ಕಾಲೇಜು ಸುರಕ್ಷತೆಗೆ ಕಾಂಪೌಂಡ್ ನಿರ್ಮಾಣ: ಶಾಸಕ ಎಚ್.ಟಿ.ಮಂಜು

| Published : Mar 14 2024, 02:04 AM IST

ಸಾರಾಂಶ

ಈ ಹಿಂದೆ ತಾಂತ್ರಿಕ ಶಿಕ್ಷಣ ಪಡೆದರೆ ಸಾಕು ಕೆಲಸ ಗ್ಯಾರಂಟಿ ಎನ್ನುವ ಭಾವನೆಯಿತ್ತು. ಉತ್ತಮ ಅಧ್ಯಾಪಕ ವರ್ಗವನ್ನು ಹೊಂದಿ ರಾಜ್ಯಕ್ಕೆ ಅನೇಕ ತಾಂತ್ರಿಕ ಪರಿಣಿತರನ್ನು ಕೊಡುಗೆಯಾಗಿ ಕೊಟ್ಟ ಕಾಲೇಜು ನಮ್ಮ ಸರ್ಕಾರಿ ಪಾಲಿಟೆಕ್ನಿಕ್. ಇತ್ತೀಚಿನ ದಿನಗಳಲ್ಲಿ ಪಟ್ಟಣಕ್ಕೆ ಎಂಜಿನಿಯರಿಂಗ್ ಕಾಲೇಜಿನ ಅವಶ್ಯಕತೆ ಇರುವುದನ್ನು ಮನಗಂಡ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ಅನುಮತಿ ನೀಡಿ ಬೃಹತ್ ಕಟ್ಟಡ ತಲೆಎತ್ತಿ ನಿಂತಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸರ್ಕಾರಿ ಪಾಲಿಟೆಕ್ನಿಕ್ ಹಾಗೂ ಕೃಷ್ಣ ಎಂಜಿನಿಯರಿಂಗ್ ತಾಂತ್ರಿಕ ಕಾಲೇಜುಗಳಿಗೆ ಸುರಕ್ಷತೆ ದೃಷ್ಟಿಯಿಂದ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.

ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ 4 ಕೋಟಿ ರು. ವೆಚ್ಚದ ಹೈಟೆಕ್ ಗ್ರಂಥಾಲಯ ಮತ್ತು ಲ್ಯಾಬ್ ಕಟ್ಟಡ ಮತ್ತು ಕೃಷ್ಣ ಸರ್ಕಾರಿ ಎಂಜಿನಿಯರ್ ಕಾಲೇಜಿಗೆ 2 ಕೋಟಿ ರು. ವೆಚ್ಚದ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಎಂ.ಕೆ.ಬೊಮ್ಮೇಗೌಡರ ಪ್ರಯತ್ನದ ಫಲವಾಗಿ ತಾಲೂಕಿಗೆ ಪಾಲಿಟೆಕ್ನಿಕ್ ಕಾಲೇಜು ಬಂತು. ಎಂಜಿನಿಯರ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳು ಪಟ್ಟಣಕ್ಕೆ ಅವಳಿರತ್ನಗಳಿದ್ದಂತೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಸ್ಥಾನಮಾನ ಗಳಿಸಿದ್ದಾರೆ ಎಂದರು.

ಈ ಹಿಂದೆ ತಾಂತ್ರಿಕ ಶಿಕ್ಷಣ ಪಡೆದರೆ ಸಾಕು ಕೆಲಸ ಗ್ಯಾರಂಟಿ ಎನ್ನುವ ಭಾವನೆಯಿತ್ತು. ಉತ್ತಮ ಅಧ್ಯಾಪಕ ವರ್ಗವನ್ನು ಹೊಂದಿ ರಾಜ್ಯಕ್ಕೆ ಅನೇಕ ತಾಂತ್ರಿಕ ಪರಿಣಿತರನ್ನು ಕೊಡುಗೆಯಾಗಿ ಕೊಟ್ಟ ಕಾಲೇಜು. ಇತ್ತೀಚಿನ ದಿನಗಳಲ್ಲಿ ಪಟ್ಟಣಕ್ಕೆ ಎಂಜಿನಿಯರಿಂಗ್ ಕಾಲೇಜಿನ ಅವಶ್ಯಕತೆ ಇರುವುದನ್ನು ಮನಗಂಡ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ಅನುಮತಿ ನೀಡಿ ಬೃಹತ್ ಕಟ್ಟಡ ತಲೆಎತ್ತಿ ನಿಂತಿದೆ ಎಂದರು.

ಕಾಲೇಜಿನ ಸುರಕ್ಷತೆಯ ದೃಷ್ಟಿಯಿಂದ ಕಾಂಪೌಂಡ್ ಅವಶ್ಯಕವಾಗಿದೆ. ಕಾಂಪೌಡ್ ಗುಣಮಟ್ಟದಿಂದ ನಿರ್ಮಿಸಬೇಕು. ಇಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸುಸಜ್ಜಿತ ಗ್ರಂಥಾಲಯ ಕಟ್ಟಡವನ್ನೂ ಸಹ ನಿರ್ಮಾಣ ಮಾಡಲಾಗಿದೆ ಎಂದರು.

ಈ ವೇಳೆ ಮನ್ಮುನ್ ಮಾಜಿ ಅಧ್ಯಕ್ಷ ಎಂ.ಬಿ ಹರೀಶ್, ಸಂತೆಬಾಚಹಳ್ಳಿ ಹೋಬಳಿ ಜೆಡಿಎಸ್ ಅಧ್ಯಕ್ಷ ರವಿಕುಮಾರ್, ಪುರಸಭಾ ಸದಸ್ಯ ಗಿರೀಶ್, ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ನಾಗರಾಜು, ಕೃಷ್ಣ ಸರ್ಕಾರಿ ಎಂಜಿನಿಯರ್ ಕಾಲೇಜ್ ಪ್ರಾಂಶುಪಾಲ ದಿನೇಶ್, ಉಪನ್ಯಾಸಕ ಮಹೇಶ್, ಅಧಿಕಾರಿ ವೆಂಕಟೇಶ್, ಗುತ್ತಿಗೆದಾರ ಶೀಳನೆರೆಭರತ್, ಶಾಸಕರ ಆಪ್ತ ಸಹಾಯಕ ಪ್ರತಾಪ್ ಸೇರಿದಂತೆ ಹಲವರಿದ್ದರು.