ಅಂತೂ ಇಂತೂ ತುಂಗಭದ್ರಾ ಜಲಾಶಯದ 19ನೇ ಗೇಟ್‌ಗೆ ಅಳವಡಿಸಿರುವ ಸ್ಟಾಪ್‌ ಲಾಗ್‌ ತೆರವುಗೊಳಿಸಿ ಕ್ರಸ್ಟ್‌ ಗೇಟ್‌ ನಿರ್ಮಾಣ ಮಾಡಲು ಭರದ ಸಿದ್ಧತೆ ನಡೆದಿದೆ.

 ಹೊಸಪೇಟೆ : ಅಂತೂ ಇಂತೂ ತುಂಗಭದ್ರಾ ಜಲಾಶಯದ 19ನೇ ಗೇಟ್‌ಗೆ ಅಳವಡಿಸಿರುವ ಸ್ಟಾಪ್‌ ಲಾಗ್‌ ತೆರವುಗೊಳಿಸಿ ಕ್ರಸ್ಟ್‌ ಗೇಟ್‌ ನಿರ್ಮಾಣ ಮಾಡಲು ಭರದ ಸಿದ್ಧತೆ ನಡೆದಿದೆ. ಈಗಾಗಲೇ ಗದಗ ಬಳಿ, ಟಿಬಿ ಡ್ಯಾಂನ 19ನೇ ಗೇಟ್‌ಗೆ ಕ್ರಸ್ಟ್‌ ಗೇಟ್‌ ನಿರ್ಮಾಣ ಮಾಡುವ ಕಾರ್ಯ ಭರದಿಂದ ಸಾಗಿದೆ.

ತುಂಗಭದ್ರಾ ಜಲಾಶಯದ 19ನೇ ಗೇಟ್‌ಗೆ ಕ್ರಸ್ಟ್‌ ಗೇಟ್‌ ನಿರ್ಮಾಣ ಮಾಡುವ ಟೆಂಡರ್‌ಅನ್ನು ಗುಜರಾತ ಮೂಲದ ಹಾರ್ಡ್‌ ವೇರ್‌ ಟೂಲ್ಸ್‌ ಆ್ಯಂಡ್‌ ಮಷಿನರಿ ಪ್ರಾಜೆಕ್ಟ್‌ ಕಂಪನಿ ಪಡೆದಿದೆ. ಈ ಕಂಪನಿ ವೈಜಾಗ್‌ ಸ್ಟೀಲ್ಸ್‌ನಿಂದ ಮೆಟಿರಿಯಲ್‌ ತರಿಸಿಕೊಂಡು ಗೇಟ್‌ ನಿರ್ಮಾಣ ಕಾರ್ಯದಲ್ಲಿ ತೊಡಗಿದೆ. ಈ ಕಂಪನಿಗೆ ಉಳಿದ 32 ಗೇಟ್‌ಗಳನ್ನು ತಯಾರಿಸುವ ಟೆಂಡರ್‌ ಕೂಡ ಆಗಿದೆ.

19ನೇ ಗೇಟ್‌ನ ಕಾಮಗಾರಿ ಮಾತ್ರ ಗದಗದಲ್ಲಿ ನಡೆದಿದ್ದು, ಉಳಿದ 32 ಗೇಟ್‌ಗಳ ಕಾಮಗಾರಿ ತುಂಗಭದ್ರಾ ಜಲಾಶಯದ ಸಮೀಪ ನಡೆಸಲು ವ್ಯವಸ್ಥೆ ಮಾಡಲು ತುಂಗಭದ್ರಾ ಮಂಡಳಿ ಅಧಿಕಾರಿಗಳು ಆಲೋಚನೆ ಮಾಡುತ್ತಿದ್ದಾರೆ.

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ ಗೇಟ್‌ 2024ರ ಆಗಸ್ಟ್‌ 10ರಂದು ಕಳಚಿ ಬಿದ್ದಿತ್ತು. 40 ಟಿಎಂಸಿಯಷ್ಟು ನೀರು ನದಿ ಪಾಲಾಗಿತ್ತು. ಆ ಬಳಿಕ ಪರಿಣತ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ಈ ಗೇಟ್‌ಗೆ ಸ್ಟಾಪ್‌ ಲಾಗ್ ಅಳವಡಿಕೆ ಮಾಡಲಾಗಿತ್ತು. ಈಗ 19ನೇ ಗೇಟ್‌ನ ನಿರ್ಮಾಣ ಕಾಮಗಾರಿ ಸಾಗಿದ್ದು, ಜೂನ್‌ ಅಂತ್ಯದೊಳಗೆ ಈ ಗೇಟ್‌ಅನ್ನು ಅಳವಡಿಕೆ ಮಾಡಲಾಗುತ್ತದೆ ಎಂದು ತುಂಗಭದ್ರಾ ಮಂಡಳಿ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.

ಗುಜರಾತನ ಹಾರ್ಡ್‌ ವೇರ್‌ ಟೂಲ್ಸ್‌ ಆ್ಯಂಡ್‌ ಮಷಿನರಿ ಪ್ರಾಜೆಕ್ಟ್‌ ಕಂಪನಿ 19ನೇ ಗೇಟ್‌ ನಿರ್ಮಾಣ ಕಾಮಗಾರಿಯನ್ನು ₹1.98 ಕೋಟಿ ಮೊತ್ತದಲ್ಲಿ ನಿರ್ಮಾಣ ಮಾಡಲು ಟೆಂಡರ್‌ನಲ್ಲಿ ಪಡೆದಿದೆ. ಈಗ ಗೇಟ್‌ ತಯಾರು ಮಾಡುವ ಕಾಮಗಾರಿ ನಡೆದಿದೆ.

ಭೇಟಿ, ಪರಿಶೀಲನೆ:

ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಓಆರ್‌ಕೆ ರೆಡ್ಡಿ, ಅಧೀಕ್ಷಕ ಎಂಜಿನಿಯರ್‌ ನಾರಾಯಣ ನಾಯ್ಕ, ಅಧಿಕಾರಿಗಳಾದ ನಾಗರಾಜ, ಚಂದ್ರಶೇಖರ, ಜ್ಞಾನೇಶ್ವರ, ರಾಘವೇಂದ್ರ ಗದಗ ನಗರಕ್ಕೆ ಬುಧವಾರ ಭೇಟಿ ನೀಡಿ ಗೇಟ್‌ನ ನಿರ್ಮಾಣ ಕಾಮಗಾರಿ ಪರಿಶೀಲಿಸಿದರು.

ಈ ವೇಳೆ ಗೇಟ್‌ಅನ್ನು ಕಾಮಗಾರಿ ವಿನ್ಯಾಸದ ಮಾದರಿಯಲ್ಲಿ ನಿರ್ಮಾಣ ಮಾಡಬೇಕು. ಜೊತೆಗೆ ಟಿಬಿಡ್ಯಾಂನ ಗೇಟ್‌ಗಳ ಡಿಸೈನ್‌ ಮಾದರಿಯಲ್ಲಿ ತಯಾರಿಸಬೇಕು. ಈ ಗೇಟ್‌ಅನ್ನು ಆದಷ್ಟು ಬೇಗ ಅಳವಡಿಸಬೇಕು ಎಂದೂ ತುಂಗಭದ್ರಾ ಮಂಡಳಿ ಅಧಿಕಾರಿಗಳು ಹಾರ್ಡ್‌ ವೇರ್‌ ಟೂಲ್ಸ್‌ ಆ್ಯಂಡ್‌ ಮಷಿನರಿ ಪ್ರಾಜೆಕ್ಟ್‌ ಕಂಪನಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.