ರಾಜ್ಯದಲ್ಲೇ ಎತ್ತರದ ಪೊಲೀಸ್ ಹುತಾತ್ಮ ಸ್ಮಾರಕ ನಿರ್ಮಾಣ

| Published : Oct 12 2025, 01:00 AM IST

ರಾಜ್ಯದಲ್ಲೇ ಎತ್ತರದ ಪೊಲೀಸ್ ಹುತಾತ್ಮ ಸ್ಮಾರಕ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದ ಶಾಂತಿ- ಸುವ್ಯವಸ್ಥೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಹುತಾತ್ಮ ಪೊಲೀಸರ ಸ್ಮರಣಾರ್ಥ ರಾಜ್ಯದಲ್ಲೇ ಅತಿ ಎತ್ತರದ ಹುತಾತ್ಮ ಸ್ಮಾರಕ ಗಡಿಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸಮಾಜದ ಶಾಂತಿ- ಸುವ್ಯವಸ್ಥೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಹುತಾತ್ಮ ಪೊಲೀಸರ ಸ್ಮರಣಾರ್ಥ ರಾಜ್ಯದಲ್ಲೇ ಅತಿ ಎತ್ತರದ ಹುತಾತ್ಮ ಸ್ಮಾರಕ ಗಡಿಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿದೆ.

ಚಾಮರಾಜನಗರ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ಈ ಪೊಲೀಸ್ ಹುತಾತ್ಮ ಸ್ಮಾರಕ ನಿರ್ಮಾಣವಾಗುತ್ತಿದ್ದು ಇದೇ ಅ.21 ರಂದು ಲೋಕಾರ್ಪಣೆ ಮಾಡಲು ಜಿಲ್ಲಾ ಪೊಲೀಸ್ ಮುಂದಾಗಿದೆ. ಕ್ಯಾಂಪಾ ಕೋಲಾ ಕಂಪನಿಯು ಸಿಎಸ್ಆರ್ ಹಣವನ್ನು ಈ ಸ್ಮಾರಕ ನಿರ್ಮಾಣಕ್ಕೆ ಬಳಸಲಾಗುತ್ತಿದೆ.

27 ಅಡಿ ಎತ್ತರ- ಸುತ್ತಲೂ ಹುಲ್ಲುಹಾಸು, ತೋಟ:

ನಿರ್ಮಾಣ ಮಾಡುತ್ತಿರುವ ಪೊಲೀಸ್ ಹುತಾತ್ಮ ಸ್ಮಾರಕವು 27 ಅಡಿ ಎತ್ತರವಾಗಿದ್ದು ರಾಜ್ಯದಲ್ಲೇ ಅತಿ ಎತ್ತರದ ಪೊಲೀಸ್ ಹುತಾತ್ಮ ಸ್ಮಾರಕ ಇದಾಗಿದೆ. ಸ್ಮಾರಕಕ್ಕೆ ಉತ್ಕೃಷ್ಟ ಗುಣಮಟ್ಟದ ಗ್ರಾನೈಟ್ ಬಳಸಲಾಗುತ್ತಿದ್ದು ಹುಲ್ಲುಹಾಸು ಹಾಗೂ ತೋಟವು ನಿರ್ಮಾಣವಾಗಲಿದೆ. ಜೊತೆಗೆ, ಪರೇಡ್ ಮೈದಾನವನ್ನು ನವೀಕರಣ ಮಾಡಲಾಗುತ್ತಿದೆ.

ದೆಹಲಿಯ ಚಾಣಕ್ಯಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದ ಹುತಾತ್ಮ ಪೊಲೀಸ್ ಸ್ಮಾರಕವು 30 ಅಡಿ ಎತ್ತರವಿತ್ತು. ಅದಾದ ನಂತರ, 27 ಅಡಿ ಎತ್ತರದ ಸ್ಮಾರಕವು ಚಾಮರಾಜನಗರದ್ದಾಗಿರಲಿದೆ. ಇನ್ನು, ಪರೇಡ್ ಗ್ರೌಂಡ್ ಕೂಡ ನವೀಕರಣ ಮಾಡುತ್ತಿರುವುದರಿಂದ ಮೈದಾನದ ಸನಿಹದಲ್ಲೇ ಇರುವ ಶಸ್ತ್ರಗಾರದಿಂದ ಬಂದೂಕು ಪಡೆದು ಪರೇಡ್ ನಡೆಸಲು ಅನುಕೂಲ ಆಗಲಿದೆ. ಶಸ್ತಗಾರದಿಂದ ಎಸ್ಪಿ ಕಚೇರಿ ಸಮೀಪದ ಪೊಲೀಸ್ ಪರೇಡ್ ಗ್ರೌಂಡ್ ಗೆ ತೆರಳಬೇಕಾದ ಅಲೆದಾಟ ತಪ್ಪಲಿದೆ.

ದಂತಚೋರ, ಕಾಡುಗಳ್ಳ ವೀರಪ್ಪನ್ ಸೆರೆ ಕಾರ್ಯಾಚರಣೆಯಲ್ಲಿ ಚಾಮರಾಜನಗರ ಸೇರಿದಂತೆ ಕರ್ನಾಟಕ ಪೊಲೀಸರ ಶೌರ್ಯ ನಿಜಕ್ಕೂ ಅವಿಸ್ಮರಣೀಯವಾದದ್ದು ಈ‌ ಹಿನ್ನೆಲೆ ಚಾಮರಾಜನಗರದಲ್ಲಿ ಅತಿ ಎತ್ತರದ ಪೊಲೀಸ್ ಸ್ಮಾರಕ ನಿರ್ಮಾಣವಾಗುತ್ತಿದೆ.

ಡಾ.ಬಿ.ಟಿ.ಕವಿತಾ, ಎಸ್ಪಿ, ಚಾಮರಾಜನಗರ