ಹರಪನಹಳ್ಳಿ ತಾಲೂಕಿನಲ್ಲಿ ನಿವೇಶನ ಸಹಿತ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿ ಇಲ್ಲಿಯ ಕಟ್ಟಡ ಕಾರ್ಮಿಕರು ಎಐಸಿಸಿಟಿಯು ಸಂಘಟನೆಯ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.

ಹರಪನಹಳ್ಳಿ: ತಾಲೂಕಿನಲ್ಲಿ ನಿವೇಶನ ಸಹಿತ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿ ಇಲ್ಲಿಯ ಕಟ್ಟಡ ಕಾರ್ಮಿಕರು ಎಐಸಿಸಿಟಿಯು ಸಂಘಟನೆಯ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.

ಹಿಂದುಳಿದ ಹರಪನಹಳ್ಳಿ ತಾಲೂಕಿನಲ್ಲಿ 28ರಿಂದ 30 ಸಾವಿರ ಕಾರ್ಮಿಕರಿದ್ದು ಅವರಿಗೆ ವಾಸ ಮಾಡಲು ಸೂಕ್ತ ರೀತಿಯಲ್ಲಿ ಒಂದು ಸೂರು ಇಲ್ಲ. ಸ್ವಾತಂತ್ರ ಬಂದು ಹಲವು ದಶಕಗಳೇ ಕಳೆದರೂ ಈಗಲೂ ಸೂರುಗಳಿಲ್ಲದೆ ವಾಸಿಸುತ್ತಿದ್ದೇವೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಸರ್ಕಾರದ ಜಮೀನು ಗುರುತಿಸಿ ಹರಪನಹಳ್ಳಿ ಪಟ್ಟಣದಲ್ಲಿ ಕಾರ್ಮಿಕರ ಕಾಲೋನಿ ನಿರ್ಮಿಸಿ ಕಾರ್ಮಿಕರಿಗೆ ನಿವೇಶನ ಸಹಿತ ವಸತಿ ಕಲ್ಪಿಸಿಕೊಡಬೇಕು ಹಾಗೂ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಹಳ್ಳಿಗಳಲ್ಲಿಯೂ ಮನೆಗಳನ್ನು ನಿರ್ಮಿಸಿ ಕೊಡಬೇಕು. ಹರಪನಹಳ್ಳಿ ಪಟ್ಟಣದಲ್ಲಿ ಮತ್ತು ತಾಲೂಕಿನಾದ್ಯಂತ ಅಭಿವೃದ್ಧಿ ವಿಷಯದಲ್ಲಿ ಸಂಪೂರ್ಣವಾಗಿ ಶಾಸಕರು ವಿಫಲರಾಗಿದ್ದು, ಸಾರ್ವಜನಿಕರ ಗೋಳು ಕೇಳಲು ಯಾರೂ ಇಲ್ಲದಂತಾಗಿದೆ. ಕಳೆದ ಒಂದು ವರ್ಷದಿಂದಲೂ ಅಭಿವೃದ್ಧಿ ನೆಪದಲ್ಲಿ ಕಾಮಗಾರಿಗಳು ಅಂಬೇಡ್ಕರ್ (ಐ.ಬಿ) ಸರ್ಕಲ್, ಕಂಚಿಕೇರೆ-ಬೆಂಡಿಗೇರೆ ರಸ್ತೆ, ಹಾರಕನಾಳು ತಾಂಡಾ ಕುಡಿಯುವ ನೀರು, ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ದೂರಿದ್ದಾರೆ.

ತಾಲೂಕಿನಾದ್ಯಂತ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಮಾಡಲು ಹಲವು ಬಾರಿ ಹೋರಾಟ ಮಾಡಿದರೂ ಇನ್ನೂ ಬಸ್‌ಗಳು ಹಳ್ಳಿಗಳತ್ತ ಹೋಗುತ್ತಿಲ್ಲ ಎಂದು ದೂರಿದರು. ಪಿಡಿಒಗಳಿಗೆ ಎರಡೇರಡು ಗ್ರಾಮ ಪಂಚಾಯಿತಿಗಳ ಜವಾಬ್ದಾರಿ ನೀಡಿದ್ದರಿಂದ ಕೆಲಸ ನಿಬಾಯಿಸಲು ಆಗುತ್ತಿಲ್ಲ. ಗ್ರಾಮ ಲೆಕ್ಕಾಧಿಕಾರಿಗಳ ಪರಿಸ್ಥಿತಿಯೂ ಇದೇ ರೀತಿ ಇದೆ ಎಂದು ತಿಳಿಸಿದ್ದಾರೆ.

ತಾಲೂಕಿನಾದ್ಯಂತ ಹಳ್ಳಿ ಮತ್ತು ಪಟ್ಟಣದಲ್ಲಿ ಎಗ್ಗಿಲ್ಲದೆ ಅಕ್ರಮ ಮದ್ಯ ಮಾರಾಟವಾಗುತ್ತಿದ್ದು, ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ತುಂಬಾ ಅನುಮಾನಕ್ಕೆಡೆ ಮಾಡಿ ಕೊಡುತ್ತಿದೆ. ಕೂಡಲೇ ಅಬಕಾರಿ ಇಲಾಖೆ ಅಧಿಕಾರಿಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ ಕಾನೂನು ರೀತಿ ಕ್ರಮ ಜರುಗಿಸಬೇ ಎಂಬಿತ್ಯಾದಿ ಬೇಡಿಕೆಗಳ ಮನವಿ ಪತ್ರವನ್ನು ಎಸಿ ಸುರೇಶ ಕುಮಾರ ಅವರಿಗೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಟಿ. ಸುರೇಶಕುಮಾರ ಹಾಗೂ ನಗರಸಭೆ ಪೌರಾಯುಕ್ತೆ ರೇಣುಕಾ ಎಸ್. ದೇಸಾಯಿ ಉಪಸ್ಥಿತರಿದ್ದು ಕಾರ್ಮಿಕರ ಮನವಿ ಪತ್ರ ಸ್ವೀಕರಿಸಿದರು. ಎಐಸಿಟಿಯು ಜಿಲ್ಲಾಧ್ಯಕ್ಷ ಸಂದೇರ ಪರಶುರಾಮ, ಕಾರ್ಯದರ್ಶಿ ಸಂತೋಷ ಗುಳೇದಹಟ್ಟಿ, ಹುಲ್ಲಿಕಟ್ಟಿ ಮೈಲಪ್ಪ, ಎಸ್. ರಾಜು, ಮಹಮದ್‌ ರಫೀಕ್‌, ಬಾಬು ಬಾಣಗೇರಿ, ಅಸ್ಲಂ, ಟೈಲ್ಸ್‌ ದಾದು, ನಸೀಮಾ ಬಾನು, ಆಫ್ರೀನ್, ಮಕರಬ್ಬಿ ದಾದು, ಕಲೀಂ, ಅನ್ವರ್ ಭಾಷಾ, ರೇಣುಕಮ್ಮ,, ಮರಿಯಮ್ಮ ಬಾಗಳಿ, ಚಿರಸ್ತಹಳ್ಳಿ ರೇಣುಕಮ್ಮ, ನಾರಾಯಣಪುರ ಮಂಗಳಕ್ಕ, ಇಬ್ರಾಹಿಂ ಸಾಹೇಬ್, ಐಸಾ ವಿದ್ಯಾರ್ಥಿ ಮುಖಂಡ ಮೋಹನಕುಮಾರ, ಭರತ್, ಮಿಥುನ್, ಬಿ.ಎಸ್. ಪ್ರಕಾಶ, ಮ್ಯಾಸಗೇರಿ ಕುಮಾರ, ಹ್ಯಾರಡ ಫಕ್ಕೀರಪ್ಪ, ಗೋಣೆಪ್ಪ, ಖಾಸೀಂ, ಸಮೀರ ಇತರರು ಪಾಲ್ಗೊಂಡಿದ್ದರು.