ಸಾರಾಂಶ
ಶಿರಸಿ: ದಕ್ಷಿಣ ಭಾರತದ ಅತಿ ದೊಡ್ಡ ಜಾತ್ರೆಯಲ್ಲೊಂದಾದ ಶಿರಸಿಯ ಮಾರಿಕಾಂಬಾ ದೇವಿ ಜಾತ್ರೆಗೆ ಸಿದ್ಧತೆ ಚುರುಕುಗೊಂಡಿದ್ದು, ನಗರದ ಬಿಡ್ಕಿಬೈಲ್‌ನ ಜಾತ್ರಾ ಗದ್ದುಗೆಯ ಸುತ್ತಮುತ್ತಲು ಚಪ್ಪರದ ಪ್ರವೇಶದ್ವಾರ, ಮುಖಮಂಟಪ ನಿರ್ಮಾಣ ಹಾಗೂ ಅಲಂಕಾರದ ಕಾರ್ಯವು ಆರಂಭಗೊಂಡಿದೆ.
ಜಾತ್ರೆಯು ಮಾ. ೧೯ರಿಂದ ೨೭ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಈಗಾಗಲೇ ಶಿರಸಿಯ ಸುತ್ತಮುತ್ತಲಿನ ೪೮ ಸೀಮೆಗಳ ರೈತರು, ಭಕ್ತರ ಮನೆಗಳಿಗೆ ದೇವಿ ಕಲ್ಯಾಣೋತ್ಸವ ಹಾಗೂ ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆ ತಲುಪಿಸುತ್ತಿದ್ದಾರೆ. ಪ್ರತಿ ಮನೆಗೆ ಮಾರಿಪಟ್ಟಿ ಕೊಡುವ ದೇವಾಲಯದ ಉಗ್ರಾಣಿಗಳು ಅದರ ಜತೆ ಜಾತ್ರೆಯ ಆಮಂತ್ರಣ ಪತ್ರಿಕೆ ತಲುಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಊರಿನ ಮುಖ್ಯಸ್ಥರು ಆಮಂತ್ರಣ ಪತ್ರಿಕೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ.ಕಳೆದ ೫ ಜಾತ್ರೆಗಳಿಂದ ಜಾತ್ರಾ ಪ್ರವೇಶದ್ವಾರ ಹಾಗೂ ಮುಖಮಂಟಪ ಮತ್ತು ಇತರ ನಿರ್ಮಾಣಗಳನ್ನು, ಅಲಂಕರಣಗಳನ್ನು ನಿರ್ಮಿಸುತ್ತ ಬಂದಿರುವ ಉಡುಪಿಯ ಮಂಜುನಾಥ ಇಲೆಕ್ಟ್ರಿಕಲ್ಸ್‌ನ ರಾಜೇಶ ರಾವ್ ಈ ವರ್ಷವೂ ನಿರ್ಮಾಣದ ಕಾರ್ಯ ನಡೆಸುತ್ತಿದ್ದಾರೆ. ಬಿಡ್ಕಿಬೈಲಿನ ಜಾತ್ರಾ ಗದ್ದುಗೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಹಾಗೂ ಕೋಣನ ಬಿಡ್ಕಿ ಪ್ರದೇಶದಲ್ಲಿ ಜಾತ್ರಾ ಪೂರ್ವ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ನಗರದಲ್ಲಿ ನಿಧಾನವಾಗಿ ಜಾತ್ರೆಯ ಕಳೆ ಮೂಡುತ್ತಿದೆ.
ಕಳೆದ ಬಾರಿ ಜಾತ್ರೆಯಲ್ಲಿ ೬೦ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಈ ಜಾತ್ರೆಯಲ್ಲಿ ೮೫ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಕುಡಿಯುವ ನೀರು ಪೂರೈಕೆ, ವಾಹನ ನಿಲುಗಡೆ, ತಾತ್ಕಾಲಿಕವಾಗಿ ೩೦ ಕಡೆಗಳಲ್ಲಿ ಮೊಬೈಲ್ ಶೌಚಾಲಯ ನಿರ್ಮಿಸಲು ಟೆಂಡರ್ ಆಗಿದೆ. ಶಿರಸಿ ನಗರದ ೩೧ ವಾರ್ಡ್‌ಗಳಲ್ಲಿಯೂ ಸ್ವಚ್ಛತೆ ಕಾರ್ಯ ಆರಂಭಿಸಲಾಗಿದ್ದು, ಬೀದಿ ದೀಪ ದುರಸ್ತಿ ಮತ್ತು ಅಗತ್ಯವಿರುವ ಸ್ಥಳಗಳಲ್ಲಿ ಹೊಸದಾಗಿ ದೀಪದ ವ್ಯವಸ್ಥೆ ಮಾಡಲಾಗುತ್ತಿದೆ. ಪ್ಲಾಸ್ಟಿಕ್ ಮುಕ್ತ ಶಿರಸಿ ಮಾರಿಕಾಂಬಾ ಜಾತ್ರೆ ಆಚರಿಸಲು ಸಾರ್ವಜನಿಕರು ಸಹಕರಿಸಬೇಕು. ಜಾತ್ರೆಯ ಪ್ರಯುಕ್ತ ಬಿಡ್ಕಿಬೈಲ್ ಮತ್ತು ಕೋಣನ ಬಿಡ್ಕಿಯಲ್ಲಿರುವ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದ್ದು, ತರಕಾರಿ ಮಾರುಕಟ್ಟೆಯನ್ನು ನಗರದ ವಿಕಾಸಾಶ್ರಮ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ ಎಂದು ಶಿರಸಿ ನಗರಸಭೆ ಪೌರಾಯುಕ್ತ ಕಾಂತರಾಜು ತಿಳಿಸಿದರು.ಜಾತ್ರೆಯ ಪ್ರಯುಕ್ತ ೧೫೦ ವಿಶೇಷ ಬಸ್ ಬೇರೆ ಘಟಕದಿಂದ ಪಡೆಯಲಾಗುತ್ತದೆ. ಜಾತ್ರೆಯ ೨ ದಿನ ಮುಂಚಿತವಾಗಿ ಹಳೆಯ ಬಸ್ ನಿಲ್ದಾಣವನ್ನು ಹೊಸ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಲಾಗುತ್ತದೆ. ಭಕ್ತರ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ ಕಲ್ಪಿಸಲು ಸಾರಿಗೆ ಇಲಾಖೆ ಸನ್ನದ್ಧವಾಗಿದೆ. ಪ್ರಯಾಣಿಕರ ಅಗತ್ಯಕ್ಕೆ ತಕ್ಕಂತೆ ಬಸ್ ಸೌಲಭ್ಯ ಮಾಡಲಾಗುತ್ತದೆ ಎಂದು ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಹೇಳಿದ್ದಾರೆ. ಇದು ಶಿರಸಿಯ ಶ್ರೀದೇವಿಗೆ ಸೇವೆ ಸಲ್ಲಿಸುತ್ತಿರುವ ೬ನೇ ಜಾತ್ರೆ ಆಗಿದೆ. ಈ ವರ್ಷ ವಿಶೇಷ ವಿನ್ಯಾಸದ ಮಂಟಪ ನಿರ್ಮಿಸಲಾಗುತ್ತಿದೆ ಎಂದು ಜಾತ್ರಾ ಮಂಟಪ ನಿರ್ಮಾತೃ ರಾಜೇಶ ರಾವ್ ಹೇಳಿದ್ದಾರೆ.