ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ:
ಯೂರೋಪ್ ಮಾದರಿಯಲ್ಲಿ ದಾವಣಗೆರೆ ಮಹಾ ನಗರದ ವಿವಿಧ ಬಡಾವಣೆಗಳ ವೃತ್ತಗಳನ್ನು ನಿರ್ಮಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದರು.ನಗರದ ಎಂಸಿಸಿ ಬಿ ಬ್ಲಾಕ್‌ನಲ್ಲಿ ₹80 ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಇಲ್ಲಿನ ಡಾ.ಎಂ.ಸಿ.ಮೋದಿ ವೃತ್ತ, ಶಿವಪ್ಪಯ್ಯ ವೃತ್ತ ಸೇರಿದಂತೆ ವಿವಿಧ ಬಡಾವಣೆಗಳ ವೃತ್ತಗಳಿಗೆ ಹೈಟೆಕ್ ಸ್ಪರ್ಶ ನೀಡಲು ಸಂಬಂಧಿಸಿದವರಿಗೆ ಸೂಚನೆ ನೀಡಲಾಗಿದೆ ಎಂದರು.
ಹಿಂದೆ ಮಳೆ ಬಂದರೆ ಎಂಸಿಸಿ ಕಾಲನಿ ಬಿ ಬ್ಲಾಕ್‌ನ ಅನೇಕ ಮನೆಗಳಿಗೆ ಮಳೆ ನೀರು ನುಗ್ಗುತ್ತಿತ್ತು. ಇಡೀ ಪಾಲಿಕೆಯ 45 ವಾರ್ಡ್‌ಗಳ ಪೈಕಿ ಎಂಸಿ ಕಾಲನಿ ಬಿ ಬ್ಲಾಕ್ ಉತ್ತಮ ಬಡಾವಣೆ. ಇದೇ ರೀತಿ ಎಲ್ಲಾ ವಾರ್ಡ್ ಗಳಲ್ಲೂ ಅಭಿವೃದ್ದಿ ಕೆಲಸ, ಕಾರ್ಯಗಳು ಆಗಬೇಕಾಗಿದೆ ಎಂದು ಅವರು ಹೇಳಿದರು.ಹೊಸ ಹೊಸ ಬಡಾವಣೆಗಳು ನಿರ್ಮಾಣವಾಗುತ್ತಿದ್ದು, ಉತ್ತಮ ಗುಣಮಟ್ಟದ ಎಂ-ಸ್ಯಾಂಡ್ ಹಾಕಿ, ರಸ್ತೆ ನಿರ್ಮಿಸಬೇಕು. ಯುಜಿಡಿ ಲೈನ್ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಅವರು ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.
ನಮ್ಮ ಸರ್ಕಾರ, ಪಾಲಿಕೆಯಿಂದ ಉತ್ತಮ ಕಾಮಗಾರಿ ಆಗಿವೆಯೇ ಹೊರತು, ಸ್ಮಾರ್ಟ್ ಸಿಟಿಯಿಂದ ಹೇಳಿಕೊಳ್ಳುವ ಕೆಲಸಗಳಾಗಿಲ್ಲ. ಮೊದಲು ಮುಖ್ಯ ರಸ್ತೆಗಳ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು. ಎಂಸಿಸಿ ಬಿ ಬ್ಲಾಕಿನಲ್ಲಿ ಸದ್ಯ ₹80 ಲಕ್ಷ ವೆಚ್ಚದ ಕಾಮಗಾರಿ ನಡೆದಿದೆ. ಇನ್ನೂ ₹20 ಲಕ್ಷ ಹೆಚ್ಚುವರಿ ಅನುದಾನ ನೀಡಲಾಗುವುದು. ಇಲ್ಲಿನ ಈಜುಕೊಳವನ್ನು ಸ್ಥಳೀಯರೇ ಅಸೋಸಿಯೇಷನ್ ಮಾಡಿಕೊಂಡು ಬೆಂಗಳೂರು ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಮುಂದೆ ಬಂದರೆ ಎಲ್ಲಾ ಸಹಕಾರ ನೀಡಲಾಗುವುದು ಎಂದು ಅವರು ತಿಳಿಸಿದರು.ಪಾಲಿಕೆ ಸದಸ್ಯ ಜಿ.ಎಸ್.ಮಂಜುನಾಥ ಗಡಿಗುಡಾಳ್ ಮಾತನಾಡಿ, ಕ್ವಾಲಿಟಿ ಹಾಗೂ ಕ್ವಾಂಟಿಟಿಗೆ ಹೆಚ್ಚು ಹೊತ್ತು ನೀಡುವಂತಹ ಅಭಿವೃದ್ಧಿ ಪರ ಕಾಳಜಿ, ಬದ್ಧತೆ ಇರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ನಮ್ಮೊಂದಿಗಿದ್ದಾರೆ. ಕುಂದುವಾಡ ಕೆರೆ ಅಭಿವೃದ್ಧಿಯಿಂದಾಗಿ ಈ ಭಾಗದಲ್ಲಿ ಕೊಳವೆ ಬಾವಿ ಕೈಕೊಟ್ಟರೂ, ಮನೆ ಮನೆಗೆ ಪಾಲಿಕೆ ನೀರು ಬರುವಂತಾಗಿದೆ. ಜರ್ಮನ್ ಹಾಗೂ ಯೂರೋಪ್ ಮಾದರಿಯಲ್ಲಿ ಜಿಲ್ಲೆಯನ್ನು ಅಭಿಯತ್ತ ಕೊಂಡೊಯ್ಯುವ ಸಚಿವ ಎಸ್ಸೆಸ್ ಮಲ್ಲಿಕಾರ್ಜುನರ ಜೊತೆ ಕೈಜೋಡಿಸೋಣ ಎಂದು ಮನವಿ ಮಾಡಿದರು.
ಮೇಯರ್ ಕೆ.ಚಮನ್ ಸಾಬ್ ಮಾತನಾಡಿ, ಜಾತಿ, ಧರ್ಮದ ಬೇಧ ಭಾವ ಇಲ್ಲದ ಸಚಿವರು ಎಲ್ಲರೂ ನಮ್ಮವರೆನ್ನುವವರು. ಮುಂದಿನ ದಿನಗಳಲ್ಲಿ ಎಸ್.ಎಸ್.ಮಲ್ಲಿಕಾರ್ಜುನ ರಾಜ್ಯದ ಮುಖ್ಯಮಂತ್ರಿ ಆಗುವುದರಲ್ಲಿ ಎರಡು ಮಾತಿಲ್ಲ. ಅಂತಹ ಯೋಗ್ಯತೆ, ಯೋಗವೂ ಎಸ್ಸೆಸ್ಸೆಂರಿಗೆ ಇದೆ. ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ, ದಾವಣಗೆರೆ ಮಾದರಿಯಲ್ಲಿ ರಾಜ್ಯದ ಅಭಿವೃದ್ಧಿಯನ್ನೂ ಮಾಡಲಿದ್ದಾರೆ ಎಂದರು.ಉಪ ಮೇಯರ್ ಶಾಂತಕುಮಾರ್ ಸೋಗಿ ಮಾತನಾಡಿ, ನಾವು ಪ್ರತಿ ವಾರ್ಡಿಗೂ ಭೇಟಿ ನೀಡಿದ್ದೇವೆ. ಪಾಲಿಕೆಯಲ್ಲೇ ಎಂಸಿಸಿ ಬಿ ಬ್ಲಾಕ್ ನಂಬರ್ ಒನ್ ವಾರ್ಡ್ ಆಗಿದೆ. ಇದಕ್ಕಾಗಿ ಶ್ರಮಿಸುತ್ತಿರುವ ಇಲ್ಲಿನ ಸದಸ್ಯ ಮಂಜುನಾಥ್ ಗಡಿಗುಡಾಳರ ಕಾರ್ಯ ಮೆಚ್ಚುವಂತದ್ದು ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತೆ ರೇಣುಕಾ, ಪಾಲಿಕೆ ಸದಸ್ಯ ಸುರಭಿ ಎಸ್.ಶಿವಮೂರ್ತಿ, ಸ್ಥಳೀಯ ಮುಖಂಡರಾದ ಸಿದ್ದೇಶ್ವರ, ಹಿರಿಯ ನಾಗರೀಕರು, ಸ್ಥಳೀಯ ನಿವಾಸಿಗಳು ಇದ್ದರು.