜಾಗ ಮೀಸಲಿಟ್ಟಿರುವುದನ್ನು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲಿಂದ ಅನುಮೋದನೆ ದೊರಕಿದಾಕ್ಷಣ ಭವನ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದರು.

ಈ ಭೂಮಿ ಮೇಲೆ ಸಹಸ್ರಾರು ಜನರು ಹುಟ್ಟುತ್ತಾರೆ, ಸಾವನ್ನಪ್ಪುತ್ತಾರೆ. ಮಹಾತ್ಮ ಗಾಂಧಿ, ಅಂಬೇಡ್ಕರ್ ಅವರಂತಹ ಕೆಲ ಜನರು ಮಾತ್ರ ಇತಿಹಾಸದ ಪುಟಗಳಲ್ಲಿ ಸೇರುತ್ತಾರೆ. ಅಂತಹ ಮಹಾನೀಯರ ಜಯಂತಿ ಮಾತ್ರ ಆಚರಣೆ ಮಾಡುತ್ತೇವೆ. ಅವರ ಸಾಲಿನಲ್ಲಿ ದೇವರಾಜ ಅರಸು ಸೇರಿದ್ದಾರೆ. ಅವರು ತಮ್ಮ ಆಡಳಿತದಲ್ಲಿ ಸುಧಾರಣೆ ತಂದು, ಉಳುವವನೆ ಭೂಮಿ ಒಡೆಯ ಕಾಯ್ದೆ ತಂದರು. ಜೀತ ಪದ್ಧತಿ ತೊಡೆದು ಹಾಕಿದ್ದಾರೆ. ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಸಣ್ಣ ಸಣ್ಣ ಜಾತಿಗಳನ್ನು ಗುರುತಿಸಿ ಅವರ ಅಭಿವೃದ್ಧಿಗಾಗಿ ಶ್ರಮಿಸಿದ್ದರು ಎಂದು ಸ್ಮರಿಸಿದರು.

ಅರಸು ಆಡಳಿತವನ್ನು ಆದರ್ಶವಾಗಿಟ್ಟುಕೊಂಡು ಬಂಗಾರಪ್ಪ, ವೀರಪ್ಪಮೊಯ್ಲಿ, ಧರಂಸಿಂಗ್ ಅವರು ಹಿಂದುಳಿದ ಸಮುದಾಯಕ್ಕೆ ಹಲವು ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆ ಮೂಲಕ ಹಸಿದವರ ಹೊಟ್ಟೆ ತುಂಬಿಸಿ ಹಸಿವು ಮುಕ್ತ ಕರ್ನಾಟಕ ಮಾಡಲು ಪಣ ತೊಟ್ಟಿದ್ದಾರೆ. ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಕೊಟ್ಟ ಐದು ಗ್ಯಾರಂಟಿಗಳು ಎಲ್ಲ ವರ್ಗದ ಜನರ ಬದುಕನ್ನು ಸುಧಾರಿಸುವ ಕೆಲಸವಾಗಿದೆ ಎಂದು ಹೇಳಿದರು.

ಹಿಂದುಳಿದ ಜಾತಿಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ರೈಡ್ ನಾಗರಾಜು ಮಾತನಾಡಿ, ಶಾಸಕರ ಮಾರ್ಗ ದರ್ಶನದಿಂದ ನಮ್ಮ ಸಂಘಟನೆ ಬಲಗೊಳ್ಳಲು ಸ್ಪೂರ್ತಿ ಸಿಕ್ಕಿದೆ. ರಾಮನಗರ ಶಾಸಕರ ಮಾದರಿಯಲ್ಲಿ ಜಿಲ್ಲೆಯ ಇತರ ಕ್ಷೇತ್ರಗಳ ಶಾಸಕರು ನಮ್ಮ ಹಿಂದುಳಿದ ಸಮುದಾಯದವರನ್ನು ಮೇಲೆತ್ತಲು ಸಹಕಾರ ನೀಡಬೇಕು. ಹಿಂದುಳಿದ ಸಮುದಾಯಗಳನ್ನು ನಿರ್ಲಕ್ಷ್ಯ ಮಾಡಿದವರನ್ನು ನಾವೂ ಸಹ ಚುನಾವಣೆಯಲ್ಲಿ ನಿರ್ಲಕ್ಷ್ಯ ಮಾಡುತ್ತೇವೆ ಎಂದರು.

ಹಿಂದುಳಿದ ಸಮುದಾಯದವರಿಗೆ ಗುತ್ತಿಗೆ ಕಾಮಗಾರಿಗಳಲ್ಲಿ ಅವಕಾಶ ನೀಡಬೇಕು. ಸ್ವಂತ ಸೂರಿಲ್ಲದವರಿಗೆ ನಿವೇಶನ ಒದಗಿಸಬೇಕು. ಚನ್ನಪಟ್ಟಣ ಮತ್ತು ಮಾಗಡಿ ಕ್ಷೇತ್ರಗಳಲ್ಲಿಯೂ ಹಿಂದುಳಿದವರನ್ನು ಗುರುತಿಸಿ ಗೌರವಿಸುವ ಕೆಲಸ ಆಗಬೇಕು ಎಂದು ಹೇಳಿದರು.

ಮಹಿಳಾ ಘಟಕ ಉಪಾಧ್ಯಕ್ಷೆ ಅರ್ಪಿತಾ ಮಾತನಾಡಿ, ಶಾಸಕರು ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಹಿಂದುಳಿದ ವರ್ಗಗಳ ಕಷ್ಟ ಸುಖಗಳು ಆ ವರ್ಗಗಳ ನಾಯಕರಿಗೆ ಮಾತ್ರ ಗೊತ್ತಿರುತ್ತದೆ. ಆ ನಿಟ್ಟಿನಲ್ಲಿ ನಾಯಕತ್ವದ ಗುಣ ಹೊಂದಿರುವ ಶಾಸಕ ಇಕ್ಬಾಲ್ ಹುಸೇನ್ ರವರು ಎಲ್ಲ ಸಮುದಾಯಗಳನ್ನು ಮೇಲೆತ್ತುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

ಪ್ರತಿಭಾನ್ವಿತ 200 ವಿದ್ಯಾರ್ಥಿಗಳಿಗೆ ಶಾಸಕರಾದ ಇಕ್ಬಾಲ್ ಹುಸೇನ್ ಅವರು ಆರ್ಥಿಕ ಸಹಾಯ ನೀಡಿ ಪ್ರತಿಭಾ ಪುರಸ್ಕಾರ ನೀಡಿದರು. ಕೆಎಸ್‌ಎಂಬಿ ಅಧ್ಯಕ್ಷ ಎಸ್.ಗಂಗಾಧರ್ ಮಾತನಾಡಿದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಟಿ. ವಿ. ನಾರಾಯಣ್, ಕಾರ್ಯದರ್ಶಿ ರಂಗಪ್ಪ, ಚನ್ನಪಟ್ಟಣ ತಾಲೂಕು ಅಧ್ಯಕ್ಷ ಮಾದೇಶ್, ಕನಕಪುರ ತಾಲೂಕು ಅಧ್ಯಕ್ಷ ರಾಮಮೂರ್ತಿ, ಹಾರೋಹಳ್ಳಿ ತಾಲೂಕು ಅಧ್ಯಕ್ಷ ಶ್ರೀನಿವಾಸ್, ಮುಖಂಡರಾದ ಪವಿತ್ರ ಆರ್.ಪ್ರಭಾಕರ್, ಗಂಗಾಧರ್, ಬಸವರಾಜು, ರಂಗಸ್ವಾಮಿ ಉಪಸ್ಥಿತರಿದ್ದರು.

------

ಜಿಲ್ಲೆಯ ಬಡ ಮಹಿಳೆಯರಿಗೆ ನನ್ನ ಸ್ವಂತ ಹಣದಲ್ಲಿ 500 ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡುತ್ತಿದ್ದೇನೆ. ಇದರ ಸದುಪಯೋಗ ಪಡೆದುಕೊಂಡು ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು. ಎಷ್ಟೇ ಕಷ್ಟವಿದ್ದರೂ ತಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಟ್ಟು, ಮಕ್ಕಳನ್ನು ಶೈಕ್ಷಣಿಕ ಆಸ್ತಿಯನ್ನಾಗಿ ಮಾಡಬೇಕು.

-ಇಕ್ಬಾಲ್ ಹುಸೇನ್, ಶಾಸಕರು