ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಅಧಿಕಾರ ಶಾಶ್ವತವಲ್ಲ. ಇರುವಷ್ಟು ದಿನ ಕ್ಷೇತ್ರದ ಜನರ ಮನಸ್ಸಿಗೆ ಒಪ್ಪುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.ಪಟ್ಟಣಕ್ಕೆ ಸಮೀಪವಿರುವ ಕಣಿವೆಯಲ್ಲಿ 7 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಐಟಿಐ ಕಾಲೇಜು ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಈ ಹಿಂದೆ 2.35 ಕೋಟಿ ಮಂಜೂರು ಮಾಡಿಸಿದ್ದೆ. ಇದರಲ್ಲಿ ಕ್ಲಾಸ್ ರೂಂ, ಪ್ರಾಂಶುಪಾಲರ ಚೇಂಬರ್, ಪ್ರಾಕ್ಟಿಕಲ್‌ಗೆ ಸಾಕಾಗುವುದಿಲ್ಲವೆಂಬುದನ್ನು ಗಮನಕ್ಕೆ ತಂದಿದ್ದರಿಂದ ಮತ್ತೆ 4.5 ಕೋಟಿ ರು. ಬಿಡುಗಡೆಗೊಳಿಸಿದ್ದೇನೆ. ಒಟ್ಟು 7 ಕೋಟಿ ರು.ವೆಚ್ಚದಲ್ಲಿ ಅತ್ಯುತ್ತಮ ಗುಣಮಟ್ಟದ ಐಟಿಐ ಕಾಲೇಜು ನಿರ್ಮಾಣವಾಗಲಿದೆ ಎಂದು ಹೇಳಿದರು.
ಜಡ್ಜ್‌ಗಳಿಗೆ ಗುಡ್ಡದ ಮೇಲೆ ವಸತಿ ಗೃಹಗಳನ್ನು ಕಟ್ಟಿಸಿ ಕೊಡಲಾಗಿದೆ. ಸಂವಿಧಾನ ಸೌಧ, ಹೈಟೆಕ್ ಆಸ್ಪತ್ರೆ, ಶಾಲಾ-ಕಾಲೇಜು, ಮುರಾರ್ಜಿ ದೇಸಾಯಿ ವಸತಿ ಶಾಲೆ, ಸಿಸಿ ರಸ್ತೆ, ಚೆಕ್‌ಡ್ಯಾಂ, ಕೆರೆ ಕಟ್ಟೆಗಳನ್ನು ಕಟ್ಟಿಸಿದ್ದೇನೆ. ಐಟಿಐನಲ್ಲಿ 18 ಬ್ರಾಂಚ್‌ಗಳಿವೆ. ಯಾವ ವಿಭಾಗಕ್ಕೆ ಹೆಚ್ಚು ಬೇಡಿಕೆಯಿದೆ ಎನ್ನುವುದನ್ನು ತಿಳಿದುಕೊಂಡು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಅವಕಾಶ ಮಾಡಿಕೊಡುತ್ತೇನೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಭರವಸೆ ನೀಡಿದರು.ಬೊಮ್ಮನಕಟ್ಟೆಯಲ್ಲಿ 22 ಕೋಟಿ ರು. ಖರ್ಚು ಮಾಡಿ ಶಾಲೆ, ಹಾಸ್ಟೆಲ್‌ಗಳನ್ನು ಕಟ್ಟಲಾಗಿದೆ. ಇದರಿಂದ ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುತ್ತಿದೆ. ಇತಿಹಾಸದಲ್ಲಿ ಉಳಿಯುವ ರೀತಿಯಲ್ಲಿ ಐಟಿಐ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳನ್ನು ನಿರ್ಮಾಣ ಮಾಡಲಾಗುವುದು. ಇನ್ನು 4 ತಿಂಗಳೊಳಗೆ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಬೇಕು. ಕೇಂದ್ರ ಸರ್ಕಾರದ ಜೊತೆ ಪತ್ರ ವ್ಯವಹಾರ ನಡೆಸಿ ಹಣ ಮಂಜೂರು ಮಾಡಿಸಿದ್ದೇನೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಮಕ್ಕಳಿಗೆ ಶಾಸಕ ಡಾ.ಎಂ.ಚಂದ್ರಪ್ಪ ಕರೆ ನೀಡಿದರು.
ಈ ಸಂದರ್ಭದಲ್ಲಿ ಹೊಳಲ್ಕೆರೆ ಪುರಸಭೆ ಅಧ್ಯಕ್ಷ ವಿಜಯಸಿಂಹ ಖಾಟ್ರೋತ್, ಸದಸ್ಯ ರಮೇಶ್, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯದ ಮಾಧುರ್ಯ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲ ಜರೀಫುಲ್ಲಾ, ರಮೇಶ್, ಚಂದ್ರನಾಯ್ಕ, ಜಯರಾಜ್, ಬೋಧಕ ಮತ್ತು ಬೋಧಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.