ಸಾರಾಂಶ
ಧರ್ಮಪುರ ಹೋಬಳಿ ಕೇಂದ್ರದಲ್ಲಿ ಬಸ್ ನಿಲ್ದಾಣವಿಲ್ಲದೆ ಎಲ್ಲೆಂದರಲ್ಲಿ ವಾಹನ ನಿಲುಗಡೆ ಆಗುತ್ತಿರುವುದು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ಭೇಟಿ ಮಾಡಿದ ಡಿ.ಸುಧಾಕರ್‌ಕನ್ನಡಪ್ರಭ ವಾರ್ತೆ ಹಿರಿಯೂರು
ನಗರದಿಂದ 30 ಕಿಮೀ ದೂರದ ಧರ್ಮಪುರದಲ್ಲಿ ಒಂದು ಸುಸಜ್ಜಿತ ಬಸ್ ನಿಲ್ದಾಣವಿಲ್ಲ ಎಂಬುದನ್ನು ಗಮನಿಸಿದ ಸಚಿವರು ಮತ್ತೊಂದು ಅಭಿವೃದ್ಧಿಯ ಹೆಜ್ಜೆ ಇಟ್ಟಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರನ್ನು ಭೇಟಿ ಮಾಡಿ ಧರ್ಮಪುರ ಹೋಬಳಿಯು ನೆರೆಯ ಆಂದ್ರ ಗಡಿ ಭಾಗಕ್ಕೆ ಹೊಂದಿಕೊಂಡಿದ್ದು ವ್ಯಾಪಾರದ ನಿಮಿತ್ತ ದಿನವೂ ಹೊರ ರಾಜ್ಯದ ಜನರು ಧರ್ಮಪುರಕ್ಕೆ ಬರುತ್ತಿರುತ್ತಾರೆ. ಹೋಬಳಿ ಕೇಂದ್ರವಾದ್ದರಿಂದ ಹೋಬಳಿಯ ಹಳ್ಳಿಗಳ ನೂರಾರು ಜನರು ದಿನoಪ್ರತಿ ಸರ್ಕಾರಿ ಕೆಲಸಗಳಿಗೆ ಶಾಲೆ ಕಾಲೇಜುಗಳಿಗೆ, ಸರ್ಕಾರಿ ಆಸ್ಪತ್ರೆಗೆ ಬರುತ್ತಿರುತ್ತಾರೆ. ಹಾಗಾಗಿ ಅವರ ಸುರಕ್ಷಿತ ಓಡಾಟಕ್ಕೆ ಮತ್ತು ಅವರಿಗೆ ವಿಶ್ರಾಂತಿಗೆ ಒಂದು ಸುಸಜ್ಜಿತ ಬಸ್ ನಿಲ್ದಾಣದ ಅವಶ್ಯಕತೆ ಇದ್ದು ಈಗಾಗಲೇ ಗ್ರಾಪಂಯಿಂದ ಬಸ್ ನಿಲ್ದಾಣಕ್ಕೆ ಜಾಗ ಗುರುತು ಮಾಡಲಾಗಿದ್ದು ಆಧುನಿಕ ಬಸ್‌ನಿಲ್ದಾಣ ನಿರ್ಮಿಸಲು ಅನುದಾನ ಬಿಡುಗಡೆ ಮಾಡಿ ಎಂದು ಮನವಿ ಮಾಡಿದ್ದಾರೆ.ಧರ್ಮಪುರ ಹೋಬಳಿಯ ವ್ಯಾಪ್ತಿಯಲ್ಲಿ 6 ಗ್ರಾಪಂ ಗಳಿದ್ದು 49 ಗ್ರಾಮಗಳಿವೆ. ಹೋಬಳಿ ಕೇಂದ್ರದಲ್ಲಿ ನಿವೇಶನ ಬೆಲೆ, ಭೂಮಿ ಖರೀದಿ ಬೆಲೆ ಗಗನಕೇರಿದ್ದು ವ್ಯಾಪಾರ ವಹಿವಾಟು ಜೋರಾಗಿದೆ. ದಿನೇ ದಿನೇ ಜನರ ಸಂಚಾರ ಹೆಚ್ಚಿದೆ. ಆಂಧ್ರಪ್ರದೇಶ, ಶಿರಾ, ಚಳ್ಳಕೆರೆಗೆ ಮಾರ್ಗ ಕಲ್ಪಿಸುವ ಧರ್ಮಪುರದಲ್ಲಿ ಒಂದು ಬಸ್ ನಿಲ್ದಾಣ ಇಲ್ಲದಿರುವುದು ವಿಪರ್ಯಾಸವಾಗಿದೆ.
ಗ್ರಾಮಕ್ಕೆ ಹೊಂದಿಕೊಂಡಂತೆ ಐತಿಹಾಸಿಕ ಕೆರೆ ಇದ್ದು ಸಮೀಪ ರಾಜಕಾಲುವೆ ಇದೆ. ಧರ್ಮಪುರದ ಶ್ರೀ ಶನೇಶ್ವರ ದೇವಾಲಯ ಸುತ್ತಮುತ್ತ ಬಸ್ ಗಳು ನಿಲ್ಲುತ್ತವೆ. ಸರಿಯಾದ ಬಸ್ ನಿಲ್ದಾಣ ಇಲ್ಲದೆ ಇರುವುದರಿಂದ ರಸ್ತೆಯಲ್ಲೇ ಬಸ್ಸುಗಳನ್ನ ನಿಲ್ಲಿಸುವ ಸ್ಥಿತಿ ನಿರ್ಮಾಣವಾಗಿದೆ. 15-20 ನಿಮಿಷಕೊಮ್ಮೆ 30ಕ್ಕೂ ಹೆಚ್ಚು ಬಸ್ಸುಗಳು ದಿನನಿತ್ಯ ಈ ಭಾಗದಲ್ಲಿ ಸಂಚರಿಸುತ್ತಿವೆ. ಆಂಧ್ರಪ್ರದೇಶ ಹಾಗೂ ಪಾವಗಡದಿಂದ ಧರ್ಮಪುರ ಮಾರ್ಗವಾಗಿ ಹಿರಿಯೂರು ತಲುಪುತ್ತವೆ. ಅಲ್ಲದೆ ಧರ್ಮಪುರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಉಪ ಪೊಲೀಸ್ ಠಾಣೆ, ಗ್ರಾಪಂ, ಕೃಷಿ ಇಲಾಖೆ, ಗ್ರಾಮೀಣ ಬ್ಯಾಂಕು, ಪ್ರವಾಸಿ ಮಂದಿರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನಾಡ ಕಚೇರಿಗಳಂತಹ ಜನ ಸೇರುವ ಇಲಾಖೆಗಳಿದ್ದು ದಿನವೂ ಬಂದು ಹೋಗುವ ಜನರ ಸುರಕ್ಷತೆಗೆ ಬಸ್ ನಿಲ್ದಾಣ ಇಲ್ಲದ್ದು ಹೋಬಳಿ ಜನರ ಬಹು ದಿನದ ಬೇಡಿಕೆಯಾಗಿತ್ತು. ಇದೀಗ ಧರ್ಮಪುರ ಹೋಬಳಿ ಕೇಂದ್ರದ ಬಸ್ ನಿಲ್ದಾಣದ ಸಮಸ್ಯೆ ಮನಗಂಡ ಸಚಿವರು ಸಾರಿಗೆ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಅನುದಾನಕ್ಕೆ ಬೇಡಿಕೆ ಇಟ್ಟಿರುವುದು ಹೋಬಳಿಯ ಜನರಲ್ಲಿ ಸಮಾಧಾನ ಮೂಡಿಸಿದೆ.