ಸಾರಾಂಶ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ರಾಷ್ಚೀಯ ಹೆದ್ದಾರಿ ನಿರ್ಮಾಣ ಪ್ರಾಧಿಕಾರ ಹೆದ್ದಾರಿ ಪಕ್ಕದಲ್ಲಿರುವ ವಿದ್ಯುತ್ ಕಂಬವನ್ನು ತೆರವುಗೊಳಿಸದೆ ಅದನ್ನೂ ಸೇರಿಸಿಕೊಂಡೇ ಬಾಕ್ಸ್ ಚರಂಡಿ ನಿರ್ಮಿಸುತ್ತಿರುವುದು ಸಾರ್ವಜನಿಕರಲ್ಲಿ ಆಶ್ಚರ್ಯ ಮೂಡಿಸಿದೆ. ಹೆದ್ದಾರಿ ನಿರ್ಮಾಣ ಪ್ರಾಧಿಕಾರದ ಅಧಿಕಾರಿಗಳು ಮತ್ತು ಬೆಸ್ಕಾಂ ನಡುವೆ ಹೊಂದಾಣಿಕೆ ಕೊರತೆಯೇ ಇದಕ್ಕೆ ಕಾರಣ ಎನ್ನಲಾಗಿದೆ.ನಗರದ ಮೂಲಕ ಹಾದು ಹೋಗುವ ಬೈರೇನಹಳ್ಳಿ-ಅಂಕನಹಳ್ಳೀ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿದ್ದು ರಸ್ತೆಯ ಎರಡೂ ಕಡೆಗಳಲ್ಲಿ ಬಾಕ್ಸ್ ಚರಂಡಿ ನಿರ್ಮಾಣ ಮಾಡಲಾಗುತ್ತಿದೆ. ಈ ಚರಂಡಿಗಳನ್ನು ನಿರ್ಮಾಣ ಮಾಡುವ ಸ್ಥಳದಲ್ಲಿ ವಿದ್ಯುತ್ ಕಂಬಗಳಿವೆ. ಅವುಗಳನ್ನು ತೆರವುಗೊಳಿಸದೆ ಚರಂಡಿಯ ಮಧ್ಯಭಾಗದಲ್ಲಿ ವಿದ್ಯುತ್ ಕಂಬಗಳನ್ನು ಉಳಿಸಿಕೊಂಡು ಚರಂಡಿ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಮುಂದೆ ಉಂಟಾಗಬಹುದಾದ ಅನಾಹುತಗಳ ಬಗ್ಗೆ ಅಧಿಕಾರಿಗಳು ತಲೆಕೆಡಿಸಿಕೊಂತಿಲ್ಲ.
ಮರಗಳ ತೆರವು ಸುಲಭ!ರಾಷ್ಚೀಯ ಹೆದ್ದಾರಿ ನಿರ್ಮಾಣ ಕಾಮಗಾರಿಯಲ್ಲಿ ಸರಿಸುಮಾರು 352 ಬೃಹತ್ ಮರಗಳನ್ನು ಬಲಿ ಪಡೆದ ಹೆದ್ದಾರಿ ಪ್ರಾಧಿಕಾರ ಕೇವಲ ಬೆರಳೆಣಿಕೆಯಷ್ಟು ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಮುಂದಾಗುತ್ತಿಲ್ಲ. ಇದರಿಂದಾಗಿ ಕಾಲುವೆ ನಡುವೆ ವಿದ್ಯುತ್ ಕಂಬಗಳನ್ನು ಉಳಿಸಿಕೊಳ್ಳಲಾಗಿದೆ.
ರೇಮಂಡ್ಸ್ ಕಾರ್ಖಾನೆಯಿಂದ ಕುರೂಡಿ ಅರಣ್ಯಪ್ರದೇಶದವರೆಗಿನ ರಸ್ತೆಯ ಎರಡೂ ಬದಿಯಲ್ಲಿ ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಮರಗಳನ್ನು ಹೆದ್ದಾರಿ ನಿರ್ಮಾಣಕ್ಕಾಗಿ ಹನನ ಮಾಡಲಾಯಿತು. ಆದರೆ ಅಲ್ಲಿ ಒಂದು ಸಸಿಯನ್ನೂ ನೆಟ್ಟು ಬೆಳಸುವ ಪ್ರಯತ್ನ ನಡೆದಿಲ್ಲ. ಅಭಿವೃದ್ಧಿ ನೆಪದಲ್ಲಿ ಮರಗಳನ್ನು ಕಡೆದಿರುವುದು ಎಷ್ಟರಮಟ್ಟಿಗೆ ಸರಿ ಎಂದು ನಗರದ ಪರಿಸರಪ್ರೇಮಿ ಶ್ರೀನಿವಾಸರೆಡ್ಡಿ ಪ್ರಶ್ನಿಸಿದ್ದಾರೆ.ಈಗ ಬದಲಿಸುವುದು ಕಷ್ಟಮುಂದೊಂದು ದಿನ ಕಂಬಗಳನ್ನು ಸ್ಥಳಾಂತರಿಸಬೇಕಾದಾಗ ಚರಂಡಿಯನ್ನು ಒಡೆದು ಕಂಬಗಳನ್ನು ಹೊರತೆಗೆಯ ಬೇಕಾಗುತ್ತದೆ. ಇಲ್ಲವೇ ಕಂಬಗಳನ್ನು ಚರಂಡಿಯ ತಳ ಮಟ್ಟಕ್ಕೆ ಕತ್ತರಿಸಬೇಕಾಗುತ್ತದೆ. ಹೀಗೆ ಮಾಡುವುದರಿಂದ ಕಂಬಗಳು ನಿರುಪಯೋಗವಾಗಲಿವೆ. ಇದರಿಂದ ಕಾಮಗಾರಿಗೆ ಖರ್ಚು ಮಾಡಿದ ಜನರ ತೆರಿಗೆ ಹಣ ಪೋಲಾಗಲಿದೆ.ಈ ಅಂಶಗಳನ್ನು ಎರಡೂ ಇಲಾಖೆಗಳು ಗಂಭೀರವಾಗಿ ಪರಿಗಣಿಸಿ ವೈಯಕ್ತಿಕ ಪ್ರತಿಷ್ಠೆಗಳನ್ನು ಬದಿಗಿಟ್ಟು ಹೊಂದಾಣಿಕೆಯಿಂದ ಕೆಲಸ ಮಾಡಬೇಕೆಂದು ನಗರಸಭೆಯ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ರೂಪ ಅನಂತರಾಜು ಒತ್ತಾಯಿಸಿದ್ದಾರೆ.