ಮಳವಳ್ಳಿ ಪಟ್ಟಣದಲ್ಲಿ ಮನ್ಮುಲ್‌ ಉಪಕಚೇರಿ ಕಟ್ಟಡ ನಿರ್ಮಾಣ: ಪಿ.ಎಂ.ನರೇಂದ್ರಸ್ವಾಮಿ

| Published : Jul 21 2025, 12:00 AM IST

ಮಳವಳ್ಳಿ ಪಟ್ಟಣದಲ್ಲಿ ಮನ್ಮುಲ್‌ ಉಪಕಚೇರಿ ಕಟ್ಟಡ ನಿರ್ಮಾಣ: ಪಿ.ಎಂ.ನರೇಂದ್ರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ಜಾರಿಗೆ ಬರುವಂತೆ ಕ್ಷೀರಭಾಗ್ಯ ಘೋಷಣೆ ಮಾಡಿದರು. ಇದರಿಂದ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಕ್ಕಿದಂತಾಯಿತು. ಜೊತೆಗೆ ಉಳಿಯುತ್ತಿದ್ದ ಹಾಲಿನ ಸಮಸ್ಯೆಯೂ ಬಗೆಹರಿಯಿತು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಮನ್ಮುಲ್‌ಗೆ ಸೇರಿದ ಪಟ್ಟಣದಲ್ಲಿರುವ 2 ಎಕರೆ ಜಾಗದಲ್ಲಿ ಐದು ಕೋಟಿ ರು. ವೆಚ್ಚದ ಮನ್ಮುಲ್‌ ಉಪಕಚೇರಿ ಕಟ್ಟಡ ನಿರ್ಮಾಣಕ್ಕೆ ಸದ್ಯದಲ್ಲಿಯೇ ಚಾಲನೆ ನೀಡಲಾಗುವುದು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ನಡೆದ ನೂತನ ನಿರ್ದೇಶಕರಿಗೆ ಅಭಿನಂದನೆ ಸಮಾರಂಭ ಉದ್ಘಾಟಿಸಿ ಮಾತನಾಡಿರು.

ಜಮೀನಿನ ಸಮಸ್ಯೆ ಈಗಾಗಲೇ ಇತ್ಯರ್ಥಗೊಂಡಿದೆ. ಒಂದು ವಾರದಲ್ಲಿ ಮನ್ಮುಲ್‌ ಉಪಕಚೇರಿ ಹೆಸರಿನಲ್ಲಿ ಆರ್‌ಟಿಸಿ ಬರಲಿದೆ. ರೈತರು ಹಾಗೂ ಹಾಲು ಉತ್ಪಾದಕ ಸಹಕಾರ ಸಂಘಗಳ ಸಿಬ್ಬಂದಿಗೆ ಅನುಕೂಲವಾಗುವಂತೆ ಸುಸರ್ಜಿತ ಕಟ್ಟಡ ನಿರ್ಮಾಣವಾಗಲಿದೆ ಎಂದರು.

ರಾಜ್ಯದಲ್ಲಿ ಕ್ಷೀರ ಕ್ರಾಂತಿಯಾಗಲು ಮಹಿಳೆಯರು ಕಾರಣ. ಬದುಕಿಗೆ ಆಸರೆಯಾಗಿ ಹೈನುಗಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಅರ್ಥಿಕವಾಗಿ ಸ್ವಾವಲಂಬಿಯಾಗುವ ಜೊತೆಗೆ ರಾಷ್ಟ್ರದ ಅರ್ಥಿಕ ಪ್ರಗತಿಗೆ ಕಾರಣರಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ಜಾರಿಗೆ ಬರುವಂತೆ ಕ್ಷೀರಭಾಗ್ಯ ಘೋಷಣೆ ಮಾಡಿದರು. ಇದರಿಂದ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಕ್ಕಿದಂತಾಯಿತು. ಜೊತೆಗೆ ಉಳಿಯುತ್ತಿದ್ದ ಹಾಲಿನ ಸಮಸ್ಯೆಯೂ ಬಗೆಹರಿಯಿತು. ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಹಸಿವು ಹಾಗೂ ಸಾಮಾಜಿಕ ನ್ಯಾಯದ ಬಗ್ಗೆ ಗೊತ್ತಿಲ್ಲದ ವಿರೋಧಿಗಳು ಟೀಕೆ ಮಾಡುತ್ತಾರೆ. ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿದೆ ಎಂದರು.

ನಂದಿನಿ ಬ್ರ್ಯಾಂಡ್‌ ಅನ್ನು ದೆಹಲಿ ಮಾರುಕಟ್ಟೆಗೆ ವಿಸ್ತರಿಸಲಾಗಿದೆ. ಅಲ್ಲಿನ ಜನರು ನಂದಿನಿ ಹಾಲನ್ನು ಸ್ವೀಕರಿಸುತ್ತಿದ್ದರೂ ಕೂಡ ಗುಜರಾತ್‌ಗೆ ಸೇರಿದ ಅಮುಲ್ ಸಂಸ್ಥೆಯವರು ನಂದಿನಿ ಹಾಲು ಮಾರಾಟವಾಗದಂತೆ ಪಿತೂರಿ ಮಾಡುತ್ತಿದೆ. ಗುಜರಾತ್‌ಗೆ ತಕ್ಕ ಪಾಠ ಕಲಿಸಬೇಕಿದೆ. ಪಿತೂರಿಗೆ ಬಗ್ಗದೇ ದೆಹಲಿ ಸೇರಿದಂತೆ ಹೊರ ರಾಜ್ಯದಲ್ಲಿ ನಂದಿನಿ ಹಾಲಿಗೆ ಉತ್ತಮ ಮಾರುಕಟ್ಟೆ ಕಲ್ಪಿಸಲು ಸರ್ಕಾರ ದಿಟ್ಟಹೆಜ್ಜೆ ಹಾಕಲಾಗುವುದು ಎಂದರು.

ಮನ್ಮುಲ್‌ನಿಂದ ಮೇವು ಕತ್ತರಿಸುವ, ಹಾಲು ಕರೆಯುವ ಯಂತ್ರ ಸೇರಿದಂತೆ ಹಲವು ಸೌಲಭ್ಯ ನೀಡಲಾಗುತ್ತಿದೆ. ರೈತರು ಸಮರ್ಪಕವಾಗಿ ಬಳಸಿಕೊಂಡು ಶುದ್ಧ ಹಾಲನ್ನು ಪೂರೈಕೆ ಮಾಡುವ ಮೂಲಕ ಸಂಸ್ಥೆಯನ್ನು ಅಭಿವೃದ್ಧಿಗೊಳಿಸಬೇಕೆಂದು ಸಲಹೆ ನೀಡಿದರು.

ಮನ್ಮುಲ್ ನಿರ್ದೇಶಕ ಕೃಷ್ಣೇಗೌಡ, ವಿಶ್ವಾಸ್ ಮಾತನಾಡಿ, ತಾಲೂಕಿನಲ್ಲಿ ಶುದ್ಧ ಹಾಲು ಪೂರೈಕೆಯಲ್ಲಿ ಈ ಹಿಂದೆ ಜಿಲ್ಲೆಗೆ 6 ಸ್ಥಾನದಲ್ಲಿತ್ತು. ನಾನು ನಿರ್ದೇಶಕನ್ನಾಗಿ ಆಯ್ಕೆಯಾದ ನಂತರ ರೈತರಿಗೆ ಹಾಗೂ ಸಿಬ್ಬಂದಿಗೆ ತಿಳಿವಳಿಕೆ ನೀಡಿದ ಪರಿಣಾಮ 3ನೇ ಸ್ಥಾನಕ್ಕೆ ಬಂದಿದೆ, ಶುದ್ಧ ಹಾಲು ಪೂರೈಕೆಯಲ್ಲಿ ಪ್ರಥಮ ಸ್ಥಾನ ಬರುವಂತೆ ಹಾಲು ಉತ್ಪಾದಕರು ಸಹಕಾರ ನೀಡಬೇಕೆಂದು ಕೋರಿದರು.

ನೂತನ ನಿರ್ದೇಶಕರಿಗೆ ಆಯ್ಕೆ ಮಾಡಿದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಶಾಸಕ ಪಿ.ಎಂ ನರೇಂದ್ರಸ್ವಾಮಿ ಅವರ ಸಲಹೆ ಸಹಕಾರದೊಂದಿಗೆ ಸಂಘಗಳನ್ನು ಮತ್ತುಷ್ಟು ಅಭಿವೃದ್ಧಿಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಇದೇ ವೇಳೆ ನಿವೃತ್ತರಾದ ಸಿಬ್ಬಂದಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಅಭಿನಂದಿಸಿ ಗೌರವಿಸಲಾಯಿತು. ಅರ್ಹ ಫಲಾನುಭವಿಗಳಿಗೆ ವಿವಿಧ ಸೌಲಭ್ಯದ ಚೆಕ್ ಹಾಗೂ ಪರಿಹಾರದ ಚೆಕ್‌ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮನ್ಮುಲ್ ಅಧ್ಯಕ್ಷ ಶಿವಕುಮಾರ್, ನಿರ್ದೇಶಕ ಹರೀಶ್‌ಬಾಬು, ವ್ಯವಸ್ಥಾಪಕ ನಿರ್ದೇಶಕ ಮಂಜೇಶ್, ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಲಿಂಗೇಗೌಡ, ಮನ್ಮುಲ್‌ನ ಡಾ.ಅಕಲಪ್ಪರೆಡ್ಡಿ, ಸದಾಶಿವ, ಸಿದ್ದೇಗೌಡ, ಡಾ.ತೇಜಸ್ವಿನಿ, ಡಾ.ಯೋಗೇಶ್ ಜಾನಪದ ಕಲಾವಿದ ಮಹದೇವಸ್ವಾಮಿ ಸೇರಿದಂತೆ ಮುಖಂಡರು ಹಾಜರಿದ್ದರು.