ಸಾರಾಂಶ
ಚಾಮರಾಜನಗರ: ಚಾಮುಲ್‌ನಲ್ಲಿ ಐಸ್ ಕ್ರೀಂ ಘಟಕ ನಿರ್ಮಾಣದಿಂದ ಹಾಲು ಉತ್ಪಾದಕರಿಗೆ ಅನ್ಯಾಯವಾಗುವುದಿಲ್ಲ. ಒಕ್ಕೂಟ ಹಾಲು ಉತ್ಪಾದಕರ ಹಿತ ಕಾಯಲಿದೆ ಎಂದು ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಕುದೇರು ಗ್ರಾಮದಲ್ಲಿರುವ ಚಾಮುಲ್‌ನಲ್ಲಿ ಐಸ್ ಕ್ರೀಂ ಘಟಕ ನಿರ್ಮಾಣಕ್ಕೆ 50 ಕೋಟಿ ಸಾಲ ಮಾಡಲಾಗುತ್ತಿದೆ ಎಂದು ಕೆಲವರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಅಪಪ್ರಚಾರ ನಡೆಸಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಎಂದರು. ಐಸ್ ಕ್ರೀಂ ಘಟಕ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 5 ಕೋಟಿ, ಕೆಎಂಎಫ್ 10 ಕೋಟಿ ಕೊಡುತ್ತದೆ. ಚಾಮುಲ್‌ನಲ್ಲಿ 26 ಕೋಟಿ ಇದ್ದು ಒಟ್ಟು 40 ಕೋಟಿ ಇದೆ. 15-20 ಕೋಟಿ ಮಾತ್ರ ಸಾಲ ಮಾಡಬೇಕಾಗುತ್ತದೆ. ಈ ಹಣವನ್ನು ಘಟಕ ನಿರ್ಮಾಣವಾದ 18 ತಿಂಗಳ ನಂತರ ಕಟ್ಟಬೇಕಾಗುತ್ತದೆ ಇದನ್ನು ಬಂದ ಲಾಭದಿಂದ ಕಟ್ಟಲಾಗುತ್ತದೆ ಹಾಲು ಉತ್ಪಾದಕರಿಗೆ ಅನ್ಯಾಯವಾಗುವುದಿಲ್ಲ ಎಂದರು.ಕೇರಳ, ತಮಿಳುನಾಡು, ಮೈಸೂರಿನಲ್ಲಿ ಐಸ್ ಕ್ರೀಂಗೆ ಮಾರುಕಟ್ಟೆ ಇದ್ದು 7750 ಲೀ. ಬೇಡಿಕೆ ಇದೆ. ಇದರಿಂದ ಬಂದ ಲಾಭವನ್ನು ರೈತರಿಗೆ ಹಂಚಲಾಗುವುದು. ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳು ಒಪ್ಪಿಗೆ ನೀಡಿದ್ದು, ಘಟಕ ನಿರ್ಮಾಣದಿಂದ ಜಿಲ್ಲೆಯ ರೈತರ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು.ರಾಜ್ಯದಲ್ಲಿರುವ 16 ಹಾಲು ಒಕ್ಕೂಟಗಳಲ್ಲಿ ಚಾಮುಲ್ 8ನೇ ಸ್ಥಾನದಲ್ಲಿದೆ. ಚಾಮುಲ್ ಮೂಲಕ ರೈತರಿಗೆ ವಿಮೆ, ಹಾಸ್ಟೆಲ್ ವ್ಯವಸ್ಥೆ ಸೇರಿದಂತೆ 10 ಸೌಲಭ್ಯಗಳನ್ನು ರೈತರಿಗೆ ಕೊಡಲಾಗುತ್ತಿದೆ. ಜಿಲ್ಲೆಯಲ್ಲಿ ದಿನನಿತ್ಯ 3 ಲಕ್ಷ ಲೀ. ಹಾಲು ಶೇಖರಣೆಯಾಗುತ್ತಿದ್ದು 10 ಸಾವಿರ ಲೀ. ಹಾಲನ್ನು ಐಸ್ ಕ್ರೀಂಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು. ಸುದ್ದಿಗೋಷ್ಟಿಯಲ್ಲಿ ಚಾಮುಲ್ ನಿರ್ದೇಶಕರಾದ ಎಚ್.ಎಸ್.ನಂಜುಂಡಪ್ರಸಾದ್, ಸುನೀಲ್, ಶೀಲಾ ಪುಟ್ಟರಂಗಶೆಟ್ಟಿ, ಬಸವರಾಜು, ಸದಾಶಿವಮೂರ್ತಿ, ಮಹದೇವಸ್ವಾಮಿ, ಸಾಹುಲ್ ಅಹಮ್ಮದ್, ನಾಮ ನಿರ್ದೇಶಿತ ಸದಸ್ಯ ರೇವಣ್ಣ ಇದ್ದರು.