ಮರಳು ಗಣಿಗಾರಿಕೆಗೆ ಪರವಾನಿಗೆ ಇಲ್ಲ, ಅಧಿಕಾರಿಗಳ ದಾಳಿಗೆ ವಾಟ್ಸ್‌ಆ್ಯಪ್ ಗ್ರೂಪ್ ಅಡ್ಡಿವಸಂತಕುಮಾರ್ ಕತಗಾಲಕನ್ನಡಪ್ರಭ ವಾರ್ತೆ ಕಾರವಾರಒಂದೆಡೆ ಮರಳು ಗಣಿಗಾರಿಕೆಗೆ ಪರವಾನಿಗೆ ಇಲ್ಲದೆ ಸರ್ಕಾರದ ಬೊಕ್ಕಸಕ್ಕೆ ನಷ್ಟ, ಇನ್ನೊಂದೆಡೆ ಅಧಿಕಾರಿಗಳನ್ನು ಕಟ್ಟಿಹಾಕಿರುವ ಅಕ್ರಮ ಗಣಿಗಾರಿಕೆ ನಿರತರ ವಾಟ್ಸ್‌ಆ್ಯಪ್ ಗ್ರೂಪ್‌ನಿಂದಾಗಿ ಅಕ್ರಮ ಗಣಿಗಾರಿಕೆ ಚಟುವಟಿಕೆಗಳ ಮೇಲೆ ದಾಳಿ ನಡೆಸಲೂ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಅಭಿವೃದ್ಧಿ ಕಾಮಗಾರಿಗಳಿಗೆ ಮರಳು ಸಿಗದಂತಾಗಿದೆ.ಮರಳುಗಾರಿಕೆಗೆ ಈಗ ಪರವಾನಿಗೆ ಇಲ್ಲ. ಸಿಆರ್‌ಝಡ್ ಪರವಾನಿಗೆಗಾಗಿ ಕಾಯಲಾಗುತ್ತಿದೆ. ಮಳೆಗಾಲ ಎದುರಿಗಿರುವುದರಿಂದ ಪರವಾನಿಗೆ ಸದ್ಯಕ್ಕಂತೂ ದೂರದ ಮಾತಾಗಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಮರಳು ಸಿಗದೆ ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ಸಿಕ್ಕಿದರೂ ಎರಡುಪಟ್ಟು ಹಣ ನೀಡಿ ಮರಳು ಖರೀದಿಸಬೇಕಾದ ಪರಿಸ್ಥಿತಿ ಉಂಟಾಗಿದೆ.ಮರಳುಗಾರಿಕೆಗೆ ಪರವಾನಿಗೆ ಇದ್ದಲ್ಲಿ ದರವೂ ನಿಯಂತ್ರಣದಲ್ಲಿ ಇರುತ್ತಿತ್ತು. ಸರ್ಕಾರದ ಬೊಕ್ಕಸಕ್ಕೂ ತೆರಿಗೆಯ ರೂಪದಲ್ಲಿ ಹಣ ಹರಿದುಬರುತ್ತಿತ್ತು. ಈಗ ಅಕ್ರಮ ಮರಳುಗಾರಿಕೆ ನಡೆಸುವವರು ಹೇಳಿದಷ್ಟು ದರ ಕೊಟ್ಟು ಮರಳು ಖರೀದಿಸಬೇಕಾಗಿದೆ. ಸರ್ಕಾರಕ್ಕೆ ತೆರಿಗೆಯೂ ತಪ್ಪಿದಂತಾಗಿದೆ.ಅಕ್ರಮ ಮರಳುಗಾರಿಕೆ ಮೇಲೆ ದಾಳಿ ನಡೆಸಬೇಕೆಂದು ಅಧಿಕಾರಿಗಳು ಹೊರಟರೆ ಅವರ ಚಲನವಲನದ ಮೇಲೆ ಅಕ್ರಮ ಗಣಿಗಾರಿಕೆ ನಡೆಸುವವರ ವಾಟ್ಸೆಪ್ ಗ್ರೂಪ್ ನಿಗಾ ಇಡುತ್ತಿದೆ. ಅವರು ಕಚೇರಿಯಿಂದ ಹೊರಬಂದರು. ವಾಹನ ಏರಿದ್ದಾರೆ. ಯಾವ ದಿಕ್ಕಿನಲ್ಲಿ ಹೊರಟಿದ್ದಾರೆ. ಎಲ್ಲಿಗೆ ಹೋಗುತ್ತಿದ್ದಾರೆ ಎಂಬ ಮಾಹಿತಿ ವಾಟ್ಸೆಪ್ ಗ್ರೂಪ್ ಮೂಲಕ ಎಲ್ಲರಿಗೂ ದೊರೆತಿರುತ್ತದೆ. ಯಾವುದೆ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಲು ಹೋದ ಅಧಿಕಾರಿಗಳಿಗೆ ಅಲ್ಲೇನೂ ಸಿಗದೆ ಬರಿಗೈಯಲ್ಲಿ ವಾಪಸ್ ಬರಬೇಕಾದ ಪರಿಸ್ಥಿತಿ ಉಂಟಾಗಿದೆ. ಒಂದು ವರ್ಷದ ಅವಧಿಯಲ್ಲಿ (ಮಾರ್ಚ್ 2025ರಿಂದ ಮಾ.2026ರ ತನಕ) ಒಟ್ಟೂ 280 ಪ್ರಕರಣಗಳಲ್ಲಿ ₹74,857,05 ದಂಡವನ್ನು ಗಣಿ ಹಾಗೂ ಭೂವಿಜ್ಞಾನ ಇಲಾಖೆ ಮತ್ತು ಇತರ ಇಲಾಖೆ ಸೇರಿ ವಿಧಿಸಲಾಗಿದೆ. ಇದರಲ್ಲಿ ಸಾಧಾ ಮರಳು, ಕಟ್ಟಡ ಕಲ್ಲು, ಚಿರೆಕಲ್ಲು, ಎಂ.ಸ್ಯಾಂಡ್, ಸಿಲಿಕಾ ಮರಳುಗಳ ದಾಸ್ತಾನು ಮತ್ತು ಸಾಗಾಟ ಸೇರಿವೆ.ಮರಳು ಗಣಿಗಾರಿಕೆಗೆ ಪರವಾನಿಗೆ ಈಗ ಸಿಆರ್ ಝಡ್ ಹಂತದಲ್ಲಿದೆ. ಅಕ್ರಮ ಗಣಿಗಾರಿಕೆ ನಡೆಸುವವರು ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ನಮ್ಮ ಚಲನವಲನದ ಮೇಲೆ ನಿಗಾ ಇಟ್ಟಿರುವುದೂ ದಾಳಿ ನಡೆಸಲು ಹಿನ್ನಡೆ ಉಂಟಾಗಿದೆ ಎನ್ನುತ್ತಾರೆ ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ ಆಶಾ ಎಂ.ಎಸ್.