ಹರಳಯ್ಯ ಗುರುಪೀಠದ ಆರ್ಚ್ ನಿರ್ಮಾಣಕ್ಕೆ ಅಡ್ಡಿ: ಜಮೀನು ಅತಿಕ್ರಮಣದ ಆರೋಪ

| Published : Oct 14 2025, 01:00 AM IST

ಹರಳಯ್ಯ ಗುರುಪೀಠದ ಆರ್ಚ್ ನಿರ್ಮಾಣಕ್ಕೆ ಅಡ್ಡಿ: ಜಮೀನು ಅತಿಕ್ರಮಣದ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಹಿರಿಯೂರು ತಾಲೂಕಿನ ಐಮಂಗಲದ ಹರಳಯ್ಯ ಗುರುಪೀಠ ಮಠದ ಆರ್ಚ್‌ಗೆ ಪಕ್ಕದ ಜಮೀನಿನವರು ಬೇಲಿ ಹಾಕಿರುವುದು.

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ಐಮಂಗಲದ ಮಹಾ ಶಿವಶರಣ ಹರಳಯ್ಯ ಗುರುಪೀಠದ ಮಠ ನಿರ್ಮಾಣ ಹಂತದ ದ್ವಾರ ಬಾಗಿಲಿಗೆ ತಂತಿ ಬೇಲಿ ಹಾಕಿರುವ ಘಟನೆ ನಡೆದಿದೆ.

ಜಮೀನು ವಿವಾದದ ಹಿನ್ನೆಲೆಯಲ್ಲಿ ಪಕ್ಕದ ಜಮೀನಿನವರು ಬೇಲಿ ಹಾಕಿದ್ದು ಮಠದ ಆರ್ಚ್ ನಿರ್ಮಾಣ ಸ್ಥಳ ನಮಗೆ ಸೇರಿದ್ದು ಎಂದು ಸಿದ್ದೇಶ್ವರ್ ಎನ್ನುವವರ ವಾದವಾಗಿದ್ದು, ಹರಳಯ್ಯಮಠದ ಹರಳಯ್ಯ ಶ್ರೀಗಳ ವಿರುದ್ಧ ಒತ್ತುವರಿ ಆರೋಪ ಮಾಡಲಾಗಿದೆ. ಹಿಂದೂ ಧರ್ಮ ಪ್ರಚಾರ ಮಾಡುತ್ತಾರೆ, ಶಾಲೆ ಇದೆ ಎಂದು ನಾವೇ 20 ಅಡಿಯಷ್ಟು ಜಾಗವನ್ನು ದಾರಿಗೆ ಬಿಟ್ಟು ಕೊಟ್ಟಿದ್ದೆವು. ಆದರೆ ಅವರು ನಮ್ಮ ಜಾಗದಲ್ಲಿಯೇ ವಿದ್ಯುತ್ ಕಂಬಗಳನ್ನು ಹಾಕಿ ಸುಮಾರು 7-8 ನಿವೇಶನ ಆಗುವಷ್ಟು ಜಾಗವನ್ನು ಆಕ್ರಮಿಸಿಕೊಂಡು ಕಾಂಕ್ರಿಟ್ ಹಾಕಲು ಹೋದರು. ಆಗ ತಡೆಯಲು ಹೋದ ನಮ್ಮ ತಂದೆ ಮೇಲೆ ಗಲಾಟೆ ಮಾಡಿಸಿದರು. ದೂರು ನೀಡಲು ಹೋದರೆ ದೂರು ಪಡೆಯಲಿಲ್ಲ. ಇದೀಗ ನಾವು ಕಾನೂನು ಹೋರಾಟ ನಡೆಸುತ್ತೇವೆ ಎಂದು ಸಿದ್ದೇಶ್ವರ್ ಹೇಳುತ್ತಿದ್ದಾರೆ.

ಈ ಬಗ್ಗೆ ಹರಳಯ್ಯ ಶ್ರೀಗಳು ಪ್ರತಿಕ್ರಿಯಿಸಿ ಜಾತಿ ಕಾರಣಕ್ಕೆ ಕಿರುಕುಳ ನೀಡುತ್ತಿದ್ದಾರೆ.

ದಲಿತ ಮಠ ಎಂಬ ಕಾರಣಕ್ಕೆ ಇಲ್ಲದ ವಿವಾದ ಸೃಷ್ಠಿ ಮಾಡಲಾಗುತ್ತಿದೆ. ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದು ಮಾದಿಗರ ಮಠ ಬೆಳೆಯಬಾರದು ಎಂಬ ಉದ್ದೇಶ ಅವರದ್ದು.ಕೂತು ಮಾತಾಡೋಣ. ಜಾಗ ಅವರದ್ದೇ ಆದರೆ ನಮಗೆ ಅದರ ಅವಶ್ಯಕತೆ ಇಲ್ಲ. ಕಾನೂನು ಪ್ರಕಾರ ರಸ್ತೆ ಜಾಗ ಇದ್ದೇ ಇರುತ್ತದೆ ಎಂದರು.

ಸ್ಥಳಕ್ಕೆ ಹಿರಿಯೂರು ಡಿವೈಎಸ್‌ಪಿ ಶಿವಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು ಹರಳಯ್ಯ ಶ್ರೀ ಹಾಗೂ ಸಿದ್ಧೇಶ್ವರ ರವರ ಅಹವಾಲು ಆಲಿಸಿ ಕಾನೂನು, ಸುವ್ಯವಸ್ಥೆ ಕಾಪಾಡುವಂತೆ ಸೂಚನೆ ನೀಡಿದ್ದಾರೆ.ದಾಖಲೆಗಳನ್ನು ಪರಿಶೀಲಿಸಿ ಸಂಬಂಧಿಸಿದ ಅಧಿಕಾರಿಗಳಿಂದ ಮುಂದಿನ ಕ್ರಮ ಕೈಗೊಳ್ಳುವುದಾಗಿ ಡಿವೈಎಸ್ ಪಿ ಹೇಳಿದ್ದಾರೆ.