ಸಾರಾಂಶ
ಉಡುಪಿ : ರಾಜ್ಯದ 3 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಸೋಲಿನ ಬಗ್ಗೆ ಮಂಗಳವಾರ (ನ.26) ಬೆಂಗಳೂರಿನಲ್ಲಿ ಅವಲೋಕನ ಸಭೆ ನಡೆಯಲಿದೆ. ನಾವು ಶಿಗ್ಗಾವಿ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿದ್ದೆವು. ಈ ವಿಚಾರದಲ್ಲಿ ಹಿನ್ನಡೆ ಆಗಿದೆ, ಇಲ್ಲ ಎನ್ನುವುದಿಲ್ಲ. ಯಾಕೆ ಹೇಗೆ ಹಿನ್ನಡೆ ಆಯ್ತು? ಎಂಬ ಅವಲೋಕನ ಮಾಡುತ್ತೇವೆ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಹೇಳಿದರು.
ಅವರು ಸೋಮವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆಯಾ ವಿಧಾನಸಭಾ ಕ್ಷೇತ್ರ ಹಾಗೂ ರಾಜ್ಯ ಮಟ್ಟದಲ್ಲಿ ಅವಲೋಕನ ನಡೆಯಲಿದೆ. ಸಾಧಾರಣವಾಗಿ ರಾಜ್ಯ ಆಳುವ ಪಕ್ಷಕ್ಕೆ ಉಪಚುನಾವಣೆ ಅನುಕೂಲವಾಗುವುದು ಸಹಜ. ಕಾಂಗ್ರೆಸ್ 3 ಸ್ಥಾನ ಗೆದ್ದ ಮಾತ್ರಕ್ಕೆ ರಾಜ್ಯದ ಜನ ಅವರ ಭ್ರಷ್ಟಾಚಾರ ಒಪ್ಪಿದ್ದಾರೆ ಎಂದು ಅರ್ಥವಲ್ಲ. ಸಿದ್ದರಾಮಯ್ಯನ ಹಗರಣವನ್ನು ರಾಜ್ಯದ ಜನ ಒಪ್ಪಿದ್ದಾರೆ ಎಂದು ಅರ್ಥವಲ್ಲ. ತಮ್ಮ ಹಗರಣಗಳಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ಸಿಎಂ ಭಾವಿಸುವುದು ಬೇಡ, ಹಗರಣಗಳಿಗೆ ಜನ ಎನ್ಓಸಿ ಕೊಟ್ಟಿಲ್ಲ, ಈ ಎಲ್ಲ ವಿಚಾರ ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇವೆ ಎಂದರು.
ನಮ್ಮೊಳಗಿನ ಭಿನ್ನಾಭಿಪ್ರಾಯ ಸರಿಯಾಗುತ್ತೆ: ಬಿಜೆಪಿ ಶಾಸಕ ಬಸವರಾಜ್ ಗೌಡ ಯತ್ನಾಳ್ ಅವರ ಅಸಮಾಧಾನದ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮಂಗಳವಾರದ ಅವಲೋಕನ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗುತ್ತದೆ. ಡಿಸೆಂಬರ್ ಮೊದಲ ವಾರದಲ್ಲಿ ಕೇಂದ್ರ ನಾಯಕರು ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ಖಂಡಿತವಾಗಿ ನಮ್ಮೊಳಗಿನ ಅಭಿಪ್ರಾಯ ಭೇದಗಳನ್ನು ಸರಿ ಮಾಡಿಕೊಳ್ಳುತ್ತೇವೆ ಎಂದರು.
ಉಡುಪಿಯಲ್ಲಿ ವಾಕ್ ಸ್ವಾತಂತ್ರ್ಯವೇ ಇಲ್ಲ
ಉಡುಪಿಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರ ಸ್ವಯಂ ಪ್ರೇರಣೆ ಕೇಸುಗಳ ಬಗ್ಗೆ ಮಾತನಾಡಿದ ಸುನಿಲ್ ಕುಮಾರ್, ಈ ಕಾಂಗ್ರೆಸ್ ಸರ್ಕಾರ ಮುಸಲ್ಮಾನರಿಗೆ ದೊಡ್ಡ ಬೆಂಬಲ ನೀಡುತ್ತಿದ್ದು, ಮುಸಲ್ಮಾನ ಸಂಘಟನೆಗಳು ಏನು ಮಾಡಿದರೂ ನಡೆಯುತ್ತದೆ. ಹಿಂದೂ ಸಂಘಟನೆಗಳು ಮನವಿ ಕೊಟ್ಟರೂ ಎಫ್‌ಐಆರ್ ಹಾಕುತ್ತಾರೆ. ಉಡುಪಿಯಲ್ಲಿ ವಾಕ್ ಸ್ವಾತಂತ್ರ್ಯವೇ ಇಲ್ಲ ಎಂಬಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.