15 ಕೋಟಿ ವೆಚ್ಚದಲ್ಲಿ ಮಂಚನಬೆಲೆ ಸೇತುವೆ ನಿರ್ಮಾಣ

| Published : May 03 2024, 01:03 AM IST

ಸಾರಾಂಶ

ಮಾಗಡಿ: ಅತಿ ಹೆಚ್ಚು ಪ್ರವಾಹ ಬಂದ ಹಿನ್ನೆಲೆಯಲ್ಲಿ ತಾಲೂಕಿನ ಮಂಚನಬೆಲೆ ಜಲಾಶಯದ ಹತ್ತಿರವಿದ್ದ ಮುಖ್ಯ ಸೇತುವೆ ಕುಸಿದಿದ್ದು ಈಗ ಕಾವೇರಿ ನೀರಾವರಿ ನಿಗಮದ ವತಿಯಿಂದ 15 ಕೋಟಿ ವೆಚ್ಚದಲ್ಲಿ ಅತಿ ಶೀಘ್ರದಲ್ಲೇ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂದು ಕಾವೇರಿ ನೀರಾವರಿ ನಿಗಮದ ಎಇಇ ರಾಘವೇಂದ್ರ ತಿಳಿಸಿದ್ದಾ

ಮಾಗಡಿ: ಅತಿ ಹೆಚ್ಚು ಪ್ರವಾಹ ಬಂದ ಹಿನ್ನೆಲೆಯಲ್ಲಿ ತಾಲೂಕಿನ ಮಂಚನಬೆಲೆ ಜಲಾಶಯದ ಹತ್ತಿರವಿದ್ದ ಮುಖ್ಯ ಸೇತುವೆ ಕುಸಿದಿದ್ದು ಈಗ ಕಾವೇರಿ ನೀರಾವರಿ ನಿಗಮದ ವತಿಯಿಂದ 15 ಕೋಟಿ ವೆಚ್ಚದಲ್ಲಿ ಅತಿ ಶೀಘ್ರದಲ್ಲೇ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂದು ಕಾವೇರಿ ನೀರಾವರಿ ನಿಗಮದ ಎಇಇ ರಾಘವೇಂದ್ರ ತಿಳಿಸಿದ್ದಾರೆ.

ತಾಲೂಕಿನ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಮಂಚನಬೆಲೆ ಜಲಾಶಯಕ್ಕೆ ಸಾಕಷ್ಟು ಪ್ರವಾಸಿಗರು ಬರುತ್ತಿದ್ದು ಈಗ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಹಾಗೂ ಕಣ್ವ ಜಲಾಶಯ ಮೂಲಕ ಈ ಜಲಾಶಯಕ್ಕೆ ನೀರು ತುಂಬಿಸಲಾಗುತ್ತಿದೆ. ಜಲಾಶಯದಿಂದ ಮಾಗಡಿ ಪಟ್ಟಣ ಹಾಗೂ ಬಿಡದಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಗೆ ಯೋಜನೆ ರೂಪಿಸಲಾಗಿದೆ. ಜೊತೆಗೆ ಮಂಚನಬೆಲೆ ಸುತ್ತಮುತ್ತಲಿನ ಹಳ್ಳಿಗಳಿಗೆ ಕಾವೇರಿ ನೀರು ಪೂರೈಸುವ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಜಲಾಶಯಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ಸೇತುವೆ ಕಳೆದ ವರ್ಷ ಸುರಿದ ಭಾರಿ ಮಳೆಗೆ ಕೊಚ್ಚಿಹೋಗಿ ಇಲ್ಲಿಯವರೆಗೂ ತಾತ್ಕಾಲಿಕ ಸೇತುವೆ ಮೂಲಕ ಸಾರ್ವಜನಿಕರು ವಾಹನ ಸವಾರರು ಓಡಾಡುತ್ತಿದ್ದಾರೆ. ಈಗ ಲೋಕಸಭಾ ಚುನಾವಣೆ ಫಲಿತಾಂಶ ಬಂದ ನಂತರ ಟೆಂಡರ್ ಪ್ರಕ್ರಿಯೆ ಕರೆಯಲಿದ್ದು, ಗುಣಮಟ್ಟದ ಸೇತುವೆ ನಿರ್ಮಿಸಲಾಗುವುದು ಎಂದು ಎಇಇ ತಿಳಿಸಿದ್ದಾರೆ.

ರಸ್ತೆ ಕಾಮಗಾರಿಗೆ ಆದ್ಯತೆ ನೀಡಿ:ಪ್ರವಾಸಿ ತಾಣವಾದ ಮಂಚನಬೆಲೆ ಜಲಾಶಯದ ಮೂಲ ಸೌಲಭ್ಯಗಳಿಗೆ ಸರ್ಕಾರ ಆದ್ಯತೆ ನೀಡಬೇಕು. ಸಾವನದುರ್ಗ ದಟ್ಟ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಜಲಾಶಯಕ್ಕೆ ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಿಂದ ಮತ್ತು ಹೊರ ರಾಜ್ಯಗಳಿಂದ ಇಲ್ಲಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಜಲಾಶಯಕ್ಕೆ ಬೆಂಗಳೂರಿನ ದೊಡ್ಡಾಲದ ಮರದ ಮುಖ್ಯರಸ್ತೆ ಮತ್ತು ಮಾಗಡಿ ರಾಮನಗರ ಮಾರ್ಗವಾಗಿ ವೀರೇಗೌಡನ ದೊಡ್ಡಿಯಿಂದ ಮಂಚನಬೆಲೆ ಜಲಾಶಯಕ್ಕೆ ಮುಖ್ಯರಸ್ತೆ ಎರಡೂ ಮಾರ್ಗಗಳಿಂದಲೂ ಜಲಾಶಯಕ್ಕೆ ಬರಬಹುದು. ಆದರೆ ಮಂಚನಬೆಲೆ ಜಲಾಶಯಕ್ಕೆ ಸಂಪರ್ಕಿಸುವ ವೀರೇಗೌಡನ ದೊಡ್ಡಿ ಮುಖ್ಯರಸ್ತೆ ಕಳಪೆ ಕಾಮಗಾರಿಯಿಂದ ಗುಂಡಿಮಯವಾಗಿದೆ. ದಟ್ಟ ಅರಣ್ಯ ಪ್ರದೇಶದಲ್ಲೇ ವಾಹನ ಸವಾರರು ಹೋಗಬೇಕಿದ್ದು. ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ರಾತ್ರಿ ವೇಳೆ ಈ ರಸ್ತೆಯಲ್ಲಿ ಓಡಾಡುವುದು ಸಾಕಷ್ಟು ಅಪಾಯಕಾರಿಯಾಗಿದ್ದು ಮಂಚನಬೆಲೆ, ಬಿಡದಿ, ದೊಡ್ಡಲದ ಮರ, ಕೆಂಗೇರಿ ಮಾರ್ಗವಾಗಿ ಈ ರಸ್ತೆಯನ್ನೇ ಅವಲಂಬಿಸಿದೆ. ದೊಡ್ಡ ಗುಂಡಿಗಳಿಂದ ಕೂಡಿರುವ ರಸ್ತೆಯನ್ನು ಸರಿಪಡಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕು. ಶನಿವಾರ ಮತ್ತು ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ರಸ್ತೆ ದುರಸ್ತಿಪಡಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಗಳಿಗೆ ಮಂಚನಬೆಲೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಮಾಡಿ:

ಮಂಚನಬೆಲೆ ಜಲಾಶಯ ಸಾವವನದುರ್ಗದ ದಟ್ಟ ಅರಣ್ಯ ಪ್ರದೇಶದಲ್ಲಿ ಹೊಂದಿಕೊಂಡಿದ್ದು ಅರಣ್ಯ ಪ್ರದೇಶದಲ್ಲಿ ಆನೆ, ಕರಡಿ, ಚಿರತೆ, ನರಿ, ಕಾಡುಕೋಣ, ನವಿಲು ಸೇರಿದಂತೆ ಸಾಕಷ್ಟು ಕಾಡು ಪ್ರಾಣಿಗಳಿದ್ದು ಈಗ ಬೇಸಿಗೆ ಇರುವುದರಿಂದ ಅರಣ್ಯ ಪ್ರದೇಶದ ಒಳಗೆ ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಅರಣ್ಯ ಇಲಾಖೆ ಮಾಡಿದರೆ ಹೆಚ್ಚಿನ ಅನುಕೂಲವಾಗುತ್ತದೆ. ಏಪ್ರಿಲ್ ತಿಂಗಳು ಕಳೆದರೂ ಮಳೆ ಬಾರದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಟ್ಯಾಂಕರ್ ಮೂಲಕ ಅರಣ್ಯ ಪ್ರದೇಶದ ಒಳಗೆ ಸಣ್ಣ ಸಣ್ಣ ಹಳ್ಳಗಳಿಗೆ ನೀರು ತುಂಬಿಸಬೇಕೆಂದು ಪ್ರಾಣಿಪ್ರಿಯರು ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ ಮಂಚನಬೆಲೆ ಜಲಾಶಯದ ಸುತ್ತಮುತ್ತ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲ ಮಾಡುವುದರಿಂದ ಪ್ರವಾಸೋದ್ಯಮ ಇಲಾಖೆಗೂ ಆರ್ಥಿಕವಾಗಿ ಸುಧಾರಣೆಯಾಗಲಿದೆ ಎಂಬುದು ಸ್ಥಳೀಯರ ಅನಿಸಿಕೆಯಾಗಿದೆ. ಪೋಟೋ 2ಮಾಗಡಿ1:

ಮಾಗಡಿ ತಾಲೂಕಿನ ಮಂಚನಬೆಲೆ ಜಲಾಶಯದಿಂದ ಹೊರ ಬಿಟ್ಟಿರುವ ನೀರಿನಲ್ಲಿ ಆಟವಾಡುತ್ತಿರುವ ಪ್ರವಾಸಿಗರು.