ಅಲೆಮಾರಿಗಳಿಗೆ ಶಾಶ್ವತ ನೆಲೆ ಒದಗಿಸಲು ನವನಗರ ನಿರ್ಮಾಣ: ಪಲ್ಲವಿ

| Published : Feb 08 2025, 12:31 AM IST

ಅಲೆಮಾರಿಗಳಿಗೆ ಶಾಶ್ವತ ನೆಲೆ ಒದಗಿಸಲು ನವನಗರ ನಿರ್ಮಾಣ: ಪಲ್ಲವಿ
Share this Article
  • FB
  • TW
  • Linkdin
  • Email

ಸಾರಾಂಶ

ಧಾರವಾಡದಲ್ಲಿರುವ ಅಲೆಮಾರಿಗಳ ಸಮೀಕ್ಷೆ ಮಾಡಿ ಎಷ್ಟು ಕುಟುಂಬಗಳಿಗೆ ನಿವೇಶನ, ವಸತಿ ಅಗತ್ಯತೆಯನ್ನು ಗುರುತಿಸಿ ಒಂದು ವಾರದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲು ತೀರ್ಮಾನಿಸಲಾಗಿದೆ. ಈ ಕುರಿತಾಗಿ ಸಮಾಜ ಕಲ್ಯಾಣ ಇಲಾಖೆ, ಅಪರ ಜಿಲ್ಲಾಧಿಕಾರಿಗಳ ಜತೆಗೆ ಸಭೆ ಮಾಡಿ ಒಪ್ಪಿಗೆ ಪಡೆಯಲಾಗಿದೆ.

ಧಾರವಾಡ:

ಧಾರವಾಡ ಹಾಗೂ ಸುತ್ತಲಿನ ಪ್ರದೇಶದಲ್ಲಿರುವ ನಿವೇಶನ, ವಸತಿ ರಹಿತ ಅಲೆಮಾರಿಗಳಿಗೆ ಶಾಶ್ವತ ನೆಲೆ ಒದಗಿಸಲು ಸಮೀಪದ ಹೆಬ್ಬಳ್ಳಿ ಬಳಿ ರಾಜ್ಯ ಸರ್ಕಾರ ವಿವಿಧ ಯೋಜನೆಗಳಿಗೆ ನಿಗದಿಪಡಿಸಿರುವ 11 ಎಕರೆ ಪ್ರದೇಶದಲ್ಲಿ ನವನಗರ ನಿರ್ಮಿಸಲಾಗುವುದು ಎಂದು ಕರ್ನಾಟಕ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರವಾಡದಲ್ಲಿರುವ ಅಲೆಮಾರಿಗಳ ಸಮೀಕ್ಷೆ ಮಾಡಿ ಎಷ್ಟು ಕುಟುಂಬಗಳಿಗೆ ನಿವೇಶನ, ವಸತಿ ಅಗತ್ಯತೆಯನ್ನು ಗುರುತಿಸಿ ಒಂದು ವಾರದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲು ತೀರ್ಮಾನಿಸಲಾಗಿದೆ. ಈ ಕುರಿತಾಗಿ ಸಮಾಜ ಕಲ್ಯಾಣ ಇಲಾಖೆ, ಅಪರ ಜಿಲ್ಲಾಧಿಕಾರಿಗಳ ಜತೆಗೆ ಸಭೆ ಮಾಡಿ ಒಪ್ಪಿಗೆ ಪಡೆಯಲಾಗಿದೆ. ಇದೇ ರೀತಿ ಪ್ರತಿಯೊಂದು ಜಿಲ್ಲೆ, ತಾಲೂಕುಗಳಿಗೆ ಪ್ರವಾಸ ಮಾಡಿ ಸಮೀಕ್ಷೆ ಮೂಲಕ ಅಲೆಮಾರಿಗಳಿಗೆ ನೆಲೆ ಒದಗಿಸುವ ಪ್ರಯತ್ನ ಮಾಡುತ್ತೇನೆ ಎಂದರು.

ಸ್ವಾತಂತ್ರ್ಯ ದೊರೆತು 78 ವರ್ಷ ಕಳೆದರೂ ನೆಲಮೂಲ ಸಂಸ್ಕೃತಿಯ ಅಲೆಮಾರಿಗಳು-ಅರೆ ಅಲೆಮಾರಿಗಳು ಇನ್ನೂ ಒಂದೆಡೆ ನೆಲೆ ನಿಂತು ತಮ್ಮ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ. ಈ ಜನಾಂಗಕ್ಕೆ ಸಾಕಷ್ಟು ಸೌಲಭ್ಯಗಳಿದ್ದರೂ ಶಾಶ್ವತ ನೆಲೆ ಇಲ್ಲದ ಕಾರಣ ಅವುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಜನಾಂಗಕ್ಕೆ ಶಾಶ್ವತ ನೆಲೆ ಕಲ್ಪಿಸಲು ನಿಗಮ ಸ್ಥಾಪಿಸಿದ್ದು ಈ ಮೂಲಕ ನಿವೇಶನ ಹಾಗೂ ವಸತಿ ನೀಡಲು ಯೋಜನೆ ರೂಪಿಸಲಾಗಿದೆ ಎಂದರು.

ರಾಜ್ಯದಲ್ಲಿ 2011ರ ಜನಗಣತಿ ಪ್ರಕಾರ 51 ಎಸ್ಸಿ ಅಲೆಮಾರಿಗಳು, 23 ಎಸ್ಟಿ ಅಲೆಮಾರಿಗಳು ಮತ್ತು 25 ಆದಿವಾಸಿ ಅಲೆಮಾರಿ ಸಮುದಾಯಗಳಿವೆ. ಇವರಿಗೆ ನೇರ ಸಾಲ, ಸ್ವಯಂ ಉದ್ಯೋಗ, ಸ್ವಾವಲಂಬಿ ಸಾರಥಿ, ಮೈಕ್ರೋ ಕ್ರೆಡಿಟ್, ಗಂಗಾ ಕಲ್ಯಾಣ ಹಾಗೂ ವಿಶೇಷವಾಗಿ ಮಹಿಳೆಯರಿಗಾಗಿ ಭೂಒಡೆತನ ಯೋಜನೆ ಜಾರಿಗೆ ತರಲಾಗುತ್ತಿದೆ. ಈ ಯೋಜನೆಗಳ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದು, ಅಲೆಮಾರಿ ಸಮುದಾಯದ ಐವರು ಮುಖಂಡರಲ್ಲಿ ಒಬ್ಬರು ಮಹಿಳೆ ಒಳಗೊಂಡಂತೆ ಜಿಲ್ಲಾ ಸಮಿತಿ ರಚಿಸಿ, ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದರು.

ರಾಜ್ಯದ ಪ್ರತಿಯೊಂದು ಪ್ರದೇಶದಲ್ಲಿ ಅಲೆಮಾರಿಗಳಿದ್ದಾರೆ. ಈ ಪೈಕಿ ಬೆಳಗಾವಿ, ರಾಯಚೂರು, ಯಾದಗಿರಿ, ಬಾಗಲಕೋಟ ಜಿಲ್ಲೆಗಳಲ್ಲಿ ಹೆಚ್ಚಿದ್ದು ಧಾರವಾಡ ಜಿಲ್ಲೆಯಲ್ಲಿ 30 ಸಾವಿರ ಅಲೆಮಾರಿಗಳ ಜನಸಂಖ್ಯೆ ಇರುವುದಾಗಿ ತಿಳಿದು ಬಂದಿದ್ದು, ಈ ಪೈಕಿ ನಿವೇಶನ ರಹಿತ 1380 ಕುಟುಂಬಗಳಿವೆ ಎಂಬ ಮಾಹಿತಿ ಸಮಾಜ ಕಲ್ಯಾಣ ಇಲಾಖೆಯಿಂದ ತಿಳಿದು ಬಂದಿದೆ. ಈ ಬಗ್ಗೆ ಇನ್ನೂ ಸ್ಪಷ್ಟ ಸಮೀಕ್ಷೆ ನಡೆಯಬೇಕಿದೆ ಎಂದರು.

ಶುಕ್ರವಾರ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಿದ್ದೇಶ್ವರ ಸೇರಿದಂತೆ ಕೆಲವು ಅಲೆಮಾರಿಗಳ ಸ್ಥಳಗಳಿಗೆ ಭೇಟಿ ನೀಡಿ ಅವರ ಸ್ಥಿತಿ ಗತಿ ಅರ್ಥೈಸಿಕೊಂಡಿದ್ದೇನೆ ಎಂದು ಪಲ್ಲವಿ ಜಿ. ತಿಳಿಸಿದರು.ಆಯೋಗ ಸ್ಥಾಪನೆ..

ಕಿಳ್ಳೇಕ್ಯಾತ ಸಮುದಾಯಕ್ಕೆ ಎಸ್ಸಿ ಪ್ರಮಾಣ ಪತ್ರ ಸಿಗುತ್ತಿಲ್ಲ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಈ ಸಮುದಾಯ ಸೇರಿದಂತೆ ಹಲವು ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನ ನಡೆಯುತ್ತಿದೆ. ಅದರ ವರದಿ ಬಂದ ಬಳಿಕವೇ ಅವರಿಗೆ ಯಾವ ಪ್ರಮಾಣ ಪತ್ರ ನೀಡಬೇಕಾಗುತ್ತದೆ. ಇನ್ನು, ತಳ ಸಮುದಾಯದಲ್ಲಿ ಹಲವು ಸಮಸ್ಯೆಗಳಿದ್ದು ಅವುಗಳಿಗೆ ಶಾಶ್ವತ ಪರಿಹಾರವಾಗಿ ಎಸ್ಸಿ-ಎಸ್ಟಿ ಅಲೆಮಾರಿಗಳ ಆಯೋಗ ಆಗಬೇಕು ಎಂಬ ಒತ್ತಡವಿದ್ದು, ಬರುವ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ನಿರೀಕ್ಷೆ ಹೊಂದಲಾಗಿದೆ ಎಂದರು.

ಟೆಂಟ್‌ ಮುಕ್ತ ಕರ್ನಾಟಕ..

ಎಲ್ಲಿಯ ವರೆಗೂ ಶ್ರೇಣಿಕೃತ ವ್ಯವಸ್ಥೆ, ಅವರ ಉಪಟಳ, ಕೈಚಳಕ ನಡೆಯುತ್ತಿದೆಯೋ ಅಲ್ಲಿಯವರೆಗೆ ಅಲೆಮಾರಿಗಳಿಗೆ ಶಾಶ್ವತ ವಿಳಾಸ ಸಿಗುವುದಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸದ್ಯಕ್ಕೆ ನಿಗಮ ಸ್ಥಾಪನೆ ಮಾಡಿದ್ದು, ಮೊದಲ ಅಧ್ಯಕ್ಷರಾಗಿ ತಾವು ಕರ್ನಾಟಕವನ್ನು ಟೆಂಟ್‌ ಮುಕ್ತ ರಾಜ್ಯವನ್ನಾಗಿ ನಿರ್ಮಿಸಲು ಪ್ರಯತ್ನಿಸುತ್ತೇನೆ ಎಂದು ಎಸ್ಸಿ-ಎಸ್ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ, ಹೇಳಿದರು.