ಸಾರಾಂಶ
* ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಸ್ಮಾರ್ಟ್ ಸಿಟಿ ಟ್ರಾಫಿಕ್ ಶೆಲ್ಟರ್ ಉದ್ಘಾಟಿಸಿದ ಎಸ್‌ಪಿ ಉಮಾ ಪ್ರಶಾಂತ್ ಹೇಳಿಕೆ
ಕನ್ನಡಪ್ರಭ ವಾರ್ತೆ ದಾವಣಗೆರೆಸ್ಮಾರ್ಟ್ ಸಿಟಿ ಯೋಜನೆಯಡಿ ಮಹಾನಗರದ 22 ಕಡೆ ಟ್ರಾಫಿಕ್ ಬೂತ್ ನಿರ್ಮಿಸಲಾಗುತ್ತಿದ್ದು, ಈಗಾಗಲೇ 10 ಕಡೆ ಆಗಿದ್ದು, ಉಳಿದ 12 ಕಡೆ ಶೀಘ್ರವೇ ಸಂಚಾರ ಚೌಕಿ (ಟ್ರಾಫಿಕ್ ಶೆಲ್ಟರ್)ಗಳ ನಿರ್ಮಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.
ನಗರದ ವೀರ ರಾಣಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಗುರುವಾರ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸ್ಮಾರ್ಟ್ ಸಿಟಿ ಯೋಜನೆ ಸಹಯೋಗದಲ್ಲಿ ನಿರ್ಮಿಸಿರುವ ನೂತನ ಪೊಲೀಸ್ ಟ್ರಾಫಿಕ್ ಬೂತ್ ಉದ್ಘಾಟಿಸಿದ ನಂತರ ಮಾತನಾಡಿ ಟ್ರಾಫಿಕ್ ಜಂಕ್ಷನ್ ಇರುವಲ್ಲಿ ಸಂಚಾರ ಪೊಲೀಸರು ಬಿಸಿಲು, ಮಳೆ, ಗಾಳಿ, ಚಳಿಯಿಂದ ರಕ್ಷಿಸಿಕೊಳ್ಳಲು, ಉತ್ತಮವಾಗಿ ಕಾರ್ಯ ನಿರ್ವಹಿಸಬೇಕೆಂಬ ಸದುದ್ದೇಶದಿಂದ ಟ್ರಾಫಿಕ್ ಬೂತ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.ಜಿಲ್ಲಾ ಕೇಂದ್ರದ ವಿವಿಧೆಡೆ ಕರ್ತವ್ಯ ನಿರ್ವಹಿಸುವ ಪೊಲೀಸ್ ಇಲಾಖೆಯ ಸಂಚಾರಿ ಪೊಲೀಸರಿಗೆ ಮತ್ತಷ್ಟು ಪರಿಣಾಮಕಾರಿ, ಉತ್ತಮವಾಗಿ ಕೆಲಸ ನಿರ್ವಹಿಸಲು ಅನುಕೂಲವಾಗುವಂತೆ 22 ಕಡೆ ಟ್ರಾಫಿಕ್ ಬೂತ್ ನಿರ್ಮಾಣಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಡಿ ಯೋಜನೆ ರೂಪಿಸಲಾಗಿತ್ತು. ಬಾಕಿ ಉಳಿದ 12 ಕಡೆ ಶೀಘ್ರವೇ ಟ್ರಾಫಿಕ್ ಬೂತ್‌ಗಳನ್ನು ಉದ್ಘಾಟಿಸಲಿದ್ದೇವೆ ಎಂದು ಹೇಳಿದರು.
₹3.5 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣ:ಸ್ಮಾರ್ಟ್ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ವೀರೇಂದ್ರಕುಮಾರ ಮಾತನಾಡಿ, ಐಸಿಟಿ ಯೋಜನೆಯಡಿ ಪೊಲೀಸ್ ಬೂತ್ ಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿ ಸಂಚಾರ ಚೌಕಿಗಳನ್ನು 3.5 ಲಕ್ಷ ರು.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ದಾವಣಗೆರೆ ಮಹಾನಗರ ದಿನದಿನಕ್ಕೂ ವೇಗವಾಗಿ ಬೆಳೆಯುತ್ತಿದ್ದು, ಅದಕ್ಕೆ ತಕ್ಕಂತೆ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ಅಳವಡಿಸಿ, ಸಂಚಾರದ ಒತ್ತಡಕ್ಕೆ ಅನುಗುಣವಾಗಿ ವಿವಿಧ ಕಾಮಗಾರಿ ಕೈಗೊಳ್ಳುತ್ತಿದ್ದೇವೆ ಎಂದರು.
ಜಿಲ್ಲಾ ಕೇಂದ್ರದ ಬಹುತೇಕ ಎಲ್ಲಾ ರಸ್ತೆಗಳಲ್ಲೂ ವಾಹನ ದಟ್ಟಣೆಯಿಂದ ಹೆಚ್ಚಾಗಿರುತ್ತದೆ. ಸಂಚಾರ ದಟ್ಟಣೆ ನಿಯಂತ್ರಿಸಲು, ಪರಿಣಾಮಕಾರಿಯಾಗಿ ಸಂಚಾರ ಪೊಲೀಸರು ಕಾರ್ಯ ನಿರ್ವಹಿಸಲು ಅನುಕೂಲವಾಗುವಂತೆ ಸಂಚಾರಿ ಚೌಕಿಗಳು ರೂಪುಗೊಂಡಿವೆ. ಶೀಘ್ರವೇ ಉಳಿದ 12 ಕಡೆಗಳಲ್ಲೂ ಶೆಲ್ಟರ್‌ಗಳನ್ನು ಆರಂಭಿಸಲಿದ್ದೇವೆ. ಇದರಿಂದ ಸಂಚಾರ ವ್ಯವಸ್ಥೆಗೆ, ಸಂಚಾರ ಪೊಲೀಸ್ ಸಿಬ್ಬಂದಿಗೂ ಸಹಕಾರಿಯಾಗಲಿದೆ ಎಂದು ಹೇಳಿದರು.ನಗರ ಡಿವೈಎಸ್ಪಿ ಮಲ್ಲೇಶಿ ದೊಡ್ಡಮನಿ, ಸಂಚಾರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಮಂಜುನಾಥ ನಲವಾಗಲು, ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆ ಐಟಿ ವಿಭಾಗದ ಮುಖ್ಯಸ್ಥೆ ಮಮತಾ, ವಿಶ್ವನಾಥ, ಅಧಿಕಾರಿ, ಸಿಬ್ಬಂದಿ ಇದ್ದರು. ಟ್ರಾಫಿಕ್ ಬೂತ್‌ಗಳ ನಿರ್ಮಾಣಕ್ಕೆ ರೂಪುರೇಷೆ ಸಿದ್ಧ
ಮಳೆ, ಚಳಿ, ಬೇಸಿಗೆ ಕಾಲ ಹೀಗೆ ವಿವಿಧ ಹವಾಮಾನ ಪರಿಸ್ಥಿತಿಯಲ್ಲಿ ಸಂಚಾರ ದಟ್ಟಣೆಯ ಒತ್ತಡವನ್ನು ಉತ್ತಮವಾಗಿ ಮೇಲ್ವಿಚಾರಣೆ ಮಾಡಲು ಸದ್ಯ ಪ್ರಮುಖ ಟ್ರಾಫಿಕ್ ಜಂಕ್ಷನ್‌ಗಳಲ್ಲಿ ಬೂತ್‌ಗಳ ಸ್ಥಾಪನೆ ಮಾಡಲಾಗುತ್ತಿದೆ. ಟ್ರಾಫಿಕ್ ಬೂತ್‌ಗಳ ನಿರ್ಮಾಣಕ್ಕೆ ಸಮಗ್ರ ರೂಪುರೇಷೆ ಸಿದ್ಧಪಡಿಸಲಾಗಿದ್ದು, ಸ್ಮಾರ್ಟ್ ಸಿಟಿ ಯೋಜನೆಯಿಂದ ಎಲ್ಲಾ ಅಗತ್ಯ ಸೌಲಭ್ಯಗಳ ಕಲ್ಪಿಸಲಾಗುತ್ತಿದೆ. ಆದಷ್ಟು ಬೇಗನೇ ಉಳಿದ ಕಡೆಗೂ ಟ್ರಾಫಿಕ್ ಶೆಲ್ಟರ್ ನಿರ್ಮಿಸಲಾಗುವುದು.ಉಮಾ ಪ್ರಶಾಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ