ನಿರಾಶ್ರಿತರ ನೆಮ್ಮದಿಯ ಬದುಕಿಗೆ ವಾತ್ಸಲ್ಯ ಮನೆ ನಿರ್ಮಾಣ: ಶೀನಪ್ಪ

| Published : Mar 02 2024, 01:47 AM IST

ನಿರಾಶ್ರಿತರ ನೆಮ್ಮದಿಯ ಬದುಕಿಗೆ ವಾತ್ಸಲ್ಯ ಮನೆ ನಿರ್ಮಾಣ: ಶೀನಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ವಾತ್ಸಲ್ಯ ಕಾರ್ಯಕ್ರಮದಡಿ ವಾತ್ಸಲ್ಯ ಮನೆ ನಿರ್ಮಿಸಿ ನೆಮ್ಮದಿ ಜೀವನ ನಡೆಸಲು ಅನುಕೂಲ ಕಲ್ಪಿಸಿದೆ ಎಂದು ಯೋಜನೆಯ ಬೆಂಗಳೂರು ಪ್ರಾದೇಶಿಕ ವಿಭಾಗದ ಎಂ. ಶೀನಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ನಿರಾಶ್ರಿತರು, ನಿರ್ಗತಿಕರು ನೆಮ್ಮದಿಯಿಂದ ಬದುಕಲು ಸೂರಿನ ಅವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ವಾತ್ಸಲ್ಯ ಕಾರ್ಯಕ್ರಮದಡಿ ವಾತ್ಸಲ್ಯ ಮನೆ ನಿರ್ಮಿಸಿ ನೆಮ್ಮದಿ ಜೀವನ ನಡೆಸಲು ಅನುಕೂಲ ಕಲ್ಪಿಸಿದೆ ಎಂದು ಯೋಜನೆಯ ಬೆಂಗಳೂರು ಪ್ರಾದೇಶಿಕ ವಿಭಾಗದ ಎಂ. ಶೀನಪ್ಪ ತಿಳಿಸಿದರು.

ತಾಲೂಕಿನ ಬಿದರೆಗುಡಿ ವಲಯದ ಗುರುಗದಹಳ್ಳಿ ಗ್ರಾಮದ ಫಲಾನುಭವಿ ನಿಂಗಮ್ಮ ಎಂಬುವವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದಡಿ ಮನೆ ರಚನೆ ಮಾಡಿ ಬೀಗದ ಕೀ ಹಸ್ತಾಂತರಿಸಿ ಮಾತನಾಡಿದ ಅವರು, ಧರ್ಮಾಧಿಕಾರಿ ಅ ವಾತ್ಸಲ್ಯ ಕಾರ್ಯಕ್ರಮದಲ್ಲಿ ಅನೇಕ ನಿರ್ಗತಿಕ, ನಿರಾಶ್ರಿತ ಕುಟುಂಬಗಳಿಗೆ ತಿಂಗಳ ಮಾಶಾಸನ ಹಾಗೂ ಮನೆ ರಚನೆ ಮಾಡಿ ನೆಮ್ಮದಿಯ ಜೀವನವನ್ನು ಕಟ್ಟಿಕೊಡುತ್ತಿದ್ದು ರಾಜ್ಯದಲ್ಲಿ ಅನೇಕರು ಈ ಸೌಲಭ್ಯವನ್ನು ಪಡೆದುಕೊಂಡಿದ್ದು ಅರ್ಹ ಫಲಾನುಭವಿಗಳು ಇದ್ದರೆ ಸಮೀಕ್ಷೆ ಮಾಡಿ ಅವರಿಗೂ ಈ ಸೌಲಭ್ಯ ಕಲ್ಪಿಸಿಕೊಡಲಾಗುವುದು. ಮೊದಲ ಹಂತದಲ್ಲಿ ವಾತ್ಸಲ್ಯ ಕಿಟ್, ಪಾತ್ರೆ ಬಟ್ಟೆ, ಹೊದಿಕೆ, ಚಾಪೆ, ವಾತ್ಸಲ್ಯ ಮಿಕ್ಸ್ ನೀಡಲಾಗುವುದು. ನಂತರ ಎರಡನೇ ಹಂತದಲ್ಲಿ ಮನೆ ರಚನೆ, ಮನೆ ರಿಪೆರಿ, ಶೌಚಾಲಯ ರಚನೆ ಮಾಡಲಾಗುವುದು. ಈಗಾಗಲೇ ತಾಲೂಕಿನಲ್ಲಿ ಮೂರು ವಾತ್ಸಲ್ಯ ಮನೆಗಳನ್ನು ನಿರ್ಮಿಸಿಕೊಡಲಾಗಿದೆ ಎಂದರು.

ಯೋಜನೆಯ ಜಿಲ್ಲಾ ನಿರ್ದೇಶಕಿ ದಯಾಶೀಲಾ ಮಾತನಾಡಿ, ಎಲ್ಲಾ ವರ್ಗದ ಜನರು ಸಮಾಜದಲ್ಲಿ ಉತ್ತಮ ಹಾಗೂ ನೆಮ್ಮದಿಯ ಜೀವನ ನಡೆಸುವ ಸದುದ್ದೇಶದಿಂದ ಪೂಜ್ಯರು ಭಕ್ತರಿಂದ ಬಂದ ಹಣವನ್ನು ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಸದಾಶಯದೊಂದಿಗೆ ಉತ್ತಮ ಯೋಜನೆಗಳನ್ನು ಜಾರಿಗೆ ತಂದು ಶ್ರೀಸಾಮಾನ್ಯರ ಬದುಕನ್ನು ಹಸನಗೊಳಿಸುತ್ತಿದ್ದಾರೆ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಆರ್ಥಿಕ, ಆರೋಗ್ಯ ಕ್ಷೇತ್ರಗಳ ಅಭಿವೃದ್ದಿಗೆ ಹೆಚ್ಚು ಒತ್ತು ಕೊಡುತ್ತಾ ಬಂದಿದ್ದಾರೆ. ತಾಲೂಕಿನಲ್ಲಿ ವಾತ್ಸಲ್ಯ ಮನೆ ಯೋಜನೆಯಡಿ ಈಗಾಗಲೇ ಮೂರು ಮನೆಗಳನ್ನು ನಿರಾಶ್ರಿತರಿಗೆ ರಚನೆ ಮಾಡಿಕೊಟ್ಟಿದ್ದು ಫಲಾನುಭವಿಗಳಿಗೆ ಶ್ರೀಕ್ಷೇತ್ರದಿಂದ ಒಲಿದು ಬಂದ ಭಾಗ್ಯವಾಗಿದ್ದು ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಸುದರ್ಶನ್ ಮಾತನಾಡಿ, ಫಲಾನುಭವಿ ನಿಂಗಮ್ಮನವರಿಗೆ ಸರ್ಕಾರದ ನಿಯಮದ ಪ್ರಕಾರ ಮನೆ ಕಟ್ಟಿಕೊಳ್ಳಲು ಆಗದಿರುವ ಸಂದರ್ಭದಲ್ಲಿ ಧರ್ಮಸ್ಥಳದ ಪೂಜ್ಯರು ಹಾಗೂ ಮಾತೃಶ್ರೀರವರು ವಾತ್ಸಲ್ಯ ಯೋಜನೆಯಡಿ ಮನೆ ರಚನೆಯನ್ನು ಮಾಡಿಕೊಟ್ಟಿರುವುದು ಶ್ಲಾಘನೀಯ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷ ಶಶಿಧರ್‌, ತಾಲೂಕು ಯೋಜನಾಧಿಕಾರಿ ಉದಯ್, ಸಮನ್ವಯಾಧಿಕಾರಿ ಎಂ.ಡಿ. ಪದ್ಮಾವತಿ, ಮೇಲ್ವಿಚಾರಕಿ ಅನಿತಾ, ವಿಚಕ್ಷಣಾಧಿಕಾರಿ ವಿನೋದ್, ಮೇಸ್ತ್ರಿ ನಾಗರಾಜ್, ಸೇವಾ ಪ್ರತಿನಿಧಿಗಳಾದ ಜ್ಯೋತಿ, ಕಮಲ, ವಿಎಲ್‌ಇಗಳಾದ ಭಾರತಿ, ನಂದೀಶ್, ಶಮಂತ್, ಗ್ರಾಮಸ್ಥರಾದ ಉಮಾಶಂಕರ್‌, ಭುವನೇಶ್, ಕುಮಾರಸ್ವಾಮಿ ಸೇರಿದಂತೆ ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.