ಸಾರಾಂಶ
ಕೊಪ್ಪಳದಿಂದ ಕವಲೂರಿನ ಒಳ ಸಂಪರ್ಕ ರಸ್ತೆ, ಸೇತುವೆ ನಿರ್ಮಾಣ, ಗ್ರಾಮೀಣ, ನಗರ ಪ್ರದೇಶದ ರಸ್ತೆಗಳ ದುರಸ್ತಿ ಮಾಡುವಂತೆ ಆಗ್ರಹಿಸಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳರಿಗೆ ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರಿಗೆ ಮನವಿ
ಕನ್ನಡಪ್ರಭ ವಾರ್ತೆ ಕೊಪ್ಪಳಕೊಪ್ಪಳದಿಂದ ಕವಲೂರಿನ ಒಳ ಸಂಪರ್ಕ ರಸ್ತೆ, ಸೇತುವೆ ನಿರ್ಮಾಣ, ಗ್ರಾಮೀಣ, ನಗರ ಪ್ರದೇಶದ ರಸ್ತೆಗಳ ದುರಸ್ತಿ ಮಾಡುವಂತೆ ಆಗ್ರಹಿಸಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳರಿಗೆ ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ತಾಲೂಕಿನ ಕವಲೂರಿನ ಒಳ ಸಂಪರ್ಕ ರಸ್ತೆ ದುರಸ್ತಿ ಮತ್ತು ಸಿಡಿಗಳ ಬದಲಿಗೆ ಸೇತುವೆಗಳನ್ನು ನಿರ್ಮಾಣ ಮಾಡಬೇಕು. ಗ್ರಾಮೀಣ, ನಗರ ಪ್ರದೇಶದ ರಸ್ತೆಗಳ ದುರಸ್ತಿ ಕಾರ್ಯ ತ್ವರಿತವಾಗಿ ಕೈಗೊಳ್ಳಬೇಕು.ಕೊಪ್ಪಳದಿಂದ ಹಲಗೇರಿ, ವದಗನಾಳ, ಹಂದ್ರಾಳ ಮೂಲಕ ಕವಲೂರ ಗ್ರಾಮಕ್ಕೆ ಹೋಗುವ ಒಳ ಸಂಪರ್ಕ ರಸ್ತೆ ಅಲ್ಲಲ್ಲಿ ತಗ್ಗುಗಳು ಬಿದ್ದು ಹಾಳಾಗಿವೆ. ಅಲ್ಲದೆ ಕವಲೂರ ಗ್ರಾಮದ ಬಳಿಯ ಹಳ್ಳಕ್ಕೆ ಕಟ್ಟಲಾಗಿದ್ದ ಸಿಡಿಗಳು ಒಡೆದು ಹೋಗಿ ಎಷ್ಟೋ ವರ್ಷಗಳೇ ಕಳೆದಿದೆ. ಆದರೂ ಯಾವ ಚುನಾಯಿತ ಪ್ರತಿನಿಧಿಗಳು ಗಮನಹರಿಸದೆ ಸಂಪೂರ್ಣ ನಿರ್ಲಕ್ಷಿಸಿದ್ದು ವಿಷಾದನೀಯ ಸಂಗತಿಯಾಗಿದೆ.
ಕೆಲವು ರಸ್ತೆಗಳಲ್ಲಿ ಅಲ್ಲಲ್ಲಿ ಬಿದ್ದಿರುವ ಸಣ್ಣಪುಟ್ಟ ತಗ್ಗುಗಳನ್ನು ಮುಚ್ಚಿಸಿ, ವೇಗ ನಿಯಂತ್ರಣಕ್ಕೆ ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ಹಾಕಲಾದ ಉಬ್ಬು ತಗ್ಗು (ಸ್ಪೀಡ್ ಬ್ರೇಕರ್) ತೆರವುಗೊಳಿಸಿ, ವೈಜ್ಞಾನಿಕ ಪದ್ದತಿ ಅನುಸರಿಸಿ ಉಚ್ಚ ನ್ಯಾಯಾಲಯದ ಆಶಯದಂತೆ ಅಗತ್ಯವಿದ್ದಲ್ಲಿ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.ಮನವಿ ಸ್ವೀಕರಿಸಿದ ಶಾಸಕ ಹಿಟ್ನಾಳ ಮಾತನಾಡಿ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಗ್ರಾಮೀಣ, ನಗರ ಪ್ರದೇಶದ ರಸ್ತೆಗಳನ್ನು ಶೀಘ್ರದಲ್ಲೇ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್, ಕೊಳಚೆ ನಿರ್ಮೂಲನಾ ವೇದಿಕೆಯ ಜಿಲ್ಲಾ ಸಂಚಾಲಕ ತುಕಾರಾಮ್ ಬಿ. ಪಾತ್ರೋಟಿ, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ (ಎಐಟಿಯುಸಿ ಸಂಯೋಜಿತ) ತಾಲೂಕಾ ಉಪಾಧ್ಯಕ್ಷ ಮೌಲಾ ಹುಸೇನ್ ಹಣಗಿ, ಭಾಗ್ಯನಗರ ಘಟಕದ ಅಧ್ಯಕ್ಷ ಪ್ರಕಾಶ ದೇವರ ಮನಿ, ಓಜಿನಹಳ್ಳಿ ಗ್ರಾಮ ಘಟಕದ ಅಧ್ಯಕ್ಷ ಸುರೇಶ್ ಓಜನಹಳ್ಳಿ ಮುಂತಾದವರಿದ್ದರು.