ಹಾವೇರಿ ರಿಂಗ್‌ ರೋಡ್‌ ನಿರ್ಮಾಣ ಮತ್ತೆ ಮುನ್ನೆಲೆಗೆ, ಸಚಿವ ಬೈರತಿ ಸುರೇಶ್‌ ಜತೆ ಮುಖಂಡರ ಚರ್ಚೆ

| Published : May 14 2025, 12:03 AM IST

ಹಾವೇರಿ ರಿಂಗ್‌ ರೋಡ್‌ ನಿರ್ಮಾಣ ಮತ್ತೆ ಮುನ್ನೆಲೆಗೆ, ಸಚಿವ ಬೈರತಿ ಸುರೇಶ್‌ ಜತೆ ಮುಖಂಡರ ಚರ್ಚೆ
Share this Article
  • FB
  • TW
  • Linkdin
  • Email

ಸಾರಾಂಶ

ಹಲವು ವರ್ಷಗಳಿಂದ ಬಾಕಿ ಇರುವ ಹೊರ ವರ್ತುಲ ರಸ್ತೆಯ ಕನಸನ್ನು ನನಸು ಮಾಡಬೇಕು ಎಂದು ಮುಖಂಡರು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ಮನವಿ ಮಾಡಿದರು.

ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿ ನಗರಕ್ಕೆ ಹೊರವರ್ತುಲ ರಸ್ತೆ ನಿರ್ಮಾಣದ ಚರ್ಚೆ ಮತ್ತೆ ಶುರುವಾಗಿದೆ. ಈ ಕುರಿತು ನಗರಾಭಿವೃದ್ಧಿ ಸಚಿವರನ್ನು ಭೇಟಿಯಾಗಿರುವ ಸ್ಥಳೀಯ ಮುಖಂಡರು, ಮಂಗಳವಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ ಚರ್ಚಿಸಿದರು.

ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರನ್ನು ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜೀಗೌಡ್ರ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹಾಗೂ ಇತರೆ ಮುಖಂಡರು ಸೋಮವಾರ ಹೊರ ವರ್ತುಲ ರಸ್ತೆಯ ಬಗ್ಗೆ ಚರ್ಚೆ ನಡೆಸಿದ್ದಾರೆ.

ಹಾವೇರಿ ಬೆಳೆಯುತ್ತಿರುವ ನಗರ ಜನವಸತಿ ಪ್ರದೇಶವೂ ಕ್ರಮೇಣ ಹೆಚ್ಚಳವಾಗುತ್ತಿದೆ. ಇದಕ್ಕೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕು. ಹಲವು ವರ್ಷಗಳಿಂದ ಬಾಕಿ ಇರುವ ಹೊರ ವರ್ತುಲ ರಸ್ತೆಯ ಕನಸನ್ನು ನನಸು ಮಾಡಬೇಕು ಎಂದು ಮುಖಂಡರು ಸಚಿವರಲ್ಲಿ ಮನವಿ ಮಾಡಿದರು.

ಸಚಿವರೂ ಸಕಾರಾತ್ಮಕವಾಗಿ ಸ್ಪಂದಿಸಿದ ಹಿನ್ನೆಲೆ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಹಾಗೂ ಪ್ರಾಧಿಕಾರದ ಅಧಿಕಾರಿಗಳು, ಪದಾಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿ ಯಾವ ರೀತಿ ವರ್ತುಲ ರಸ್ತೆ ನಿರ್ಮಾಣದ ಕನಸನ್ನು ಸಾಕಾರಗೊಳಿಸಬೇಕು ಎಂಬುದರ ಕುರಿತು ಚರ್ಚೆ ನಡೆಸಿದರು.

ಅಂತಿಮ ನಿರ್ಣಯ: ಹೊರ ವರ್ತುಲ ರಸ್ತೆ ನಿರ್ಮಾಣದ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ನಾನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದ ಸಂದರ್ಭದಿಂದಲೂ ಹಾವೇರಿ ಹೊರವರ್ತುಲ ರಸ್ತೆ ಬಗ್ಗೆ ಪ್ರಸ್ತಾಪಿಸುತ್ತಿದ್ದೇನೆ. ನಗರದ ನೀಲನಕ್ಷೆಯಲ್ಲಿಯೂ ಹೊರವರ್ತುಲ ರಸ್ತೆಗೆ ಜಾಗವಿರುವುದನ್ನು ಉಲ್ಲೇಖಿಸಲಾಗಿದೆ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಈ ಅವಧಿಯಲ್ಲಿ ಹೊರ ವರ್ತುಲ ರಸ್ತೆ ಮಾಡಿಸಲು ಪ್ರಯತ್ನ ಆರಂಭಿಸಲಾಗಿದೆ. ಪ್ರಾಥಮಿಕವಾಗಿ ನಾವು ಚರ್ಚೆ ನಡೆಸಿದ್ದು, ಸ್ಥಳೀಯ ಶಾಸಕರು, ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರು ಮೇ 18ರಂದು ಹಾವೇರಿಗೆ ಆಗಮಿಸಲಿದ್ದಾರೆ. ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದರು.ಹಾವೇರಿ ಹೊರಭಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಹೊರ ವರ್ತುಲ ರಸ್ತೆ ಆರಂಭವಾಗುತ್ತದೆ. ಅಲ್ಲಿಂದ, ವೈದ್ಯಕೀಯ ಕಾಲೇಜು, ನಾಗೇಂದ್ರನಮಟ್ಟಿ, ತೋಟದಯಲ್ಲಾಪುರ, ಹಾನಗಲ್ಲ ರಸ್ತೆಗೆ ಸೇರಲಿದೆ. ಈ ರಸ್ತೆಯ ಉದ್ದ 11.2 ಕಿಮೀ ಎಂಬುದಾಗಿ ಅಂದಾಜಿಸಲಾಗಿದೆ. ರಸ್ತೆ ನಿರ್ಮಾಣಕ್ಕೆ ಸುಮಾರು ₹100 ಕೋಟಿ ಬೇಕಾಗಬಹುದು. ಖಾಸಗಿ ಸಹಭಾಗಿತ್ವದಲ್ಲಾದರೂ ಹೊರವರ್ತುಲ ರಸ್ತೆ ನಿರ್ಮಾಣ ಮಾಡುವಂತೆ ಸಚಿವರನ್ನು ಕೋರಲಾಗಿದೆ. ಸಚಿವರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ವಿವರಿಸಿದರು.