3 ತಿಂಗಳಲ್ಲಿ ಕಣಿಯಾರು ಸ್ಟೇಷನ್‌ ಕಾಮಗಾರಿ: ಶಾಸಕ ಎ. ಮಂಜು

| Published : Feb 12 2024, 01:32 AM IST / Updated: Feb 12 2024, 04:01 PM IST

3 ತಿಂಗಳಲ್ಲಿ ಕಣಿಯಾರು ಸ್ಟೇಷನ್‌ ಕಾಮಗಾರಿ: ಶಾಸಕ ಎ. ಮಂಜು
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಕಣಿಯಾರು ಗ್ರಾಮದಲ್ಲಿ 220 ಕೆವಿ ವಿದ್ಯುತ್ ವಿತರಣಾ ಕೇಂದ್ರ ನಿರ್ಮಾಣ ಕಾಮಗಾರಿ ಇನ್ನು 3 ತಿಂಗಳಲ್ಲಿ ಆರಂಭವಾಗಲಿದೆ ಎಂದು ಶಾಸಕ ಎ. ಮಂಜು ತಿಳಿಸಿದರು. ವಿದ್ಯುತ್ ವಿತರಣಾ ಸ್ಥಾವರ ನಿರ್ಮಾಣ ಮಾಡಲು ಉದ್ದೇಶಿಸಿರುವ ಸ್ಥಳಕ್ಕೆ ಶಾಸಕರು ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ತಾಲೂಕಿನ ಕಣಿಯಾರು ಗ್ರಾಮದಲ್ಲಿ 220 ಕೆವಿ ವಿದ್ಯುತ್ ವಿತರಣಾ ಕೇಂದ್ರ ನಿರ್ಮಾಣ ಕಾಮಗಾರಿ ಇನ್ನು 3 ತಿಂಗಳಲ್ಲಿ ಆರಂಭವಾಗಲಿದೆ ಎಂದು ಶಾಸಕ ಎ. ಮಂಜು ತಿಳಿಸಿದರು.

ಸಕಲೇಶಪುರ ಉಪವಿಭಾಗಾಧಿಕಾರಿಗಳು, ಅರಣ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ವಿದ್ಯುತ್ ವಿತರಣಾ ಸ್ಥಾವರ ನಿರ್ಮಾಣ ಮಾಡಲು ಉದ್ದೇಶಿಸಿರುವ ಸ್ಥಳಕ್ಕೆ ಶಾಸಕರು ಭೇಟಿ ನೀಡಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರೊಂದಿಗೆ ಚರ್ಚಿಸಿದರು.

ಬಳಿಕ ಮಾತನಾಡಿದ ಶಾಸಕರು, ಕಣಿಯಾರು ಗ್ರಾಮದಲ್ಲಿ 220 ಕೆವಿ ವಿದ್ಯುತ್ ಸ್ಥಾವರ ಕೇಂದ್ರ ನಿರ್ಮಾಣವಾಗಬೇಕೆಂಬ ಕನಸು ಈಗ ನನಸಾಗುತ್ತಿದೆ. ಇದಕ್ಕೆ ಬೇಕಾದ ಸ್ಥಳವನ್ನು ಕಂದಾಯ ಇಲಾಖೆ ಸರ್ವೇ ನಂ 84 ರಲ್ಲಿ ನೀಡಲಾಗಿತ್ತು. 

ಆದರೆ, ಅ ಜಾಗದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಇರುವುದರಿಂದ ಅದನ್ನು ಕೆಪಿಟಿಸಿಎಲ್‌ಗೆ ನೀಡಲಾಗುವುದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದರು. 

ಬಳಿಕ ಪರಿಹಾರ ಕಂಡುಕೊಳ್ಳಬೇಕು ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಿದ್ದೆ. ಇಂದು ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು ಎಂದು ತಿಳಿಸಿದರು.

ಪರ್ಯಾಯ ಜಾಗವನ್ನು ಕೆಪಿಟಿಸಿಎಲ್ ಹಣ ನೀಡಿ ಪಡೆದುಕೊಳ್ಳಬಹುದು. ಜಾಗ ಗುರುತಿಸಲು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಹಾಗಾಗಿ ಸಮಸ್ಯೆ ಇತ್ಯರ್ಥವಾಗಿದ್ದು, ಕಾನೂನುಬದ್ಧವಾಗಿಯೇ 2-3 ತಿಂಗಳೊಳಗೆ ಕಾಮಗಾರಿ ಆರಂಭವಾಗಲಿದೆ. 

ಇದು 130 ಕೋಟಿ ರು. ಯೋಜನೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ತಾಲೂಕಿಗೆ ವಿದ್ಯುತ್ ಸಮಸ್ಯೆ ದೂರವಾಗಲಿದೆ ಎಂದು ಹೇಳಿದರು.

ಪ್ರಧಾನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್ ದೀಕ್ಷಿತ್, ಸಕಲೇಶಪುರ ಉಪವಿಭಾಗಾಧಿಕಾರಿ ಶ್ರುತಿ, ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ, ಸಿಸಿಎಫ್ ರವಿಶಂಕರ್, ಕೆಪಿಟಿಸಿಎಲ್ ಇಇ ಸವಿತಾ, ಪ್ರಾದೇಶಿಕ ಅರಣ್ಯ ವಲಯಾಧಿಕಾರಿ ಯಶ್ಮ ಮಾಚಮ್ಮ ಇದ್ದರು.

220 ಕೆವಿ ವಿದ್ಯುತ್ ವಿತರಣಾ ಕೇಂದ್ರ ನಿರ್ಮಿಸಲು ಉದ್ದೇಶಿಸಿರುವ ಸ್ಥಳಕ್ಕೆ ಶಾಸಕ ಎ. ಮಂಜು, ಪ್ರಧಾನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್ ದೀಕ್ಷಿತ್ ಮತ್ತು ಇತರರು ಭೇಟಿ ನೀಡಿ ಪರಿಶೀಲಿಸಿದರು.