ಸಾರಾಂಶ
ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳಿಗೆ ನ್ಯಾ.ಕೆ.ಎಸ್.ರೊಟ್ಟೇರ ಅವರು ಪ್ರಮಾಣ ಪತ್ರ ವಿತರಣೆ ಮಾಡಿದರು.
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಹಿರಿಯ ಮತ್ತು ಕಿರಿಯ ವಕೀಲರ ನಡುವೆ ಸಮನ್ವಯ ಸಾಧಿಸಿ ಹೊಸ ಹೊಸ ರಚನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಹುಕ್ಕೇರಿ ವಕೀಲರ ಸಂಘವು ಅತ್ಯುತ್ತಮ ಸಂಘ ಎನ್ನುವ ಹೆಮ್ಮೆಗೆ ಪಾತ್ರವಾಗಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಕೆ.ಎಸ್.ರೊಟ್ಟೇರ ಅಭಿಪ್ರಾಯಪಟ್ಟರು.ಇಲ್ಲಿನ ವಕೀಲರ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ 2023-25ರ ಅವಧಿಗೆ ಆಯ್ಕೆಯಾದ ಹುಕ್ಕೇರಿ ನ್ಯಾಯವಾದಿಗಳ ಸಂಘದ ನೂತನ ಪದಾಧಿಕಾರಿಗಳ ಪ್ರಮಾಣ ಪತ್ರ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ವಕೀಲರು ತಮ್ಮ ತಮ್ಮ ನಡುವೆ ಇರುವ ಚಿಕ್ಕ-ಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಈ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳು ವಿಭಿನ್ನ ಮತ್ತು ವಿಶಿಷ್ಟ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದರು.
ಸಂಘದ ನೂತನ ಅಧ್ಯಕ್ಷ ಅನೀಸ್ ವಂಟಮೂರಿ ಮಾತನಾಡಿ, ಹೊಸದಾಗಿ ಆಯ್ಕೆಯಾದ ಪದಾಧಿಕಾರಿಗಳ ಜವಾಬ್ದಾರಿ ಹೆಚ್ಚಿದೆ. ಈ ಹಿಂದಿನ ಕಹಿ ಘಟನೆಗಳನ್ನು ಮರೆತು ಸೌಹಾರ್ದ ವಾತಾವರಣ ನಿರ್ಮಿಸುವತ್ತ ಗಮನಹರಿಸಿ ಸಂಘವನ್ನು ಸದೃಢಗೊಳಿಸಲಾಗುವುದು ಎಂದರು.ಚುನಾವಣಾಧಿಕಾರಿ ಎ.ಎಸ್.ಹುಲ್ಲೋಳಿ, ಸಹಾಯಕ ಚುನಾವಣಾಧಿಕಾರಿ ಪ್ರಕಾಶ ಪಾಟೀಲ ಅವರು ನೂತನ ಉಪಾಧ್ಯಕ್ಷ ಬಿ.ಎಂ.ಜಿನರಾಳಿ, ಕಾರ್ಯದರ್ಶಿ ಎಸ್.ಜಿ.ನದಾಫ, ಸಹಕಾರ್ಯದರ್ಶಿ ವಿಠ್ಠಲ ಗಸ್ತಿ, ಖಜಾಂಚಿ ಅಂಬರೀಶ ಬಾಗೇವಾಡಿ, ಮಹಿಳಾ ಪ್ರತಿನಿಧಿ ಅನೀತಾ ಕುಲಕರ್ಣಿ ಅವರಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು.
ದಿವಾಣಿ ನ್ಯಾಯಾಧೀಶ ಕೆ.ಅಂಬಣ್ಣ, ಅಪರ ಸರ್ಕಾರಿ ನ್ಯಾಯವಾದಿ ಅನಿಲ ಕರೋಶಿ, ನಿಕಟಪೂರ್ವ ಅಧ್ಯಕ್ಷ ರಾಜೀವ ಚೌಗಲಾ, ನ್ಯಾಯವಾದಿಗಳಾದ ಕೆ.ಬಿ.ಕುರಬೇಟ, ಕೆ.ಎಲ್.ಜಿನರಾಳಿ, ಡಿ.ಕೆ.ಅವರಗೋಳ, ಬಿ.ಆರ್.ಚಂದರಗಿ, ಎಸ್.ಆರ್.ಶೆಟ್ಟಿ, ಸಿ.ಎಂ.ಸಂಸುದ್ದಿ, ಬಿ.ಕೆ.ಮಗೆನ್ನವರ, ಉಮೇಶ ಪಾಟೀಲ, ಭೀಮಸೇನ ಬಾಗಿ, ಕೆ.ಪಿ.ಶಿರಗಾಂವಕರ, ಐ.ಕೆ.ಹೂಲಿಕಟ್ಟಿ, ಎಸ್.ಎಸ್.ನಾಗನೂರಿ, ಬಿ.ವಿ.ಹುಂಡೇಕರ, ಎಸ್.ಕೆ.ಹಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.ಇದೇ ವೇಳೆ ಶತಮಾನದ ಸಂತ ದಿ.ಸಿದ್ದೇಶ್ವರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರಥಮ ಪುಣ್ಯಸ್ಮರಣೆ ಆಚರಿಸಲಾಯಿತು.