ಸಾರಾಂಶ
ಕೊಪ್ಪಳ: ಜಿಲ್ಲಾ ಕ್ರೀಡಾಂಗಣವನ್ನು ಬರುವ ದಿನಗಳಲ್ಲಿ ರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.
₹2.50 ಕೋಟಿ ವೆಚ್ಚದಲ್ಲಿ ಜಿಲ್ಲಾ ಕ್ರೀಡಾಂಗಣ ಹಾಗೂ ತಾಲೂಕು ಕ್ರೀಡಾಂಗಣದ ಅಭಿವೃದ್ಧಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು. ಈಗಾಗಲೇ ಅನೇಕ ಯೋಜನೆಯಲ್ಲಿ ಕ್ರೀಡಾಂಗಣ ಅಭಿವೃದ್ಧಿ ಕೈಗೊಳ್ಳಲಾಗಿದೆ. ಕೆಕೆಆರ್‌ಡಿಬಿಯಲ್ಲಿ ರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದರು.ಯುವಕರು ಕ್ರೀಡೆಯಲ್ಲಿ ಹೆಚ್ಚು ಭಾಗವಹಿಸಬೇಕು, ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಕ್ರೀಡೆ ಜೀವನದಲ್ಲಿ ಅತ್ಯವಶ್ಯ. ಕ್ರೀಡೆಯಿಂದ ದೈಹಿಕವಾಗಿ ಬಲಿಷ್ಠರಾಗಬಹುದು. ಯುವಕರಿಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ನಾವು ಮಾಡಿಕೊಡಲು ಸಿದ್ಧ ಎಂದು ಹೇಳಿದರು. ಜಿಲ್ಲಾ ಮತ್ತು ತಾಲೂಕು ಕ್ರೀಡಾಂಗಣದ ಅಭಿವೃದ್ಧಿಗೆ ಹಿಂದೆಯೂ ಅನುದಾನ ಕೊಡುವ ಕೆಲಸ ಮಾಡಿ ಕ್ರೀಡಾಂಗಣಗಳ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ತಾಲೂಕ ಕ್ರೀಡಾಂಗಣದಲ್ಲಿ ಜಿಮ್ ವ್ಯವಸ್ಥೆ ಮಾಡಿ ಕೊಡಲು ಯುವಕರು ಬೇಡಿಕೆ ಇಟ್ಟಿದ್ದು, ಅದಕ್ಕೂ ಕೂಡ ಅನುದಾನ ಒದಗಿಸುತ್ತೇವೆ ಎಂದರು.
ಸಂಸದ ಕೆ. ರಾಜಶೇಖರ್ ಹಿಟ್ನಾಳ ಮಾತನಾಡಿ, ಕ್ರೀಡಾಂಗಣಗಳ ಅಭಿವೃದ್ಧಿಯಿಂದ ಕ್ರೀಡಾಪಟುಗಳಿಗೆ ಕ್ರೀಡೆಯ ಮೇಲೆ ಹೆಚ್ಚಿನ ಆಸಕ್ತಿ ಬರಲು ಸಾಧ್ಯ. ಆದ್ದರಿಂದ ಜಿಲ್ಲಾ ಮತ್ತು ತಾಲೂಕು ಕ್ರೀಡಾಂಗಣಗಳ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿಯನ್ನು ವಹಿಸಲಾಗುವುದು ಎಂದರು.ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ನಾನು ಕೂಡ ಹಿಂದೆ ಅಧಿಕಾರದಲ್ಲಿ ಇದ್ದಾಗ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಿ, ಕ್ರೀಡಾಂಗಣಗಳ ಅಭಿವೃದ್ಧಿಗೆ ಅನುದಾನ ನೀಡಿದ್ದೆ, ಹಿಟ್ನಾಳ ಸಹೋದರರು ಕೂಡ ಕ್ರೀಡಾಂಗಣಗಳ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ಹೊಂದಿದ್ದು ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದರು.
ನಾನೀಗ ಮಾಜಿಯಾಗಿದ್ದೇನೆ, ಯಾವುದೇ ಅಧಿಕಾರ ಇಲ್ಲ. ಹೀಗಿದ್ದರೂ ವೇದಿಕೆಯ ಮೇಲೆ ಬರಲು ಮುಜುಗರವಾಗುತ್ತದೆ. ಶಿಷ್ಟಾಚಾರದ ಉಲ್ಲಂಘನೆಯಾಗುತ್ತದೆ. ಆದರೂ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಬಿಡುವುದೇ ಇಲ್ಲ. ಕರೆದಾಗ ಮೀರುವಂತೆಯೂ ಇಲ್ಲ. ಆದರೂ ಮುಜುಗರವಾಗುತ್ತದೆ ಎಂದು ಮಾಜಿ ಸಂಸದ ಸಂಗಣ್ಣ ಕರಡಿ ಹೇಳಿದರು.ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ, ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಕಾಟನ್ ಪಾಷಾ, ಪ್ರಸನ್ನ ಗಡಾದ, ನಗರಸಭೆಯ ಸದಸ್ಯರಾದ ಮಹೇಂದ್ರ ಚೋಪ್ರಾ, ಮುತ್ತುರಾಜ್ ಕುಷ್ಟಗಿ, ಅರುಣ್ ಅಪ್ಪುಶೆಟ್ಟಿ, ಬಸಯ್ಯ ಹಿರೇಮಠ, ಖತಿಬ್ ಬಾಷು, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣರೆಡ್ಡಿ ಗಲಬಿ, ವಿರೂಪಾಕ್ಷಯ್ಯ ಗದುಗಿನಮಠ, ಕಿಶೋರಿ ಬೂದನೂರು, ಜ್ಯೋತಿ ಗೊಂಡಬಾಳ, ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ಅಕ್ಬರ್ ಪಲ್ಟಾನ್, ಕ್ರೀಡಾ ಇಲಾಖೆಯ ಅಧಿಕಾರಿ ವಿಠ್ಠಲ್ ಉಪಸ್ಥಿತರಿದ್ದರು.
ಕಾಂಗ್ರೆಸ್‌ಮಯ: ಕೊಪ್ಪಳ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಂಗಣ ಅಭಿವೃದ್ಧಿ ಅಡಿಗಲ್ಲು ಸಮಾರಂಭ ಅಕ್ಷರಶಃ ಕಾಂಗ್ರೆಸ್‌ಮಯವಾಗಿತ್ತು. ಅಧಿಕಾರೇತರರು, ಪಕ್ಷದ ಪದಾಧಿಕಾರಿಗಳೇ ವೇದಿಕೆಯಲ್ಲಿ ತುಂಬಿ ಹೋಗಿದ್ದರು.