ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ವೃಕ್ಷೋದ್ಯಾನ ನಿರ್ಮಾಣ

| Published : Dec 25 2024, 12:47 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ನಿಸರ್ಗ ಪ್ರೇಮಿ ಸಿದ್ದೇಶ್ವರ ಶ್ರೀಗಳಿಗೆ ಅರಣ್ಯ ಪ್ರದೇಶ ಅರ್ಪಣೆ ಮಾಡಲಾಗಿದ್ದು, ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ವೃಕ್ಷೋದ್ಯಾನವನ್ನು ₹ 2.80 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ನಿಸರ್ಗ ಪ್ರೇಮಿ ಸಿದ್ದೇಶ್ವರ ಶ್ರೀಗಳಿಗೆ ಅರಣ್ಯ ಪ್ರದೇಶ ಅರ್ಪಣೆ ಮಾಡಲಾಗಿದ್ದು, ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ವೃಕ್ಷೋದ್ಯಾನವನ್ನು ₹ 2.80 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ತಾಲೂಕಿನ ಸಾವಳಸಂಗ ಗ್ರಾಮದ ಅರಣ್ಯ ಪ್ರದೇಶದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಹಮ್ಮಿಕೊಂಡ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ವೃಕ್ಷೋದ್ಯಾನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ವೃಕ್ಷವನ್ನು ಪ್ರೀತಿಸುವುದು, ರಕ್ಷಿಸುವುದು ಅದು ಧರ್ಮ. ನಿಸರ್ಗವನ್ನು ಪ್ರೀತಿಸಿದರೆ ಜೀವನ ಪಾವನವಾಗುತ್ತದೆ, ದೇವರ ದರ್ಶನವಾಗುತ್ತದೆ ಎಂದು ಪ್ರಕೃತಿಯಲ್ಲಿ ದೇವರನ್ನು ಕಂಡ ಸಾತ್ವಿಕತೆಯ ಸಂತರಾಗಿ ಬೆಳೆದು ಬಂದವರು ಸಿದ್ದೇಶ್ವರ ಶ್ರೀಗಳು. ಅವರ ಹೆಸರಿನಲ್ಲಿ ಸಾವಳಸಂಗ ಅರಣ್ಯ ಪ್ರದೇಶದಲ್ಲಿ ಟ್ರೀ ಪಾರ್ಕ್‌ ನಿರ್ಮಿಸುತ್ತಿರುವುದು ಸಂತಸದ ಸಂಗತಿ ಎಂದರು.

ವೃಕ್ಷಗಳ ಮಧ್ಯ ಪ್ರಪಂಚದಲ್ಲಿ ಯಾವುದಾದರೂ ದೇಶ ಕಾಣುವುದುದೆಂದರೆ ಅದು ಭಾರತ ದೇಶ, ದೇಶದ ಪ್ರಕೃತಿಯನ್ನು ಎತ್ತಿತೊರಿಸಿದ ಮಹಾ ಪ್ರಕೃತಿ ಪ್ರೇಮಿಯಾಗಿದ್ದರು ಶ್ರೀಗಳು. ಅಂತಹ ಮಹಾನ್‌ ಆದರ್ಶ ಸಂತರ ನಡೆ, ನುಡಿ ನಮಗೆಲ್ಲ ದಾರಿದೀಪವಾಗಿವೆ. ಅವರ ಆದರ್ಶ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಜೀವನ ಸುಂದರಗೊಳಿಸಿಕೊಳ್ಳಬೇಕು ಎಂದು ಹೇಳಿದರು.

ಎಲ್ಲ ವಸ್ತುಗಳಿಗಿಂತ ಅನ್ನ, ನೀರು, ಗಾಳು ಮುಖ್ಯ. ಈ ಮೂರು ಇಲ್ಲದಿದ್ದರೆ ಬದುಕಲು ಸಾಧ್ಯವಿಲ್ಲ. ಹೀಗಾಗಿ ಪ್ರತಿಯೊಬ್ಬರು ಪ್ರಕೃತಿಯನ್ನು ಪೂಜಿಸಿ, ಆರಾಧಿಸಬೇಕು. ಸಾವಳಸಂಗ ಅರಣ್ಯ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು, ಪೋಷಿಸುತ್ತಿರುವ ಅರಣ್ಯ ಇಲಾಖೆಯ ಕಾರ್ಯವನ್ನು ಪ್ರಶಂಸಿಸಿ, ನಾಡಿನಲ್ಲಿ ಹಸಿರು ಮಾಡುವುದು ಮುಖ್ಯವಲ್ಲ. ಬರದ ನಾಡಿನಲ್ಲಿ ಹಸಿರು ಮಾಡುವುದು ಮುಖ್ಯ. ಸಾವಳಸಂಗ ಅರಣ್ಯ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು ಪೊಷಿಸುತ್ತಿರುವ ಅರಣ್ಯ ಇಲಾಖೆಯ ಕಾರ್ಯವನ್ನು ಶ್ಲಾಘೀಸಿದ ಶಾಸಕರು, ಶ್ರೀಗಳ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ವೃಕ್ಷೋದ್ಯಾನವನ್ನು ಪ್ರವಾಸಿಗರನ್ನು ಆಕರ್ಷಿಸುವ ರೀತಿಯಲ್ಲಿ ನಿರ್ಮಿಸಬೇಕು ಎಂದು ಹೇಳಿದರು.

ಜನಪ್ರತಿನಿಧಿಗಳು ಶ್ರೀಗಳನ್ನು ಭೇಟಿಯಾಗಲು ಹೋದಾಗ ವಿಜಯಪುರ ಜಿಲ್ಲೆಯ ಪ್ರತಿ ಭೂಮಿಗೆ ನೀರು ಕೊಡಿ, ರೈತರು ಬಂಗಾರ ಬೆಳೆದ ಈ ನಾಡು ಬಂಗಾರದಂತೆ ಬೆಳಗಿಸುತ್ತಾರೆ ಎನ್ನುವ ಅವರ ಕಳಕಳಿಯ ಮಾತು ನಮಗೆಲ್ಲ ಆದರ್ಶವಾಗಿವೆ ಎಂದು ಹೇಳಿದರು.

ಅಮೃತಾನಂದ ಶ್ರೀಗಳು ಸಾನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಸಾವಿತ್ರಿ ಮೋರೆ, ದುಂಡಪ್ಪಸಾಹುಕಾರ ಖೇಡ, ಎಂ.ಆರ್‌.ಪಾಟೀಲ, ಎಸಿ ಅಬೀದ್ ಗದ್ಯಾಳ, ತಹಸೀಲ್ದಾರ್‌ ಬಿ.ಎಸ್‌.ಕಡಕಭಾವಿ, ಸಾಮಾಜಿಕ ಅರಣ್ಯ ಇಲಾಖೆ ಡಿಎಫ್‌ಒ ವನಿತಾ.ಆರ್‌, ಡಿಎಫ್‌ಒ ಪ್ರಾದೇಶಿಕ ಅರಣ್ಯ ಇಲಾಖೆಯ ಶಿವಶರಣಯ್ಯ, ಎಸಿಎಫ್‌ ಸಮಾಜಿಕ ಅರಣ್ಯ ಇಲಾಖೆಯ ಎ.ಎಸ್‌.ಪಾಕಿ, ಎಸಿಎಫ್‌ ಪ್ರಾದೇಶಿ ಅರಣ್ಯ ಇಲಾಖೆಯ ಭಾಗ್ಯವಂತ ವಸೂದಿ, ತಾಪಂ ಇಒ ನಂದೀಪ ರಾಠೋಡ, ಚಡಚಣ ಇಒ ಸಂಜಯ ಖಡಗೇಕರ, ಆರ್‌ಎಫ್‌ಒ ಸಾಮಾಜಿಕ ಅರಣ್ಯ ಇಲಾಖೆಯ ಮಂಜುನಾಥ ಧೂಳೆ, ಆರ್‌ಎಫ್‌ಒ ಪ್ರಾದೇಶಿಕ ಅರಣ್ಯ ಇಲಾಖೆ ಎಸ್‌.ಜಿ.ಸಂಗಾಲಕ, ನೌಕರರ ಸಂಘದ ಅಧ್ಯಕ್ಷ ಬಸವರಾಜ ರಾವೂರ ಮೊದಲಾದವರು ಕಾರ್ಯಕ್ರಮದಲ್ಲಿ ಇದ್ದರು. ಡಿ.ಎ.ಮುಜಗೊಂಡ ನಿರೂಪಿಸಿ, ವಂದಿಸಿದರು.