ನಾಗಮಂಗಲ ತಾಲೂಕಿನಲ್ಲಿ ಸ್ಥಾಪಿತಗೊಂಡಿರುವ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗೆ ಪ್ರತಿನಿತ್ಯ ದೂರದ ಊರುಗಳಿಂದ ನೂರಾರು ಮಂದಿ ಜನರು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಬಂದು ಹೋಗುವ ಮತ್ತು ಈ ಭಾಗದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಿಎಸ್‌ಆರ್ ನಿಧಿಯಲ್ಲಿ ಸುಸಜ್ಜಿತ ಪ್ರಯಾಣಿಕರ ತಂಗುದಾಣ ನಿರ್ಮಿಸಲಾಗಿದೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಗ್ರಾಮೀಣ ಪ್ರದೇಶದ ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಜನರ ಅನುಕೂಲಕ್ಕಾಗಿ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಿಸಲಾಗುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.ತಾಲೂಕಿನ ಎಂ.ಹೊಸೂರು ಗೇಟ್ ಬಳಿಯಿರುವ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಅನುಸಂಧಾನ ಪರಿಷತ್ ಮುಂಭಾಗದ ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ ಸಿಎಸ್‌ಆರ್ ನಿಧಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಬಸ್ ಪ್ರಯಾಣಿಕರ ತಂಗುದಾಣವನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕಿನಲ್ಲಿ ಸ್ಥಾಪಿತಗೊಂಡಿರುವ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗೆ ಪ್ರತಿನಿತ್ಯ ದೂರದ ಊರುಗಳಿಂದ ನೂರಾರು ಮಂದಿ ಜನರು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಬಂದು ಹೋಗುವ ಮತ್ತು ಈ ಭಾಗದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಿಎಸ್‌ಆರ್ ನಿಧಿಯಲ್ಲಿ ಸುಸಜ್ಜಿತ ಪ್ರಯಾಣಿಕರ ತಂಗುದಾಣ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಆಸ್ಪತ್ರೆ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.ಸಾರಿಗೆ ಬಸ್ ನಿಲುಗಡೆಗೆ ಮನವಿ ಸಲ್ಲಿಕೆ:
ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಅನುಸಂಧಾನ ಪರಿಷತ್ ಮುಂಭಾಗದಲ್ಲಿ ವೇಗಧೂತ ಸಾರಿಗೆ ಬಸ್‌ಗಳ ಕೋರಿಕೆ ನಿಲುಗಡೆ ನೀಡುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಕೂಡ ಈ ವರೆಗೂ ಯಾವುದೇ ಕ್ರಮವಹಿಸಿಲ್ಲ.ಆಸ್ಪತ್ರೆಗೆ ಬರುವ ಜನರ ಅನುಕೂಲಕ್ಕಾಗಿ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ಬಗೆಯ ಸಾರಿಗೆ ಬಸ್‌ಗಳ ನಿಲುಗಡೆ ಮಾಡಿಸಿಕೊಡುವಂತೆ ಆಸ್ಪತ್ರೆ ಸಹಾಯಕ ನಿರ್ದೇಶಕ ಹಾಗೂ ನೋಡಲ್ ಅಧಿಕಾರಿ ಡಾ.ಎಚ್.ಎಸ್.ವಾದಿರಾಜ್ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಬಗ್ಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದು ಕೇಂದ್ರ ಸಚಿವರು ಭರವಸೆ ನೀಡಿದರು.
ಈ ವೇಳೆ ಮಾಜಿ ಶಾಸಕ ಸುರೇಶ್‌ಗೌಡ, ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು, ರಾಜ್ಯ ಒಕ್ಕಲಿಗರ ಸಂಘದ ಸಂಘಟನಾ ಕಾರ್ಯದರ್ಶಿ ನೆಲ್ಲಿಗೆರೆ ಬಾಲು, ತಾಲೂಕು ಜೆಡಿಎಸ್ ಅಧ್ಯಕ್ಷ ಎಂ.ಸಿ.ಚನ್ನಪ್ಪ, ಆಸ್ಪತ್ರೆ ನೋಡಲ್ ಅಧಿಕಾರಿ ಡಾ.ಎಚ್.ಎಸ್.ವಾದಿರಾಜ್, ಫಿಜಿಯೋ ಥೆರಪಿಸ್ಟ್ ರಮ್ಯ, ಮುಖಂಡರಾದ ಗಿರೀಶ್ ಅಧಿಪತಿ, ಕೆಂಪೇಗೌಡ (ಕೋಳಿರಾಮ) ವಿಜಯಕುಮಾರ್ ಸೇರಿದಂತೆ ಹಲವರು ಇದ್ದರು.