ಮಂಗಳೂರು: ದ.ಕ. ಜಿಲ್ಲಾಡಳಿತ, ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಮತ್ತು ಎಸ್‌ಡಿಎಂ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್ ಆಶ್ರಯದಲ್ಲಿ ಶನಿವಾರ ಎಸ್‌ಡಿಎಂ ಕಾನ್ಫರೆನ್ಸ್ ಹಾಲ್‌ನಲ್ಲಿ ಗ್ರಾಹಕ ಸರ್ಟಿಫಿಕೆಟ್ ಕೋರ್ಸ್‌ನ ಪ್ರಶಸ್ತಿ ಪ್ರದಾನ ಹಾಗೂ ಪ್ರಮಾಣಪತ್ರ ವಿತರಣೆ ಸಮಾರಂಭ ನಡೆಯಿತು.
ಪ್ರಶಸ್ತಿ ಮತ್ತು ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶೆ ಜೈಬುನ್ನೀಸಾ, ಕಾಲೇಜು ವಿದ್ಯಾರ್ಥಿಗಳು ಗ್ರಾಹಕ ಸಂಬಂಧಿಸಿದ ಮಾಹಿತಿಗಳನ್ನು ಪಡೆಯುವುದರೊಂದಿಗೆ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಅಗತ್ಯ ಬಹಳ ಇದೆ. ಸಾರ್ವಜನಿಕರಿಗೆ ಮಾಹಿತಿಯನ್ನು ಕಾಲೇಜು ವಿದ್ಯಾರ್ಥಿಗಳು ತಲುಪಿಸುವುದರಿಂದ ಹೆಚ್ಚಿನ ಪ್ರಯೋಜನ ಸಾಮಾನ್ಯರಿಗೆ ಲಭಿಸಲು ಸಾಧ್ಯವಿದೆ. ಒಕ್ಕೂಟ ಇಷ್ಟೊಂದು ಹೆಚ್ಚಿನ ವಿದ್ಯಾರ್ಥಿಗಳಿಗೆ ಗ್ರಾಹಕ ಮಾಹಿತಿಯನ್ನು ನೀಡುತ್ತಿರುವುದು ಸಂತಸಕರ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.ಕರ್ಣಾಟಕ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ರಾಜಾ ಮಾತನಾಡಿ, ಗ್ರಾಹಕ ಮಾಹಿತಿಯ ಪ್ರಯೋಜನ ಪ್ರತಿಯೊಬ್ಬರಿಗೂ ಲಭಿಸುವಂತಾಗಬೇಕು. ಬ್ಯಾಂಕಿನಲ್ಲಿಯೂ ಕೂಡ ಒಂಬುಡ್ಸ್‌ಮನ್ ಮೂಲಕ ಸಾಕಷ್ಟು ಪ್ರಾಮಾಣಿಕತೆಗೆ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು. ಎಸ್‌ಡಿಎಂ ಕಾಲೇಜು ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್ ಪ್ರಾಂಶುಪಾಲ ಡಾ. ಭಾನುಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಒಕ್ಕೂಟದ ಅಧ್ಯಕ್ಷ ಸುನಂದ ಕುಂಬಳೆ, ಕಾರ್ಯದರ್ಶಿ ಸುನಂದ ದಂಡೆಕೋಡೆ, ಗೌರವಾಧ್ಯಕ್ಷ ಎಂಜೆ ಸಾಲಿಯಾನ್, ಉಪಾಧ್ಯಕ್ಷ ಎಡ್ವೀನ್ ಡಿ ಮೆಲ್ಲೊ ಇದ್ದರು.