ಮೂರು ರೇಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ 164 ಕೋಟಿ ರು.

| Published : Feb 16 2025, 01:47 AM IST

ಸಾರಾಂಶ

ಜಿಲ್ಲೆಯ ಮೂರು ಕಡೆ ರೇಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ 164 ಕೋಟಿ ರು. ಅನುದಾನ ನೀಡಲು ಒಪ್ಪಿಗೆ ನೀಡಿದ್ದು ಶೇ.100 ರೇಲ್ವೆ ಇಲಾಖೆಯೇ ಭರಿಸಲಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗಜಿಲ್ಲೆಯ ಮೂರು ಕಡೆ ರೇಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ 164 ಕೋಟಿ ರು. ಅನುದಾನ ನೀಡಲು ಒಪ್ಪಿಗೆ ನೀಡಿದ್ದು ಶೇ.100 ರೇಲ್ವೆ ಇಲಾಖೆಯೇ ಭರಿಸಲಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಿ.ಎಸ್‌ಎಂ ಕೃಷ್ಣ ಸಿಎಂ ಆಗಿದ್ದಾಗ ಶೇ.50-50 ರ ಅನುಪಾತದಲ್ಲಿ ಮೇಲ್ಸೇತುವ ನಿರ್ಮಿಸುವ ಪ್ರಸ್ತಾವನೆ ಸಲ್ಲಿಸಲಾಗಿತ್ತು. ನೆನೆಗುದಿಗೆ ಬಿದ್ದಿದ್ದ ಮೂರು ರೇಲ್ವೆ ಮೇಲ್ಸೆತುವೆ ನಿರ್ಮಾಣಕ್ಕೆ ಕೇಂದ್ರವೇ ಪೂರ್ಣ ಪ್ರಮಾಣದಲ್ಲಿ ಅನುದಾನ ನೀಡುತ್ತದೆ. ಸಹಭಾಗಿತ್ವದ ಪ್ರಶ್ನೆಯೇ ಇಲ್ಲವೆಂದರು.ನಗರದ ರೈಲ್ವೆ ಸ್ಟೇಷನ್ ಬಳಿ ದಾವಣಗೆರೆ ಹೋಗುವ ಮಾರ್ಗದಲ್ಲಿ ಲೆವೆಲ್ ಕ್ರಾಸಿಂಗ್‌ನಲ್ಲಿ ಪ್ರತಿ ಸಲ 10 ನಿಮಿಷಗಳಷ್ಟು ಸುದೀರ್ಘ ಸಮಯ ವಾಹನ ನಿಲುಗಡೆಯಾಗಿ ಸಂಚಾರಕ್ಕೆ ತೊಂದರೆಯಾಗಿತ್ತು. ಇಲ್ಲಿನ ಮೇಲ್ಸೇತುವೆ ನಿರ್ಮಾಣಕ್ಕೆ 78.66 ಕೋಟಿ ರು., ಚಿಕ್ಕಜಾಜೂರು ಬಳಿ ರೈಲ್ವೆ ಗೇಟ್ 1ಕ್ಕೆ ಮೇಲ್ಸೇತುವೆ ನಿರ್ಮಾಣ ಮಾಡಲು 51.72 ಕೋಟಿ ರು. ಹಾಗೂ ಚಿಕ್ಕಜಾಜೂರು-ಚಿತ್ರದುರ್ಗ ಮಧ್ಯೆ ಬರುವ ಹಳಿಯೂರು ಹತ್ತಿರುವ ರೈಲ್ವೆ ಗೇಟ್-15 ಕೈ ಮೇಲ್ಸೇತುವೆ ನಿರ್ಮಾಣ ಮಾಡಲು ರು.33.65 ಕೋಟಿ ರು. ಸೇರಿ ಒಟ್ಟು 164 ಕೋಟಿ ಅನುದಾನಕ್ಕೆ ರೇಲ್ವೆ ಇಲಾಖೆ ಸಮ್ಮತಿಸಿದೆ ಎಂದರು.ಚಿತ್ರದುರ್ಗದಿಂದ ದಾವಣಗೆರೆಗೆ ಹೋಗುವ ರಸ್ತೆಯಲ್ಲಿ ಬರುವ ರೈಲ್ವೆ ಗೇಟ್ ಒಂದು ದಿನದಲ್ಲಿ ಕನಿಷ್ಠ 30 ಬಾರಿ ಮುಚ್ಚಲ್ಪಡುತ್ತದೆ. ಪ್ರತಿ ಬಾರಿ 8 ರಿಂದ 10 ನಿಮಿಷ ಎರಡೂ ಕಡೆಯಿಂದ ವಾಹನಗಳು ನಿಲುಗಡೆಯಾಗಿ ಕಿರಿಕಿರಿಯುಂಟಾಗುತ್ತಿತ್ತು. ರಾಜ್ಯ ಸರ್ಕಾರ ತನ್ನ ಪಾಲಿನ ಹಣವನ್ನು ನೀಡಲು ನಿರಾಕರಿಸಿದ ಹಿನ್ನೆಲೆ ರೇಲ್ವೆ ಸಚಿವರ ಮೇಲೆ ಒತ್ತಡ ಹೇರಿ ಇಲ್ಲಿನ ವಾಸ್ತವ ಸ್ಥಿತಿ ಮನದಟ್ಟು ಮಾಡಿಕೊಡಲಾಗಿತ್ತು. ಇದಕ್ಕೆ ಸಕಾರಾತ್ಮವಾಗಿ ಸ್ಪಂದಿಸಿ ಸಚಿವರು ಮೇಲುಸೇತುವೆಗಳ ನಿರ್ಮಾಣಕ್ಕೆ ತಗಲುವ ಸಂಪೂರ್ಣ ವೆಚ್ಚ ಇಲಾಖೆಯಿಂದಲೇ ಭರಿಸಲು ಸಮ್ಮತಿಸಿದ್ದಾರೆ ಎಂದರು..ನಗರ ಪರಿಮಿತಿಯಲ್ಲಿ ಮೇಲುಸೇತುವೆ ನಿರ್ಮಾಣಕ್ಕೆ ಬಿಡುಗಡೆಯ 78.66 ಕೋಟಿ ರು. ಅನುದಾನದಲ್ಲಿ 4 ಪಥದ ಮೇಲು ಸೇತುವೆ ನಿರ್ಮಾಣ, ಮೇಲೆ ಎರಡೂ ಕಡೆ 3 ಅಡಿ ಪಾದಚಾರಿ ರಸ್ತೆ, ಮತ್ತು ಸೇತುವೆ ಕೆಳಗೆ ಎರಡೂ ಕಡೆ 5.5 ಮೀಟರ್ ಅಗಲದ ಸರ್ವೀಸ್ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಸೇತುವೆ ನಿರ್ಮಾಣಕ್ಕೆ ಹೆಚ್ಚಿನ ಭೂಮಿ ಬೇಕಾದಲ್ಲಿ ರಾಜ್ಯ ಭೂ-ಸ್ವಾಧೀನ ಮಾಡಿಕೊಡಬೇಕಾಗಿದೆ. ಭೂ-ಸ್ವಾಧೀನಕ್ಕೆ ತಗುಲುವ ವೆಚ್ಚವನ್ನು ಇಲಾಖೆಯೇ ಭರಿಸಲಿದೆ ಎಂದು ತಿಳಿಸಿದರು. ರೇಲ್ವೆ ಇಲಾಖೆಯ ಉಪ ಮುಖ್ಯ ಎಂಜಿನಿಯರ್ ಡೀಸಿಗಳಿಗೆ ಪತ್ರ ಬರೆದು ಈ 3 ರೈಲ್ವೆ ಗೇಟ್‌ಗಳನ್ನು-ಶಾಶ್ವತವಾಗಿ ಮುಚ್ಚಿ, ಸೇತುವೆ ಕಾಮಗಾರಿ ಪೂರ್ಣಗೊಳ್ಳುವವರೆಗೆ ಸಂಚಾರಕ್ಕೆ ಬದಲಿ ಮಾರ್ಗ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಲೋಕೋಪಯೋಗಿ ಇಲಾಖೆ ಸೂಪರಿಂಟೆಂಡ್ ಎಂಜಿನಿಯರ್‌ಗೆ ಅಲೈನ್ಸೆಂಟ್ ಡ್ರಾಯಿಂಗ್‍ಗೆ ಅನುಮೋದನೆ ನೀಡುವಂತೆ ಕೋರಿ ಪತ್ರ ಬರೆಯಲಾಗಿದೆ ಎಂದು ಹೇಳಿದರು. ಇತ್ತೀಚಿಗೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿ ಚಿತ್ರದುರ್ಗ ಲೋಕಸಭಾಕ್ಷೇತ್ರ ವ್ಯಾಪ್ತಿಯ ಪ್ರಸ್ಥಾವನೆಗಳಿಗೆ ಅನುಮೋದನೆ ನೀಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಇದರ ಫಲವಾಗಿ ಹಣಕಾಸು ಸ್ಥಾಯಿ ಸಮಿತಿ ಸಭೆಯಲ್ಲಿ ಈ ಪ್ರಸ್ತಾವನೆಗಳಿಗೆ ಕ್ಲಿಯರೆನ್ಸ್ ನೀಡಲಾಗಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿ ಕೆಲಸಕ್ಕೆ 562.53 ಕೋಟಿ ರು.ಗೆ ಕ್ಲಿಯರೆನ್ಸ್ ನೀಡಿದೆ. ಮುಂದಿನ ಒಂದು ವಾರದೊಳಗೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ 562.53 ಕೋಟಿ ರು. ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಿದ್ದಾರೆ ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಖಂಜಾಚಿ ಮಾಧುರಿ ಗೀರೀಶ್, ವಕ್ತಾರ ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ಛಲವಾದಿ ತಿಪ್ಪೇಸ್ವಾಮಿ, ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್, ಮುಖಂಡರಾದ ಕುಮಾರಸ್ವಾಮಿ, ಸದಸ್ಯೆ ಬಸಮ್ಮಇದ್ದರು.