ವಸ್ತುಗಳನ್ನು ಖರೀದಿಸುವ ಮುನ್ನ ಗ್ರಾಹಕರು ಎಚ್ಚರವಹಿಸಿ

| Published : Jan 03 2024, 01:45 AM IST

ವಸ್ತುಗಳನ್ನು ಖರೀದಿಸುವ ಮುನ್ನ ಗ್ರಾಹಕರು ಎಚ್ಚರವಹಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಆ ವಸ್ತುವಿನ ಎಂ.ಆರ್.ಪಿ, ಪ್ರಮಾಣ, ದಿನಾಂಕ ಇವುಗಳ ಬಗ್ಗೆ ಗಮನಹರಿಸುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎಚ್. ಚನ್ನೆಗೌಡ ಸಲಹೆ ನೀಡಿದರು.

ರಾಷ್ಟ್ರೀಯ ಗ್ರಾಹಕರ ದಿನಾಚರಣೆ 2023 ಕಾರ್ಯಕ್ರಮ ಆಯೋಜನೆ । ಗ್ರಾಹಕರಿಗೆ ಚನ್ನೇಗೌಡ ಸಲಹೆ

ಕನ್ನಡಪ್ರಭ ವಾರ್ತೆ ರಾಮನಗರ

ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಆ ವಸ್ತುವಿನ ಎಂ.ಆರ್.ಪಿ, ಪ್ರಮಾಣ, ದಿನಾಂಕ ಇವುಗಳ ಬಗ್ಗೆ ಗಮನಹರಿಸುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎಚ್. ಚನ್ನೆಗೌಡ ಸಲಹೆ ನೀಡಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ 2023 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಹಕರು ಪ್ಯಾಕೇಟ್ ಗುಣಮಟ್ಟವನ್ನು ಪರಿಶೀಲಿಸಬೇಕು. ಪ್ಯಾಕೇಟ್ ಒಳಗಿನ ಪದಾರ್ಥಗಳ ವಿವರಗಳನ್ನು ಆ ಪ್ಯಾಕೇಟ್ ಮೇಲೆ ಮುದ್ರಿಸಿರಬೇಕು. ಗ್ರಾಹಕರು ತಾವು ಖರೀದಿಸಿರುವ ವಸ್ತುವಿನಲ್ಲಿ ಗುಣಮಟ್ಟ ಇಲ್ಲದಿದ್ದರೆ ಗ್ರಾಹಕರ ನ್ಯಾಯಾಲಯಕ್ಕೆ ಹೋಗಬಹುದು ಎಂದರು.

ಗ್ರಾಹಕರು ಖರೀದಿಸಿದ ವಸ್ತುವಿನಲ್ಲಿ ಅನ್ಯಾಯ ಕಂಡುಬಂದಲ್ಲಿ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಗ್ರಾಹಕರ ನ್ಯಾಯಾಲಯಗಳಿವೆ ಅಲ್ಲಿ ಅರ್ಜಿ ಸಲ್ಲಿಸಿ ಪರಿಹಾರವನ್ನು ಪಡೆದುಕೊಳ್ಳಬಹುದು. ಗ್ರಾಹಕರ ಸೇವೆಯಲ್ಲಿ ಧಕ್ಕೆ ಉಂಟಾದಾಗ ಆ ವ್ಯಕ್ತಿಗೆ ಕಾನೂನು ಸೇವೆಯನ್ನು ಉಚಿತವಾಗಿ ಪಡೆಯಬಹುದು ಎಂದು ತಿಳಿಸಿದರು.

ಗ್ರಾಹಕರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಬೇಕು. ನಾವು ಡಿಜಿಟಲ್ ಯುಗಕ್ಕೆ ಕಾಲಿಟ್ಟಿದ್ದೇವೆ. ಗ್ರಾಹಕರಿಗೆ ವಸ್ತುವನ್ನು ಗುಣಮಟ್ಟದಲ್ಲಿ ಸುರಕ್ಷತೆ ನೀಡಬೇಕು. ಗ್ರಾಹಕರು ವಸ್ತುವಿನ ಗುಣಮಟ್ಟವನ್ನು ಪರಿಶೀಲಿಸಿ ಖರೀದಿಸಬೇಕು ಎಂದರು.

ಗ್ರಾಹಕರು ಖರೀದಿಸುವ ವಸ್ತುಗಳ ಕುರಿತು ಜಾಹೀರಾತುಗಳು ನೀಡುವಾಗ ಎಚ್ಚರಿಕೆಯಿಂದ ನೀಡಬೇಕು. ಇದರಲ್ಲಿ ಸಮಸ್ಯೆ ಕಂಡು ಬಂದರೆ ಕಾನೂನು ರೀತಿಯ ಶಿಕ್ಷೆ ವಿಧಿಸಲಾಗುತ್ತದೆ. ಇಂತಹ ಜಾಹೀರಾತಿನಿಂದ ಗ್ರಾಹಕರಿಗೆ, ಸಾರ್ವಜನಿಕರಿಗೆ ಹಾನಿ ಅಥವಾ ದುಷ್ಪರಿಣಾಮಗಳು ಉಂಟಾಗುತ್ತದೆಯೇ ಎಂಬುದನ್ನು ಪರಿಶೀಲಿಸಿ ಮಾಲೀಕರು ಜಾಹೀರಾತು ನೀಡಬೇಕು ಎಂದು ಎಚ್. ಚನ್ನೆಗೌಡ ತಿಳಿಸಿದರು.

ಬೆಂಗಳೂರು ಗ್ರಾಹಕರ ಮಾಹಿತಿ ಕೇಂದ್ರದ ಕ್ರಿಯೇಟ್ ಸಂಸ್ಥೆಯ ಅಧ್ಯಕ್ಷ ವೈ.ಜಿ ಮುರುಳೀಧರನ್ ಅವರು ಇ-ಕಾಮರ್ಸ್ ಮತ್ತು ಡಿಜಿಟಲ್ ವ್ಯಾಪಾರದ ಯುಗದಲ್ಲಿ ಗ್ರಾಹಕರ ರಕ್ಷಣೆ ಕುರಿತು ಅರಿವು ಮೂಡಿಸಿದರು.

ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ವೈ.ಎಸ್. ತಮ್ಮಣ್ಣ, ಮಹಿಳಾ ಸದಸ್ಯ ರೇಣುಕಾದೇವಿ ದೇಶಪಾಂಡೆ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕಿ ಸಿ.ಆರ್. ರಮ್ಯಾ, ಕಾನೂನು ಮಾಪನ ಶಾಸ್ತ್ರದ ಇಲಾಖೆಯ ಸಹಾಯಕ ನಿಯಂತ್ರಕ ಲೋಕೇಶ್, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಅಧ್ಯಕ್ಷರು ಹಾಗೂ ಜಿಲ್ಲಾ ಗ್ರಾಹಕ ರಕ್ಷಣಾ ಪರಿಷತ್‌ನ ಸದಸ್ಯ ಡಾ. ಕೆ.ಎಸ್. ಮಂಜುನಾಥ್, ಜಿಲ್ಲಾ ಗ್ರಾಹಕ ರಕ್ಷಣಾ ಪರಿಷತ್‌ನ ಸದಸ್ಯ ಚಂದ್ರಯ್ಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಶೈಲಜಾ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.