ಕುಶಾಲನಗರ: ಗ್ರಾಹಕ ವಸ್ತುಗಳ ಪ್ರದರ್ಶನ, ಮಾರಾಟ ಮೇಳ

| Published : Sep 14 2025, 01:06 AM IST

ಸಾರಾಂಶ

ಗ್ರಾಹಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿತ್ತು. ಮಡಿಕೇರಿ ಶಾಸಕ ಡಾ. ಮಂತರ್‌ಗೌಡ ಪಾಲ್ಗೊಂಡು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಆಶ್ರಯದಲ್ಲಿ ಕುಶಾಲನಗರ ಎಸ್ಎಲ್ಎನ್ ಟೈಮ್ ಸ್ಕ್ವಯರ್ ಆವರಣದಲ್ಲಿ ಗ್ರಾಹಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಮಡಿಕೇರಿ ಕ್ಷೇತ್ರ ಶಾಸಕ ಡಾ ಮಂತರ್ ಗೌಡ ಪಾಲ್ಗೊಂಡ ಮಾತನಾಡಿ, ಸ್ಥಳೀಯ ಹಣಕಾಸು ವ್ಯವಸ್ಥೆಗೆ ಶಕ್ತಿ ತುಂಬುವ ವ್ಯಾಪಾರಿಗಳ ಅಭಿವೃದ್ಧಿಗೆ ಸರ್ಕಾರದ ಮೂಲಕ ಅಗತ್ಯ ಸಹಾಯ ಹಸ್ತ ಕಲ್ಪಿಸುವ ಭರವಸೆ ವ್ಯಕ್ತಪಡಿಸಿದರು.

ಗ್ರಾಹಕರಿಗೆ ಗುಣಮಟ್ಟದ ವಸ್ತುಗಳ ಪೂರೈಕೆ ಮಾಡುವಲ್ಲಿ ಪ್ರತಿಯೊಬ್ಬ ವರ್ತಕರು ಗಮನಹರಿಸಬೇಕು. ವ್ಯಾಪಾರಿಗಳ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಚೇಂಬರ್ ಆಫ್ ಕಾಮರ್ಸ್ ಸದಾ ಕಾರ್ಯ ನಿರ್ವಹಿಸುವಂತಾಗಲಿ ಎಂದು ಹೇಳಿದರು. ಮೇಳದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕ ಮಂತರ್ ಗೌಡ, ಪ್ರತಿ ವರ್ಷ ಹಬ್ಬದ ರೀತಿಯಲ್ಲಿ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಚಿಂತನೆ ಹರಿಸುವಂತೆ ಅವರು ಆಶಯ ವ್ಯಕ್ತಪಡಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ಅದ್ವೈತ್ ಹೋಂಡೈ ಮಾರುಕಟ್ಟೆ ವಿಭಾಗದ ನಿರ್ದೇಶಕರಾದ ಎಲ್ಎನ್ ಅಜಯ್ ಸಿಂಗ್ ಮಾತನಾಡಿ, ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ವರ್ತಕರು ನಿರಂತರ ವ್ಯಾಪಾರ ವಹಿವಾಟು ಮಾಡುವಂತಾಗಲಿ ಎಂದು ಮೇಳಕ್ಕೆ ಶುಭ ಕೋರಿದರು. ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಸ್ಥಾನೀಯ ಸಮಿತಿ ಅಧ್ಯಕ್ಷರಾದ ಕೆ ಎಸ್ ನಾಗೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಎಸ್ ಎಲ್ ಎನ್ ಗ್ರೂಪ್ ಮುಖ್ಯಸ್ಥರಾದ ವಿಶ್ವನಾಥನ್, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಗಂಗಾಧರ್ ನಾಯಕ್, ಚೇಂಬರ್ ಆಫ್ ಕಾಮರ್ಸ್ ಕೊಡಗು ಜಿಲ್ಲಾಧ್ಯಕ್ಷರಾದ ಬಿ ಆರ್ ನಾಗೇಂದ್ರ ಪ್ರಸಾದ್, ಮಾಜಿ ಅಧ್ಯಕ್ಷರಾದ ಎಸ್ ಕೆ ಸತೀಶ್, ಪ್ರಧಾನ ಕಾರ್ಯದರ್ಶಿ ಚಿತ್ರ ರಮೇಶ್, ನಿರ್ದೇಶಕರಾದ ರಂಗಸ್ವಾಮಿ ಉಪಸ್ಥಿತರಿದ್ದು ಮಾತನಾಡಿದರು.ಸ್ಥಾನೀಯ ಸಮಿತಿಯ ಖಜಾಂಚಿ ಎನ್ ವಿ ಬಾಬು ಸೇರಿದಂತೆ ಆಡಳಿತ ಮಂಡಳಿಯ ನಿರ್ದೇಶಕರು, ಸದಸ್ಯರು ಇದ್ದರು. ಮೇಳದಲ್ಲಿ ವಿವಿಧ ಕಂಪನಿಗಳ ದ್ವಿಚಕ್ರ, ಕಾರು ಮತ್ತಿತರ ವಾಹನಗಳ ಪ್ರದರ್ಶನ ಹಾಗೂ ಮಾರಾಟ ಸೇರಿದಂತೆ ವಿವಿಧ ರೀತಿಯ ನೂರಕ್ಕೂ ಅಧಿಕ ಮಳಿಗೆಗಳು ಗ್ರಾಹಕರನ್ನು ಆಕರ್ಷಿಸಿತು. ವೇದಿಕೆಯಲ್ಲಿ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಸಂದರ್ಭ ಶಾಸಕರು ಸೇರಿದಂತೆ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.