ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ಗ್ರಾಮ ಪಂಚಾಯ್ತಿಯಿಂದ ಹೊಸಹೊಳಲು ಗ್ರಾಮವು 2015ರಲ್ಲಿ ಬೇರ್ಪಟ್ಟಿತು. ಸರ್ಕಾರದ ಆದೇಶದಂತೆ ಹೊಸಹೊಳಲು ಹೊಸ ಗ್ರಾಮ ಪಂಚಾಯಿತಿಯಾಗಿ ಅಸ್ತಿತ್ವಕ್ಕೆ ಬಂದು ಕಾರ್ಯಾರಂಭವಾಯಿತು.

ಕನ್ನಡಪ್ರಭ ವಾರ್ತೆ ಮೈಸೂರು

ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ಗ್ರಾಮ ಪಂಚಾಯ್ತಿಯಿಂದ ಹೊಸಹೊಳಲು ಗ್ರಾಮವು 2015ರಲ್ಲಿ ಬೇರ್ಪಟ್ಟಿತು. ಸರ್ಕಾರದ ಆದೇಶದಂತೆ ಹೊಸಹೊಳಲು ಹೊಸ ಗ್ರಾಮ ಪಂಚಾಯಿತಿಯಾಗಿ ಅಸ್ತಿತ್ವಕ್ಕೆ ಬಂದು ಕಾರ್ಯಾರಂಭವಾಯಿತು.

ಹೊಸ ಗ್ರಾಮ ಪಂಚಾಯ್ತಿಗೆ ಸೂಕ್ತ ಕಟ್ಟಡ ಇಲ್ಲದೆ ಹೊಸಹೊಳಲು ಗ್ರಾಮದಲ್ಲಿದ್ದ ಹಳೇ ಸರ್ಕಾರಿ ಕಟ್ಟಡವೊಂದರಲ್ಲಿ 2015 ರಿಂದ 2023 ರವರೆಗೂ ಆಡಳಿತ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಗ್ರಾಮೀಣ ಜನರಿಗೆ ವಿವಿಧ ಸರ್ಕಾರಿ ಸೌಲಭ್ಯಗಳನ್ನು ಒದಗಿಸಲು ಹೊಸ ಕಟ್ಟಡ ಅವಶ್ಯಕ ಎಂದು ಅರಿತ ಗ್ರಾಪಂ ಚುನಾಯಿತ ಪ್ರತಿನಿಧಿಗಳು, ಸಭೆಯಲ್ಲಿ ತೀರ್ಮಾನ ಕೈಗೊಂಡು ಹೊಸ ಕಟ್ಟಡ ನಿರ್ಮಾಣಕ್ಕೆ ಮುನ್ನುಡಿ ಬೆರೆದರು.

ಹೊಸಹೊಳು ಗ್ರಾಪಂ ವ್ಯಾಪ್ತಿಯಲ್ಲಿ 5 ಕಂದಾಯ ಗ್ರಾಮ ಹಾಗೂ 5 ಉಪ ಗ್ರಾಮಗಳಿದ್ದು, 7200 ಹೆಚ್ಚು ಜನಸಂಖ್ಯೆ ವಾಸಿಸುತ್ತಿದ್ದಾರೆ. ಗ್ರಾಮೀಣ ಜನರಿಗೆ ಮೂಲಕ ಸೌಕರ್ಯಗಳು ಹಾಗೂ ಸರ್ಕಾರದ ಸೇವೆಗಳನ್ನು ತಲುಪಿಸಲು ಹೊಸಹೊಳಲು ಗ್ರಾಪಂ ಕಚೇರಿ ಅಥವಾ ರಾಜೀವಗಾಂಧಿ ಸೇವಾ ಕೇಂದ್ರ ನಿರ್ಮಾಣ ಕಾಮಗಾರಿಯನ್ನು ವಿಬಿ ಜಿ ರಾಮ್ ಜಿ (ಮನರೇಗಾ) ಯೋಜನೆ ಹಾಗೂ ಇತರೆ ಅನುದಾದನಲ್ಲಿ ನಿರ್ಮಿಸಲಾಗಿದೆ.

ವಿಬಿ ಜಿ ರಾಮ್ ಜಿ (ಮನರೇಗಾ) ಯೋಜನೆಯಡಿ 15.50 ಲಕ್ಷ ರು., 15ನೇ ಹಣಕಾಸು ಯೋಜನೆಯಲ್ಲಿ 4 ಲಕ್ಷ ರು. ಹಾಗೂ ಹೊಸ ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಸರ್ಕಾರದಿಂದ ನೀಡಿದ 20 ಲಕ್ಷ ರೂ. ಸೇರಿದಂತೆ ಒಟ್ಟು 39.50 ಲಕ್ಷ ರು. ಅನುದಾನದಲ್ಲಿ ತಾಲೂಕಿನಲ್ಲೇ ಅತ್ಯಂತ ಉತ್ತಮವಾದ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ.

ನಾನು ಈ ಗ್ರಾಪಂಗೆ ಬರುವ ಮೊದಲೇ ಕಾಮಗಾರಿ ಅನುಷ್ಠಾನ ಮಾಡಲಾಗಿತ್ತು. ಆದರೆ ಪೂರ್ಣಗೊಂಡಿರಲಿಲ್ಲ. ಬಾಕಿ ಇದ್ದ ಕಟ್ಟಡ ಕೆಲಸ ಪೂರ್ಣಗೊಳಿಸಿ, ಸಾರ್ವಜನಿಕ ಸೇವೆಗೆ ಲೋಕಾರ್ಪಣೆಗೊಳಿಸಿರುವುದು ಸಂತಸ ತಂದಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಚ್.ಆರ್. ರಮೇಶ್ ತಿಳಿಸಿದ್ದಾರೆ.

ವಿಶಾಲವಾದ ಸಭಾಂಗಣ:

ಗ್ರಾಮ ಪಂಚಾಯ್ತಿಯಲ್ಲಿ ಚುನಾಯಿತ ಸದಸ್ಯರ ಹಾಗೂ ಯಾವುದೇ ರೀತಿಯ ಸಭೆಗಳನ್ನು ಮಾಡಲು ಅನುಕೂಲವಾಗಲೆಂದು ವಿಶಾಲವಾಗಿ ಸಭಾಂಗಣ ನಿರ್ಮಿಸಿ, ಗೋಡೆಗಳಲ್ಲಿ ಮಹನೀಯರ ಭಾವಚಿತ್ರಗಳನ್ನು ಹಾಕಲಾಗಿದೆ. ಎಲ್ಇಡಿ ಪ್ರೊಜೆಕ್ಟರ್ ಮತ್ತು ಧ್ವನಿವರ್ಧಕ ಅಳವಡಿಸಿದ್ದು, ಸಭೆಗೆ ಮಾಹಿತಿ ಪ್ರದರ್ಶಿಸಲು ಸಹಕಾರಿಯಾಗಿದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಒಳಗೊಂಡ ಸುಸಜ್ಜಿತ ಸಭಾಂಗಣವನ್ನು ನಿರ್ಮಿಸಲಾಗಿದೆ.

ಗ್ರಾಮೀಣ ಪ್ರದೇಶದ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದಾಗ ಯಾರನ್ನು ಸಂಪರ್ಕ ಮಾಡಬೇಕು ಎಂಬ ಗೊಂದಲಕ್ಕೀಡಾಗಂತೆ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಕರ ವಸೂಲಿ ಕಾರ, ಡೇಟಾ ಎಂಟ್ರಿ ಆಪರೇಟರ್ ಹಾಗೂ ದಾಖಲಾತಿ ಸಂರಕ್ಷಣಾ ಕೊಠಡಿಗಳು ಪ್ರತ್ಯೇಕ ಕೊಠಡಿಗಳು ಮತ್ತು ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿ ಕೊಠಡಿಗಳಲ್ಲಿ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿದೆ.

ಅಲ್ಲದೆ, ವಿಶೇಷಚೇತನರು ಹಾಗೂ ಹಿರಿಯ ನಾಗರೀಕರಿಗೆ ಅನುಕೂಲವಾಗಲೆಂದು ರ್ಯಾಂಪ್ ನಿರ್ಮಿಸಿದ್ದು, ಇದರಿಂದ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಿಬ್ಬಂದಿ ಉತ್ತಮವಾಗಿ ಕೆಲಸ ನಿರ್ವಹಿಸಲು ಸಹಕಾರಿಯಾಗಿದೆ.

ಗ್ರಾಮೀಣ ಜನರಿಗೆ ಸ್ಥಳೀಯ ಆಡಳಿತ ಸಂಸ್ಥೆಯಾದ ಗ್ರಾಪಂ ಮೂಲಕ ಮೂಲ ಸೌಕರ್ಯಗಳನ್ನು ಒದಗಿಸುವುದು ನಮ್ಮ ಆದ್ಯ ಕರ್ತವ್ಯವಾಗಿದ್ದು, ಸೂಕ್ತವಾದ ಕಟ್ಟಡ ನಿರ್ಮಾಣದಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ಉತ್ಸುಕತೆಯಿಂದ ಸಾರ್ವಜನಿಕ ಕೆಲಸ ಮಾಡಲು ಸಹಕಾರಿಯಾಗುತ್ತದೆ.

- ಎಸ್. ರವಿಚಂದ್ರ, ಇಒ, ಎಚ್.ಡಿ.ಕೋಟೆ ತಾಪಂ